Kundapra.com ಕುಂದಾಪ್ರ ಡಾಟ್ ಕಾಂ

ತಮ್ಮದೇ ಅಸ್ಥಿತ್ವ ರೂಪಿಸಿಕೊಳ್ಳುವುದು ಕುಂದಾಪ್ರ ಮಣ್ಣಿನ ಗುಣ: ಶಾಸಕ ಗುರುರಾಜ ಗಂಟಿಹೊಳೆ

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ನೇತೃತ್ವದಲ್ಲಿ ಆಯೋಜಿಸಲಾದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿಶ್ವದೆಲ್ಲೆಡೆ ನೆಲೆಸಿರುವ ಕುಂದಾಪ್ರ ಕನ್ನಡಿಗರು ತಮ್ಮದೇ ಅಸ್ಥಿತ್ವ ಉಳಿಸಿಕೊಳ್ಳುವುದರ ಜೊತೆಗೆ ಎಲ್ಲರಿಗೂ ಬೇಕಾಗುವ ವ್ಯಕ್ತಿಯಾಗಿ ಬೆಳೆದಿದ್ದಾರೆ. ಇದು ಕುಂದಾಪುರ ಮಣ್ಣಿನ ತಾಕತ್ತು. ಆಧುನಿಕರಣದ ಭರಾಟೆಯಲ್ಲಿ ಭಾಷೆ – ಸಂಸ್ಕೃತಿ ನಾಶವಾಗುತ್ತದೆ ಎಂಬ ಆತಂಕದ ನಡುವೆಯೂ ಯುವ ಜನತೆ ಮತ್ತೆ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕೆಲಸದಲ್ಲಿ ತೊಡಗಿಕೊಂಡಿರುವುದು ಶ್ಲಾಘನಾರ್ಹ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಅವರು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಸೋಮವಾರ ಆನ್ಲೈನ್ ಮೂಲಕ ಹಮ್ಮಿಕೊಳ್ಳಲಾದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬೈಂದೂರು – ಕುಂದಾಪುರ ಭೌಗೋಳಿಕ ಪ್ರದೇಶ ದೈವದತ್ತವಾದ ಕೊಡುಗೆ. ಇಲ್ಲಿನ ಬದುಕು, ಭಾಷೆ, ಸಂಸ್ಕೃತಿ, ಸಂಪ್ರದಾಯಗಳೆಲ್ಲವೂ ಭಿನ್ನವಾಗಿದೆ. ಭೌಗೋಳಿಕವಾಗಿ ಇರುವ ಸಮಸ್ಯೆಗಳ ನಡುವೆಯೂ ಸಂತಸದ ಬದುಕು ಕಟ್ಟಿಕೊಂಡಿದ್ದೇವೆ. ಇಲ್ಲಿನ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ನಿವಾರಣೆ ಜೊತೆಗೆ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುವುದು. ಬದುಕು ಕಟ್ಟಿಕೊಳ್ಳಲು ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಎಲ್ಲರೂ ಸಂಘಟನೆಯ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ನಮ್ಮ ಕುಂದಾಪ್ರ ಕನ್ನಡ ಬಳಗದ ಪೋಷಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಭಾಷೆಯ ಮೇಲಿನ ಅಭಿಮಾನ ಹಾಗೂ ಭಾಷೆಯ ಉಳಿವಿನ ಕಾರಣಕ್ಕೆ ವಿಶ್ವದಾದ್ಯಂತ ಇರುವ ಕುಂದಾಪ್ರ ಕನ್ನಡಿಗರು ಒಂದಾಗಿದ್ದಾರೆ. ಬ್ರಹ್ಮಾವರದಿಂದ ಬೈಂದೂರು ತಾಲೂಕು ತನಕದ ಕುಂದಾಪ್ರ ಕನ್ನಡ ಭಾಷಿಕರು ಸದಾ ಒಂದಿಲ್ಲೊಂದು ಸಾಧನೆಯ ಮೂಲಕ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಹಿರಿಯ ವಕೀಲ ಎ.ಎಸ್.ಎನ್ ಹೆಬ್ಬಾರ್ ಅವರು ಮಾತನಾಡಿ, ಯಾವುದೇ ಭಾಷೆ ಇರಲಿ. ಅದರ ಬಳಕೆಯಿಂದ ಮಾತ್ರ ಉಳಿವು ಸಾಧ್ಯ. ಹಲವು ವರ್ಷಗಳಿಂದ ಕುಂದಾಪ್ರ ಕನ್ನಡವನ್ನೇ ಮಾತನಾಡುವ ಶಪಥ ಮಾಡಿ ಅದನ್ನೇ ಅನುಸರಿಸಿದ್ದೇನೆ. ಮೊದಲೆಲ್ಲಾ ಭಾಷೆಯ ಅಳಿವಿನ ಆತಂಕವಿತ್ತು. ಆದರೆ ಈಗೀನ ಚಿಕ್ಕ ಮಕ್ಕಳೆಲ್ಲಾ ಕುಂದಾಪ್ರ ಕನ್ನಡ ಬಳಸುತ್ತಿರುವುದನ್ನು ಕಂಡಾಗ ಸಂತೋಷವಾಗುತ್ತದೆ. ಭಾಷೆಯ ಅಭಿಮಾನ ಮೂಡಿಸುವ ಕೆಲಸ ಹೀಗೆಯೇ ಮುಂದುವರಿಯಲಿ ಎಂದು ಶುಭಹಾರೈಸಿದರು.

ಓಮಾನ್ ಪ್ರಧಾನಿ ಕಛೇರಿಯ ಪ್ರತಿನಿಧಿ ಭಾಗಿ:
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಓಮಾನ್ ಪ್ರಧಾನಿ ಕಛೇರಿಯ ಓಮಾನ್ ವಿಷನ್ 2040 ಕಮಿಟಿ ಸದಸ್ಯ ಹಾಗೂ ಕ್ರೀಡೆ, ಯುವ ಮತ್ತು ಸಂಸ್ಕೃತಿ ಇಲಾಖೆಯ ಇನ್ವೆಸ್ಟ್ಮೆಂಟ್ ಅಡ್ವೈಸರ್ ನಾದರ್ ನಸ್ಸದ್ ಅಹಮ್ಮದ್ ಅಲ್-ರೋಹ್ಯಾ ಭಾಗವಹಿಸಿ ಮಾತನಾಡಿ, ಕುಂದಾಪ್ರ ಕನ್ನಡ ದಿನಾಚರಣೆಗೆ ಶುಭಹಾರೈಸಿದ್ದಲ್ಲದೇ ಕುಂದಾಪ್ರ ಕನ್ನಡದ ವಾಕ್ಯಗಳನ್ನು ನಿರೂಪಕರೊಂದಿಗೆ ಪುನರುಚ್ಛರಿಸಿ ಕಾರ್ಯಕ್ರಮವನ್ನು ಶ್ಲಾಘಿಸಿದರು.

Watch Video Here – https://fb.watch/lTqcRCQSYt/

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಭ್ ಅಧ್ಯಕ್ಷ ಸಾದನ್ ದಾಸ್ ಪ್ರಾಸ್ತಾವಿಕ ಮಾತುಗಳನ್ನಾಡಿ, ನಮ್ಮ ಊರು, ಭಾಷೆ ಸಂಸ್ಕೃತಿಗೆ ಕೊಡುಗೆ ಸಲ್ಲಿಸುವ ಉದ್ದೇಶದಿಂದ ಆರಂಭವಾದ ಸಂಸ್ಥೆ, ಹತ್ತಾರು ಸಾಮಾಜಿಕ ಕಾರ್ಯಗಳನ್ನು ತೊಡಗಿಕೊಂಡಿದೆ. ವಿದೇಶಕ್ಕೆ ಉದ್ಯೋಗಕ್ಕಾಗಿ ಬರುವ ಯುವಕರು ಹಾಗೂ ವಿದೇಶದಲ್ಲಿ ಸಂಕಷ್ಟದಲ್ಲಿರುವ ಕುಂದನಾಡಿನ ಜನರಿಗೆ ನೆರವು ನೀಡಲಾಗಿದೆ. ಊರಿನಲ್ಲಿಯೂ ಜನರಿಗೆ ಉತ್ತಮ ಆರೋಗ್ಯ ಸೇವೆ, ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಪ್ರಪಂಚದ ಎಲ್ಲೆಡೆಯೂ ಇರುವ ಕುಂದಗನ್ನಡಿಗರು ಒಟ್ಟಾಗಿ ಈ ನೆಲೆಯಲ್ಲಿ ಶ್ರಮಿಸಬೇಕಿದೆ ಎಂದರು.

ಇದನ್ನೂ ಓದಿ: ► ಕುಂದಾಪ್ರ ಡಾಟ್ ಕಾಂ & ಕುಂದ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ – https://kundapraa.com/?p=67728 .

ಕಾರ್ಯಕ್ರಮದಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗದ ಕಾಳವಾರ ಮಹಾಪೋಷಕ ವರದರಾಜ ಶೆಟ್ಟಿ, ಮಹಾಪೋಷಕ ಮಣೆಗಾರ್ ಮೀರಾನ್ ಸಾಹೇಬ್, ಉಪಾಧ್ಯಕ್ಷ ದಿನೇಶ್ ದೇವಾಡಿಗ ನಾಗೂರು, ಬೈಂದೂರು ರೋಟರಿ ಅಧ್ಯಕ್ಷ ಪ್ರಸಾದ್ ಪ್ರಭು, ಶಿಕ್ಷಕ ಹಾಗೂ ಸಾಹಿತಿಗಳಾದ ನರೇಂದ್ರ ಕುಮಾರ್ ಕೋಟ, ಕವಿಗಳಾದ ಪುಂಡಲೀಕ ಪೂಜಾರಿ, ಪುಂಡಲೀಕ ನಾಯಕ್, ಬರಹಗಾರರಾದ ನರೇಂದ್ರ ಗಂಗೊಳ್ಳಿ, ನಿವೃತ್ತ ಸೈನಿಕ ಚಂದ್ರಶೇಖರ ನಾವಡ, ಜನಪದ ಪರಿಷತ್ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉದ್ಯಮಿಗಳಾದ ಮುಂಬೈನಿಂದ ಸುಧಾಕರ ಅರಾಟೆ, ದೆಹಲಿಯಿಂದ ಮಹಾಬಲ ದೇವಾಡಿಗ, ಸಮಾಜ ಸೇವಕ ವಿನಯಚಂದ್ರ, ಜಾಯ್ ಜೆ. ಕರ್ವಾಲೋ, ಸುಮನ ಹೇರ್ಳೆ, ಗೀತಾ ಬೈಂದೂರು ಸಾಲಿಗ್ರಾಮ, ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ನಮ್ಮ ಕುಂದಾಪ್ರ ಕನ್ನಡ ಬಳಗದ ಕತಾರ್ ಪ್ರತಿನಿಧಿ ಸುಬ್ರಹ್ಮಣ್ಯ ಹೆಬ್ಬಾಗಿಲು, ಓಮನ್ ಪ್ರತಿನಿಧಿಗಳಾದ ರಮಾನಂದ ಪ್ರಭು, ಮಸ್ಕತ್ ಪ್ರತಿನಿಧಿ ಸುರೇಂದ್ರ ಶೆಟ್ಟಿ, ಕೆ.ಎಸ್.ಎ ರಿಯದ್ ಪ್ರತಿನಿಧಿ ಸಂತೋಷ್ ಶೆಟ್ಟಿ, ರಾಘವೇಂದ್ರ ಕಂಬ್ಳು, ಪತ್ರಕರ್ತ ಅರುಣ್ ಕುಮಾರ್ ಶಿರೂರು, ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಕಲಾವಿದರುಗಳಿಂದ ಆನ್ಸೈಲ್ ಮೂಲಕವೇ ಹಾಡು, ನೃತ್ಯ, ರಂಗ ಪ್ರದರ್ಶಗಳು ನಡದವು.

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಭ್ ಕಾರ್ಯದರ್ಶಿ ಸುಧಾಕರ ಪೂಜಾರಿ ಸ್ವಾಗತಿಸಿ, ಖಜಾಂಚಿ ಸುಜಿತ್ ಶೆಟ್ಟಿ ವಂದಿಸಿದರು. ಸದಸ್ಯರಾದ ವಿಘ್ನೇಶ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ದೇವಾಡಿಗ ತಾಂತ್ರಿಕ ನಿರ್ವಹಣೆ ಮಾಡಿದರು. ಕುಂದಾಪ್ರ ಡಾಟ್ ಕಾಂ ನ್ಯೂಸ್ ಪೋರ್ಟೆಲ್ ಮೂಲಕ ಕಾರ್ಯಕ್ರಮ ಪ್ರಸಾರವಾಯಿತು.

Exit mobile version