Kundapra.com ಕುಂದಾಪ್ರ ಡಾಟ್ ಕಾಂ

ವಿಶ್ವೇಶ್ವರ ಭಟ್ಟರ ‘ವಿಶ್ವವಾಣಿ’ಗೆ ಕುಂದಾಪುರದಲ್ಲಿ ಮೊದಲ ಪ್ರಚಾರ!

ಕುಂದಾಪ್ರ ಡಾಟ್ ಕಾಂ ಸುದ್ದಿ.

ವಿಭಿನ್ನವಾದ ಯೋಚನೆ ಹಾಗೂ ಬರಹದ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೊಂದು ಹೊಸ ಆಯಾಮ ದೊರಕಿಸಿಕೊಟ್ಟವರಲ್ಲಿ ಸ್ಟಾರ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಹೆಸರು ದೊಡ್ಡದು. ತನ್ನ ನಡೆ ನುಡಿಯಿಂದಲೇ ಸದ್ದು ಮಾಡುವ ಭಟ್ಟರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಸುದ್ದಿಗೆ ಗುದ್ದು ನೀಡುವ ಹೊಸ ಸಾಹಸದೊಂದಿಗೆ! ಪತ್ರಿಕೆಗಳ ಬೆಲೆ ಗಗನಕ್ಕೇರುತ್ತಿದ್ದ ಕಾಲದಲ್ಲಿ, ಪತ್ರಿಕೆಗಳೆಂದರೆ ಹೀಗೆ ಮಾತ್ರ ಇರಬೇಕು ಎಂದು ಅಜ್ಜ ನೆಟ್ಟ ಆಲದ ಮರಕ್ಕೆ ನೇತು ಬಿದ್ದು ಹೊಸತನಕ್ಕೆ ಮಂಕು ಹಿಡಿಸಿ ಕುಳಿತಿದ್ದ ಹೊತ್ತಿನಲ್ಲಿ ಸಾಮಾನ್ಯನಿಗೂ ಪತ್ರಿಕೆ ದೊರಕುವ ಮತ್ತು ಓದುಗನಲ್ಲಿ ದಿನವೂ ಅಷ್ಟೇ ಪ್ರೀತಿಯಿಂದ ಪತ್ರಿಕೆಯನ್ನು ಸ್ವಾಗತಿಸುವ ಗುಣವನ್ನು ಬೆಳೆಸಿದರು ಭಟ್ಟರು. ವಿಜಯ ಕರ್ನಾಟಕ ಆರಂಭಗೊಂಡಾಗ ಅವರ ಪ್ರಯೋಗಶೀಲತೆಗೆ ತೆರೆದುಕೊಂಡ ರೀತಿ ಬೆರಗು ಮೂಡಿಸಿತ್ತು. ಅದು ಅಂಕಿಅಂಶಗಳಲ್ಲಿ ಮಾತ್ರವೇ ಆಗಿರದೇ ಜನರ ಮನಸ್ಸಿನಲ್ಲಿಯೂ ನಂ.1 ಪತ್ರಿಕೆಯಾಗಿ ಉಳಿದಿತ್ತು. ತಾನೇ ಕಟ್ಟಿಬೆಳೆಸಿದ ಪತ್ರಿಕೆಯಿಂದ ಹೊರಬಂದ ಮೇಲೆ, ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿಯಲ್ಲಿ ಇದ್ದಷ್ಟೂ ದಿನ ಹೊಸ ಪ್ರಯೋಗಗಳಗೆ  ಒಗ್ಗಿಕೊಳ್ಳುತ್ತಾ ಬಂದ ಭಟ್ಟರು ಸದ್ದು ಮಾಡುವ ಪ್ರೌವೃತ್ತಿಯನ್ನೂ ಅಲ್ಲಿಯೂ ಮುಂದುವರಿಸಿದ್ದರು. ಈಗ ತನ್ನದೇ ಸಂಸ್ಥೆಯಡಿಯಲ್ಲಿ ತಮ್ಮದೇ ಪತ್ರಿಕೆ ಹಾಗೂ ಚಾನಲ್ ಆರಂಭಿಸಲು ತಯಾರಿ ನಡೆಸುತ್ತಿದ್ದಾರೆ. ಅಂದಹಾಗೇ ಇದೂ ಕೂಡ ಸುದ್ದಿಯಾಗುತ್ತಿದೆ. (ಕುಂದಾಪ್ರ ಡಾಟ್ ಕಾಂ ವರದಿ)

ಹೌದು ವಿಶ್ವಾಕ್ಷರ ಮೀಡಿಯಾ ಎಂಬ ಸಂಸ್ಥೆಯ ಮೂಲಕ ಮೊದಲಿಗೆ ‘ವಿಶ್ವವಾಣಿ’ ಹೆಸರಿನ ಪತ್ರಿಕೆ ಸದ್ಯದಲ್ಲೇ ನಿಮ್ಮ ಕೈಸೇರಲಿದೆ. ಭಟ್ಟರು ಕನ್ನಡಪ್ರಭದಿಂದ ಹೊರಬಂದಾಗ ಅವರ ಬರಹಗಳು ಮಿಸ್ ಆದವಲ್ಲ ಎಂದು ಬೇಸರಿಸಿಕೊಂಡ ಅವರ ಓದುಗರಲ್ಲಿ, ಇವರ ಸುಮ್ಮನೆ ಕೂರುವವರಲ್ಲ. ಹೊಸದೇನೋ ಆರಂಭಿಸುತ್ತಾರೆ ಎಂಬ ಆಶಾಭಾವವೂ ಮೂಡಿತ್ತು. ಅದು ಕೊನೆಗೂ ಅದು ನಿಜವಾಗುತ್ತಿದೆ. ವಿಶ್ವಾಕ್ಷರದ ವಿಶ್ವೇಶ್ವರ ಭಟ್ಟರ ಸಾರಥ್ಯದಲ್ಲಿ ವಿಶ್ವವಾಣಿ ಬರುತ್ತಿದೆ. ಆರಂಭದಿಂದಲೂ ಸಾಮಾಜಿಕ ತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಭಟ್ಟರು ಮತ್ತವರ ಟೀಂ ತಮ್ಮ ಕ್ರೀಯಾಶೀಲತೆಯನ್ನು ಇಲ್ಲಿಯೂ ಮುಂದುವರಿಸಿದ್ದಾರೆ. ಭಿನ್ನ ಭಿನ್ನವಾದ ಪೋಸ್ಟ್ ಗಳನ್ನು ಹಾಕುವ ಮೂಲಕ ಓದುಗರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

ಕುಂದಾಪುರದಲ್ಲಿ ವಿಶ್ವವಾಣಿ ಪ್ರಚಾರ!
ವಿಶ್ವೇಶ್ವರ ಭಟ್ಟರ ಪತ್ರಿಕೆ ವಿಶ್ವವಾಣಿಗೆ ಕುಂದಾಪುರದಲ್ಲೂ ಪ್ರಚಾರ ಆರಂಭಗೊಂಡಿದೆ! ಕುಂದಾಪುರದ ಚಿರಪರಿಚಿತ ಪತ್ರಿಕಾ ಏಜೆಂಟ್ ಶಂಕರಾಚಾರ್ಯ ಹಾಗೂ ಅವರೊಂದಿಗೆ ರಮೇಶ್ ಭಟ್ ತಮ್ಮ ಅಂಗಡಿ ಬಳಿ ಹಾಗೂ ಬೈಕಿಗೆ ತಮ್ಮ ಸ್ವಇಚ್ಛೆಯಿಂದ ವಿಶ್ವವಾಣಿಯ ಬ್ಯಾನರ್, ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ. ವಿಶ್ವವಾಣಿಯನ್ನು ಒಂದು ಬಗೆಯ ಕುತೂಹಲ ಮೂಡಿಸಿದೆ. ನಾವುಗಳೂ ಪತ್ರಿಕೆಯ ನಿರೀಕ್ಷೆಯಲ್ಲಿದ್ದೇವೆ. ಹಾಗಾಗಿ ಈ ಪ್ರಯತ್ನವೆಂದು ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಆರಂಭಕ್ಕೆ ಮುನ್ನವೇ ಸಾಕಷ್ಟು ಸುದ್ದಿಯಲ್ಲಿರುವ ವಿಶ್ವೇಶ್ವರ ಭಟ್ಟರ ವಿಶ್ವವಾಣಿ ಹೇಗೆ ತನ್ನ ನಾವಿನ್ಯತೆಯನ್ನು ಕಾಯ್ದುಕೊಳ್ಳಲಿದೆ? ಓದುಗರು ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆ ದಿನಗಳೂ ದೂರವಿಲ್ಲ!

– ಸುನಿಲ್ ಹೆಚ್. ಜಿ. ಬೈಂದೂರು



Exit mobile version