Kundapra.com ಕುಂದಾಪ್ರ ಡಾಟ್ ಕಾಂ

ಆನ್‌ಲೈನ್ ವಂಚನೆ: ಸಿಬಿಐ ಅಧಿಕಾರಿ ಹೆಸರಲ್ಲಿ ಕುಂದಾಪುರದ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಿಬಿಐ ಆಫೀಸರ್ ಎಂದು ಹೇಳಿಕೊಂಡು ವ್ಯಕ್ತಿಯನ್ನು ವಂಚಿಸಿದ ಪ್ರಕರಣ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ನಿವಾಸಿ ಪ್ರವೀಣ್  ಕುಮಾರ್ ವಂಚನೆಗೊಳಗಾದವರು. ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ಅ.19ರಂದು ಇವರ ಸಂಚಾರಿ ದೂರವಾಣಿಗೆ ಕರೆ ಬಂದಿದ್ದು ನಿಮ್ಮ ಸಂಚಾರಿ ದೂರವಾಣಿ ಸಂಖ್ಯೆಯನ್ನು 2 ಗಂಟೆಯೊಳಗೆ ಸ್ಥಗಿತಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ 9 ಪ್ರೆಸ್ ಮಾಡುವಂತೆ ತಿಳಿಸಿದ ಮೇರೆಗೆ ಪ್ರೆಸ್ ಮಾಡಿದ್ದಾರೆ. ಕೂಡಲೇ ಅದು ಬೇರೆಯವರಿಗೆ ಕನೆಕ್ಟ್ ಆಗಿದೆ. ಅವರು ನಿಮ್ಮ ಆಧಾರ್ ಕಾರ್ಡ್ ಪ್ರಾಡ್ ಆಗಿದೆ ಎಂದು ತಿಳಿಸಿ ಕೂಡಲೇ ಸಿಬಿಐ ಲೋಗೊ ನಂಬರ್‌ನಿಂದ ಕರೆಮಾಡಿ ಸಿಬಿಐ ಆಫೀಸರ್ ಎಂದು ಹೇಳಿಕೊಂಡು ಮನಿ ಲ್ಯಾಂಡರಿಂಗ್‌ನಲ್ಲಿ ನಿಮ್ಮ ಮೇಲೆ ಕೇಸ್ ಆಗಿದ್ದು ನಿಮ್ಮ ದಾಖಲೆ ತೋರಿಸಿ ಎಂದಿದ್ದಾರೆ. ಅದರಂತೆ ಆಧಾರ್ ಕಾರ್ಡ್, ಪಾಸ್‌ ಪುಸ್ತಕ, ಪಾನ್‌ ಕಾರ್ಡ್ ಗಳನ್ನು ಇವರು ತೋರಿಸಿದ್ದಾರೆ.

ಅರ್ಧಗಂಟೆಯ ನಂತರ ಕೆನರಾ ಬ್ಯಾಂಕ್‌ನ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ಸಾಬೀತಾಗಿದೆ. ಇದರ ಬಗ್ಗೆ ನಿಮ್ಮ ಮೇಲಿನ ಕೇಸ್ ಹಿಂಪಡೆಯ ಬೇಕಾದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ಆರ್‌ಟಿಜಿಎಸ್ ಫಾರಂನಲ್ಲಿ 3.80 ಲಕ್ಷ ಬರೆದು ಕಳುಹಿಸಿಕೊಡುವಂತೆ ಈ ಹಣ ಪರಿಶೀಲಿಸಿ ಅದು ಸಾಚಾ ಹಣವಾದಲ್ಲಿ ಮರು ಜಮೆ ಮಾಡ ಲಾಗುವುದೆಂದು ವಾಟ್ಸಾಪ್ ಮೂಲಕ ಖಾತೆ ನಂಬರ್ ಕಳುಹಿಸಿದ್ದಾನೆ.

ಅದರಂತೆ ಪ್ರವೀಣ್ ಕೆನರಾ ಬ್ಯಾಂಕ್ ಖಾತೆಯಿಂದ 3.80 ಲಕ್ಷ ರೂ. ಆರ್‌ಟಿಜಿಎಸ್ ಮಾಡಿದ್ದಾರೆ. ನಂತರ ಆತ ವಾಟ್ಸಾಪ್ ವಿಡಿಯೊ ಕಾಲ್ ಮಾಡಿ ನಿಮ್ಮ ಇನ್ನೊಂದು ಬ್ಯಾಂಕ್‌ಗೆ ಹೋಗಿ ಹಣವನ್ನು ವರ್ಗಾವಣೆ ಮಾಡುವಂತೆ ತಿಳಿಸಿದಾಗ ಅನುಮಾನಗೊಂಡು ಸ್ಥಳೀಯ ಪೊಲೀಸರಿಗೆ ತಿಳಿಸುತ್ತೇನೆ ಎಂದಾಗ ಪೊಲೀಸರು ಏನು ಮಾಡುತ್ತಾರೆ ಎಂದು ಉಡಾಫೆಯಿಂದ ಉತ್ತರ ನೀಡಿದ್ದಾನೆ. ಸಿಬಿಐ ಆಫೀಸರ್ ಎಂದು ಹೇಳಿಕೊಂಡು 3.80 ಲಕ್ಷ ರೂ. ವಂಚಿಸಿದ್ದಾನೆ ಎಂದು ಪ್ರವೀಣ್ ಕುಮಾರ್ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version