Site icon Kundapra.com ಕುಂದಾಪ್ರ ಡಾಟ್ ಕಾಂ

ಎಂ. ರಾಮಚಂದ್ರ ಸಂಸ್ಮರಣೆಯ ಪ್ರಶಸ್ತಿಗೆ ನರೇಂದ್ರ ಕುಮಾರ್ ಕೋಟ ಅವರು ಆಯ್ಕೆ

ಕುಂದಾಫ್ರ ಡಾಟ್‌ ಕಾಂ ಸುದ್ದಿ.
ಕೋಟ:
ಕಾರ್ಕಳದಲ್ಲಿ ಸಾಹಿತ್ಯ ಸಂಘವನ್ನು ಸ್ಥಾಪಿಸಿ ನಾಡಿನ ಪ್ರಸಿದ್ಧ ಸಾಹಿತಿಗಳನ್ನು ಕಾರ್ಕಳಕ್ಕೆ ಕರೆತಂದ ಹಿರಿಮೆಯನ್ನು ಹೊಂದಿರುವ ಎಂ. ರಾಮಚಂದ್ರ ಅವರು ಕನ್ನಡದ ಪರಿಚಾರಕರಾಗಿ ಪ್ರಸಿದ್ದರಾದವರು.

ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ ಸಹೃದಯರ ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿರುವ ಇವರ ಸವಿ ನೆನಪಿನಲ್ಲಿ ಅವರ ಮಡದಿ ಶ್ರೀಮತಿ ಶಾರದಾ ರಾಮಚಂದ್ರ ಮತ್ತು ಮಕ್ಕಳು ಕನ್ನಡ ನಾಡು – ನುಡಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಓರ್ವರಿಗೆ ಪ್ರತಿ ವರ್ಷವೂ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದು ಈ ವರ್ಷದ ಪ್ರಶಸ್ತಿಗೆ ಸಾಹಿತಿ ಹಾಗೂ ಶ್ರೇಷ್ಠ ಸಾಹಿತ್ಯ ಸಂಘಟಕರಾಗಿರುವ ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು ಆಯ್ಕೆಯಾಗಿದ್ದಾರೆ.

’ಉಸಿರು’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಕಳೆದ 25 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದವರು. ಎಳೆಯ ಮಕ್ಕಳಲ್ಲಿ ಕನ್ನಡದ ಪ್ರೀತಿ ಮತ್ತು ಸಾಹಿತ್ಯ ರಚನೆಯ ಅಭಿರುಚಿಯನ್ನು ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಲ್ಲದೆ ಅವರು ಬರೆದಿರುವ ಅನೇಕ ಕೃತಿಗಳನ್ನು ತಮ್ಮ ಸಂಸ್ಥೆಯ ಮೂಲಕ ಪ್ರಕಟಿಸಿದ್ದಾರೆ. ತಮ್ಮ ಬರೆಹ ಮತ್ತು ಕಾರ್ಯಚಟುವಟಿಕೆಗಳಲ್ಲಿ ಹೊಸತನಕ್ಕೆ ಪ್ರಾಮುಖ್ಯತೆ ಕೊಡುವ ಇವರು ಇಪ್ಪತ್ತಾರು ವೈವಿಧ್ಯಮಯ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ನೆನಪು ಮೂವೀಸ್ ಕೋಟದ ಮೂಲಕ ರಾಜ್ಯ ಪ್ರಶಸ್ತಿ ಪಡೆದ ಸುಗಂಧಿ ಮಕ್ಕಳ ಚಲನಚಿತ್ರವನ್ನು ನಿರ್ಮಿಸಿದ್ದಾರೆ.

ಅತ್ಯುತ್ತಮ ಸಂಘಟಕರಾಗಿರುವ ಇವರು ಜಿಲ್ಲಾ ಹಾಗೂ ರಾಜ್ಯಮಟ್ಟದ ಅನೇಕ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸಿದ್ದಲ್ಲದೆ ಐದು ಕುಂದಾಪ್ರ ಕನ್ನಡ  ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿದ ಹೆಗ್ಗಳಿಕೆ ಇವರದ್ದು. ಬಹುಮುಖ ಪ್ರತಿಭಾವಂತರಾಗಿ ರಾಜ್ಯಮಟ್ಟದ  ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪಡೆದ ಇವರ ನಿಷ್ಠೆಯ ಕನ್ನಡ ಪರಿಚಾರಿಕೆಗಾಗಿ ಅರ್ಹವಾಗಿಯೇ ಈ ಸಾಲಿನ ಎಂ ರಾಮಚಂದ್ರ ಸಂಸ್ಮರಣಾ ಪ್ರಶಸ್ತಿಯನ್ನು ಜೂನ್ 5 ರಂದು ಕಾರ್ಕಳದ ಪ್ರಕಾಶ್ ಹೋಟೆಲ್‌ನ ಸಂಭ್ರಮ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದೆಂದು ಸಾಹಿತ್ಯ ಸಂಘ ಕಾರ್ಕಳ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version