Kundapra.com ಕುಂದಾಪ್ರ ಡಾಟ್ ಕಾಂ

ಸಚಿವರ ನಿರೀಕ್ಷೆಯಲ್ಲಿ ಮೂರೂರು. ಊರಿನ ಸಮಸ್ಯೆಗಳು ನೂರಾರು

ಸಮಾಜ ಕಲ್ಯಾಣ ಸಚಿವ ಆಂಜನೇಯ ವಾಸ್ತವ್ಯಕ್ಕೆ ಸಕಲ ಸಿದ್ಧತೆ. ಸ್ಥಳದಲ್ಲೇ ಬೀಡು ಬಿಟ್ಟ ಅಧಿಕಾರಿಗಳು

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಗ್ರಾಮ ಮುರೂರು ರಾಜ್ಯ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ವಾಸ್ತವ್ಯದ ಕಾರಣದಿಂದಾಗಿ ಸುದ್ದಿಯಾಗುತ್ತಿದೆ. ಆದರೆ ನೂರಾರು ವರ್ಷಗಳಿಂದ ವಾಸವಿರುವ ಇಲ್ಲಿನ ಮೂಲ ನಿವಾಸಿಗಳ ಬದುಕು ಹಾಗೂ ಮೂಲ ಸೌಕರ್ಯಗಳ ಸ್ಥಿತಿಗತಿ ಒಂದಿಷ್ಟು ಬದಲಾಗಿಲ್ಲ.

ಭದ್ರವಿಲ್ಲದ ಸೂರು, ಸೋರುವ ಮಾಡು, ಶೌಚವಿಲ್ಲದ ಮನೆ, ಆಧುನಿಕ ತಂತ್ರಜ್ಞಾನದ ಬಾತ್‌ರೂಮ್! ವಿದ್ಯುತ್ ಎಲ್ಲದ ಮನೆ, ಕರೆಂಟಿದ್ದರೂ ತಪ್ಪದ ಗೋಳು, ಇದರೊಟ್ಟಿಗೆ ಹಕ್ಕುಪತ್ರ ಇಲ್ಲದ ಒಂದೆರಡು ಮನೆ, ಕೂಲಿ ಹೊಟ್ಟೆಪಾಡಿನ ದಾರಿ, ಕಣ್ಣು ಚಾ, ಸಾಸುವೆ ಬೇಕಿದ್ದರೂ ನಾಲ್ಕಾರು ಕಿ.ಮೀ ನಡೆಯುವ ಅನಿವಾರ್ಯತೆ. ಇದು ಮೂರೂರು ಕೊರಗ ಕಾಲನಿ ಯಥಾವತ್ ಚಿತ್ರಣ. ಮೂಲ ನಿವಾಸಿಗಳ ಸಂಪಕಷ್ಟದ ಬದುಕಿನ ಸಂಪೂರ್ಣ ಚಿತ್ರಣವೂ ಹೌದು.

[quote font_size=”14″ bgcolor=”#ffffff” bcolor=”#dd3333″ arrow=”yes” align=”right”]

ಜಿಲ್ಲೆಯಲ್ಲಿ ಮೂಲನಿವಾಸಿಗಳ ಸ್ಥಿತಿಗತಿ ಏನು?
ಜಿಲ್ಲೆಯಲ್ಲಿ 276 ಮೂಲನಿವಾಸಿಗಳು ಸ್ವಯಂ ಉದ್ಯೋಗಸ್ಥರಾಗಿದ್ದು, 297ಜನ ಸರಕಾರಿ ಉದ್ಯೋಗದಲ್ಲಿದ್ದಾರೆ. 366ಮಂದಿ ಖಾಸಗಿನ ಉದ್ಯೋಗಿಗಳು. 327 ಕೃಷಿ ಕುಟುಂಬಗಳಿದ್ದು, 1961 ಜನ ಬೇರೆ ಬೇರೆ ಕೆಲಸ ಮಾಡಿಕೊಂಡಿದ್ದಾರೆ.76 ಜನ ಪಿಂಚಣಿ ಪಡೆಯುತ್ತಿದ್ದು, 376 ಜನ ನಿರುದ್ಯೋಗಿಗಳು. 8260 ಜನ ಆಧಾರ್ ಕಾರ್ಡ್ ಲಿಂಗ್ ಹೊಂದಿದ್ದು, 6745 ಜನ ಬ್ಯಾಂಕ್ ಖಾತೆ ಹೊಂದಿದ್ದಾರೆ.1480 ಕುಟುಂಬ ಸ್ವಂತ ಜಾಗಹೊಂದಿದ್ದರೆ, 387 ಜನ ಸರಕಾರಿ ಸ್ಥಳದಲ್ಲಿ ವಾಸವಿದ್ದಾರೆ. 171 ಜನ ಖಾಸಗಿ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು ಎಸ್ಸಿಎಸ್ಟಿ55,897 ಸಾವಿರವಿದ್ದು, ಅದರಲ್ಲಿ 28,229 ಗಂಡಸರು, 26,669ಮಹಿಳೆಯರಿದ್ದಾರೆ. 14,133ಕೊರಗರಿದ್ದು, ಮಲೆಕುಡಿಯಾ 10,956 ಹಾಗೂ 30,808 ಮರಾಠಿ ಜನಾಂಗದವರಿದ್ದಾರೆ. [/quote]

ಬೈಂದೂರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕಂಬದಕೋಣೆಯಿಂದ ಬಲಕ್ಕೆ ಕೊಲ್ಲೂರು ಹೋಗುವ ಮಾರ್ಗದಿಂದಲೂ ಮೂರೂರು ಸೇರಬಹುದು. ಬೋಳಂಬಳ್ಳಿ ಮೂಲಕ ಮೂರೂರು ಸೇರಬಹುದಾಗಿದ್ದರೂ, ದಾರಿ ಪರಿಚಯವಿಲ್ಲದಿದ್ದರೆ ಕಾಡು ಪಾಲಾಗುವ ಅಪಾಯವಿದೆ! ನಾಲ್ಕಾರು ದಾರಿ ಬದಲಿಸಿ, ಕಾಡಿನ ನಡುವೆ ಹೋಗುವುದು ಸಾಹಸವೇ ಸರಿ. ಮೂರೂರು ಹಿಲ್ಕಲ್‌ಕಟ್ಟು ಹೊಳೆಗೆ ಸೇತುವೆ ಅರ್ಧಬರ್ಧ ಆಗಿದ್ದು, ಹೊಳೆ ದಾಟಿ, ಗುಡ್ಡ ಹತ್ತಿ ಮೂರೂರು ಸೇರಬೇಕು. ಆದರೆ ಕಾಲನಿ ನಡುವೆ ಸುಮಾರು 250 ಮೀಟರ್ ಸಿಮೆಂಟ್ ರಸ್ತೆ ಇರೋದು ಕಾಲನಿ ಹೆಗ್ಗಳಿಕೆ. ಇದು ಬಿಟ್ಟರೆ ಮುರೂರಿಗೆ ಮಣ್ಣಿನ ಕಚ್ಚಾ ರಸ್ತೆಗಳಲ್ಲಿ ತೆರಳುವುದೇ ಯಮಯಾತನೆ.  ಕುಂದಾಪ್ರ ಡಾಟ್ ಕಾಂ ವರದಿ.

ಬೈಂದೂರು-ಕೊಲ್ಲೂರು ರಾಜ್ಯ ಹೆದ್ದಾರಿ ಗೋಳಿಹೊಳೆ ಮೂಲಕ ವಾಹನದಲ್ಲಿ ಮೂರೂರು ಸೇರಬಹುದು. ಆದರೆ ಮೂರೂರಿಗೆ ಯಾವುದೇ ವಾಹನ ಸೌಲಭ್ಯ ಇಲ್ಲ. ರಾತ್ರಿಯಂತೂ ಮೂರೂರು ಸ್ಥಬ್ಧ. ವಾಹನ ಸಂಪರ್ಕಕ್ಕೆ ಸುಮಾರು ಐದು ಕೀಮೀ ನಡೆಯಬೇಕು. ಪಡಿತರ, ಇನ್ನಿತರ ರೇಷನ ಬೇಕಿದ್ದರೂ, ಅರೆಶಿರೂರು ತನಕ ನಡೆದು, ಗೋಳಿಹೊಳೆ ಮೂಲಕ ಕಾಲ್ತೋಡು ಸೇರಿ ಮತ್ತೆ ಮೂರೂರು ಸೇರಬೇಕು. ಇದಕ್ಕೆ ಮೂರೂರು ಕಾಲನಿ ನಿವಾಸಿಗಳು ಒಂದಿಡೀ ದಿನ ಖರ್ಚು ಮಾಡಬೇಕಾಗುತ್ತದೆ. ರಾತ್ರಿ ಸಮಯ ಯಾರಿಗಾದರೂ ಹುಷಾರು ತಪ್ಪಿದರೆ ಅವರ ಭಗವಂತನೇ ಕಾಯಬೇಕು. ಮಳೆಗಾದಲ್ಲಿ ಮೂರುರು ದಿಗ್ಬಂಧನಕ್ಕೆ ಸಿಕ್ಕರೆ ಶಾಲಾ ಮಕ್ಕಳಿಗೆ ಕಡ್ಡಾಯ ರಜೆ! ಇರುವ ಒಂದು ಸರಕಾರಿ ಶಾಲೆಯ ಕಟ್ಟಡವೂ ದುಸ್ಥಿತಿಯಲ್ಲಿದೆ.

ಹಿಲ್ಕಲ್‌ಕಟ್ಟು ಹೊಳೆಗೆ ಮೂರೂರು ಬಳಿ ನಿರ್ಮಿಸುತ್ತಿರುವ ಸೇತುವೆ ಸಂಪೂರ್ಣವಾದರೆ ಕಾಲ್ತೋಡು ಇನ್ನಷ್ಟ ಸನಿಹ. ಹಾಗೆ ಬೋಳಂಬಳ್ಳಿ, ಮೂರೂರು, ಅರೆಶಿರೂರು ಮೂಲಕ ವಾಹನ ಸಂಪರ್ಕಕ್ಕೆ ಅವಕಾಶವಿದ್ದು, ಸಚಿವರ ವಾಸ್ತವ್ಯ ನಂತರವಾದರೂ ಸೇತುವೆ ಸಂಪೂರ್ಣ ಆಗುತ್ತದಾ ಎನ್ನುವ ನಿರೀಕ್ಷೆಯಲ್ಲಿ ಕಾಲನಿ ವಾಸಿಗಳಿದ್ದಾರೆ. ಕೂಲಿಗೆ ಹೋಗಬೇಕಿದ್ದರೂ ಇವರು ಪ್ರತಿದಿನ ನಾಲ್ಕಾರು ಕೀಮೀ ನಡೆಯಬೇಕು. ಮೂರೂರು ಸೇತುವೆ ಆದರೆ ಕಾಲ್ತೋಡಿಗೆ ಕೇವಲ 9 ಕೀಮೀ. ಈಗ ಮೂರೂರು ವಾಸಿಗಳು 25 ಕೀಮಿ ಕ್ರಮಿಸಿ ಕಾಲ್ತೋಡು ಸೇರ ಬೇಕು. ಒಟ್ಟಾರೆ ಸಚಿವರ ವಾಸ್ತವ್ಯದಿಂದ ಭರವಸೆ ಗರಿಗೆದರಿದ್ದು, ನೂತನ ವರ್ಷದಲ್ಲಿ ಹೊಸ ಭರವಸೆಯಲ್ಲಿ ಸಚಿವರ ಆಹ್ವಾನಿಸಲು ಮೂರೂರು ಸಜ್ಜಾಗುತ್ತಿದೆ. ಹಲವು ಪ್ರಶ್ನೆಗಳಿವೆ, ಜ್ವಲಂತ ಸಮಸ್ಯೆಗಳ ಹಾಸುಹೊದ್ದ ಮಲಗಿದ್ದ, ಕಾಲನಿಗೆ ಮುಕ್ತಿ ಸಿಗುತ್ತಾ ಎನ್ನೋದು ಬೆಟ್ಟದಷ್ಟು ನಿರೀಕ್ಷೆ. ಕುಂದಾಪ್ರ ಡಾಟ್ ಕಾಂ ವರದಿ.

ಮೂರೂರು ಕೊರಗ ಕಾಲನಿ ಮೂಲ ನಿವಾಸಗಳು ಶತಶತಮಾನದಿಂದ ವಾಸಮಾಡಿಕೊಂಡು ಬಂದಿದ್ದಾರೆ. ಹಿಂದೆ ಕಾಡುತ್ಪತ್ತಿ ಜೇನು ಸಂಗ್ರಹಿಸಿ, ಜೀವನ ನಡೆಸುತ್ತಿದ್ದರು. ಮರ್ಲಿ ಕುಟುಂಬ ಕೂಡಾ ಇದೇ ವೃತ್ತ ಮುಂದುವರಿಸಿಕೊಂಡು ಬಂದಿದ್ದು, ಈಗ ಅವರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ.

ಮರ್ಲಿ ಪತಿ ನಿಧನ ಹೊಂದಿ ಹಲವಾರು ವರ್ಷ ಕಳೆದಿದೆ. ನಾಲ್ಕು ಗಂಡು ಮೂರು ಜನ ಹೆಣ್ಣುಮಕ್ಕಳಿದ್ದು, ಎಲ್ಲರಿಗೂ ಮದುವೆ ಆಗಿದೆ. ಮರ್ಲಿ ಮನೆಯಲ್ಲಿ ಮಕ್ಕಳು ಮರಿ ಸೇರಿ ೧೫ ಜನರ ಕೂಡುಕುಟುಂಬ. ಗಂಡು ಮಕ್ಕಳು ಹೋಟೆಲ್‌ನಲ್ಲಿ ದುಡಿಯುತ್ತಿದ್ದರೆ, ಮಹಿಳೆಯರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ.

 

ಸಚಿವರಿಗಾಗಿಯೇ ಸಿದ್ದವಾದ ನೂತನ ಶೌಚಾಲಯ : ಸ್ಥಳದಲ್ಲೇ ಬೀಡುಬಿಟ್ಟ ಅಧಿಕಾರಿಗಳ ದಂಡು
ಸಮಾಜ ಕಲ್ಯಾಣ ಸಚಿವ ಆಂಜನೇಯ ವಾಸ್ತವ್ಯಕ್ಕೆ ಸಜ್ಜುಗೊಂಡಿದೆ. ವಿವಿಧ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದು, ವೇದಿಕೆ, ಪೆಂಡಾಲ್ ನಿರ್ಮಿಸುವ ಕೆಲಸ ಭರದಿಂದ ಸಾಗುತ್ತಿದೆ. ಮೂರೂರು ಮೂಲನಿವಾಸಿಗಳ ಕಾಲನಿಯಲ್ಲಿ ಸಮಾಜ ಭವನ ನಿರ್ಮಿಸಲು ಜಾಗ ಸಮತಟ್ಟು ಮಾಡಿಲಾಗಿದೆ. ಸಚಿವ ವಾಸ್ತವ್ಯ ಮಾಡುವ ಮರ್ಲಿ ಮನೆಯಲ್ಲಿ ಸಚಿವರಿಗಾಗಿಯೇ ಸುಸಜ್ಜಿತ ಅಟೆಚ್ ಬಾತ್ ಕೂಮ್ 65 ಸಾವಿರ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ನೀರು ಪೂರೈಕೆಗಾಗಿ ಟ್ಯಾಂಕ್ ಫಿಟ್ ಮಾಡಿ, ಪೈಪ್ ಲೈನ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಬಾವಿಗೆ ಮೋಟಾರ್ ಅಳವಡಿಸಿ, ಟ್ಯಾಂಕಿಗೆ ನೀರು ಹಾಯಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಷ್ಟೆಲ್ಲಾ ಅದರೂ ಸಚಿವ ವಾಸ್ತವ್ಯದ ಮನೆಗೆ ಸುಣ್ಣ ಬಣ್ಣ ಬಳಿದಿಲ್ಲ!

ಮೂರೂರು ಇಡ್ಕಲ್ಕಟ್ಟು ಹೊಳೆ ಒಂದು ಬದಿಯಲ್ಲಿ ಸಚಿವ ವಾಸ್ತವ್ಯದ ಮನೆಯಿದ್ದರೆ, ಹೊಳೆಯ ಮತ್ತೊಂದು ಬದಿಯಲ್ಲಿ ಸಾರ್ವಜನಿಕ ಸಭಾ ವೇದಿಕೆ ಹಾಗೂ ವಿಶಾಲ ಜಾಗದಲ್ಲಿ ಪೆಂಡಾಲ್ ಹಾಕಿದ್ದು, ಕುರ್ಚಿಗಳ ಜೋಡಣೆಯಷ್ಟೇ ಬಾಕಿಯಿದೆ. ಸಾರ್ವಜನಿಕ ಊಟಕ್ಕೆ ಪ್ರತ್ಯೇಕ ಪೆಂಡಾಲ್ ಇದ್ದು, ಊಟದ ವ್ಯವಸ್ಥೆಗೆ ಪ್ರತ್ಯೇಕ ಪೆಂಡಾಲ್ ಅಡುಗೆ ಮನೆ ನಿರ್ಮಿಸಿದ್ದು, ನೀರಿನ ವ್ಯವಸ್ಥೆ ಮಾಡಲಾಗಿದೆ. ಮುರೂರುಗೆ ಬರುವ ಕಚ್ಚಾ ರಸ್ತೆ ರಿಪೇರಿ ಮಾಡಲಾಗಿದ್ದು, ಹೊಂಡಬಿದ್ದ ಟಾರ್ ರಸ್ತೆಗೆ ಮಣ್ಣುಮುಚ್ಚಲಾಗಿದೆ. ರಸ್ತೆ ಅಕ್ಕ, ಪಕ್ಕದ ಗಿಡ, ಗೆಂಡೆ ಸವರಲಾಗಿದ್ದು, ಮಾರ್ಗ ಸೂಚಿಗಳ ಅಳವಡಿಸಲಾಗಿದೆ.  ಕುಂದಾಪ್ರ ಡಾಟ್ ಕಾಂ ವರದಿ.

ಸಾರ್ವಜನಿಕ ಸಮಾರಂಭದ ವೇದಿಕೆಯಿಂದ ಮರ್ಲಿ ಮನೆಗೆ ಹೋಗಲು ಮಣ್ಣುರಸ್ತೆ ಮಾಡಲಾಗದ್ದು, ಇಡ್ಕಲ್ಕಟ್ಟ ಹೊಳೆಗೆ ಪೈಪ್ ಹಾಕಿ ಮಣ್ಣು ರಸ್ತೆ ನಿರ್ಮಿಸಲಾಗಿದೆ. ಒಟ್ಟಾರೆ ಹಾಡಿ ವಾಸ್ತವ್ಯಕ್ಕೆ ಮೂರೂರು ಸಜ್ಜಾಗಿದೆ.

ಮೂರೂರು ಸಚಿವರ ಆಗಮನದ ಹಿಂದೆ ಕೈಗೊಂಡ ಕೆಲಸಗಳ ಮಾಹಿತಿ ನೀಡಿದ ಐಟಿಟಿಪಿ ಪ್ರಭಾರ ಅಧಿಕಾರಿ ಹರೀಶ್ ಗಾಂವ್ಕರ್ ಮಾತನಾಡಿ, ಸಚಿವರ ಸ್ವಾಗತಿಸಲು ಮೂರೂರು ಸಜ್ಜಾಗಿದ್ದು, ೨ ಸಾವಿರ ಜನಕ್ಕೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಯಾವ ನ್ಯೂನ್ಯತೆಯೂ ಬಾರದ ಹಾಗೆ ಅಚ್ಚಕಟ್ಟಾಗಿ ವ್ಯವಸ್ಥೆ ಮಾಡಿಕೊಂಡಿದ್ದು, ಕೋಲ್ತೋಡು ಗ್ರಾಮ ಪಂಚಾಯತ್ ಸಂಪೂರ್ಣ ಸಹಕಾರದಲ್ಲಿ ಈ ಎಲ್ಲಾ ಕೆಲಸ ಮಾಡಲಾಗಿದೆ. ರಾತ್ರಿ ಮರ್ಲಿಮನೆಯವರು ತಯಾರಿಸದ ಊಟ ಕುಟುಂಬದ ಜೊತೆ ಕೂತು ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು. © ಕುಂದಾಪ್ರ ಡಾಟ್ ಕಾಂ.

ಸಮಾಜ ಕಲ್ಯಾಣ ಸಚಿವ ಮೂರೂರು ವಾಸ್ತವ್ಯದ ಹಿನ್ನೆಲೆಯಲ್ಲಿ ಕೊರಗರ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಜೊತೆ ಕೊರಗರ ಕಲಾಪ್ರದರ್ಶನ, ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ. ಕೊರಗ ಜೀವಿತ ಅವಧಿ ಕಡಿಮೆ ಬಗ್ಗೆ ಅಧ್ಯಯನ, ಮೂಲನಿವಾಸಿಗಳ ಶಿಕ್ಷಣಿಕ ಪ್ರಗತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಮೂಲನಿವಾಸಿಗಳ ಮಕ್ಕಳ ಅತಿಯಾಗಿ ಪ್ರೀತಿಸುವುದರಿಂದ ಬೇರೆ ಕಡೆ ಇದ್ದ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾಲನಿಯಲ್ಲೇ ಶಿಕ್ಷಣ ವ್ಯವಸ್ಥೆ ಹಾಗೂ ಕೊರಗರಲ್ಲಿ ಕಾಣಿಸಿಕೊಳ್ಳುವ ಟಿಬಿ, ರಕ್ಷಹೀನತೆ ಕುರಿತು ಅಧ್ಯಯನ ನಡೆಸುವಂತೆ ಸಚಿವರಲ್ಲಿ ಬೇಡಿಕೆ ಇಡಲಾಗುತ್ತದೆ. – ಗಣೇಶ್ ಕೊರಗ, ಅಧ್ಯಕ್ಷ, ಕೊರಗ ಶ್ರೇಯೋಭಿವೃದ್ಧಿ ಸಂಘ ಕುಂದಾಪುರ.

ಸಚಿವರೊಬ್ಬರು ನಮ್ಮ ಕಾಲನಿಗೆ ಬರುವುದೇ ನಮಗೆ ಅಚ್ಚರಿ. ನಮ್ಮ ಮನೆಯಲ್ಲಿ ವಾಸ್ತವ್ಯ ಮಾಡುತ್ತಾರೆ ಎನ್ನೋದು ಇನ್ನೂದು ನಂಬೋಕೆ ಆಕ್ತಿಲ್ಲ. ಪ್ರಪಂಚಕ್ಕೆ ಅಪರಿಚಿತರಾಗಿಯೇ ಉಳಿದ ನಮ್ಮ ಕಾಲನಿ ಸಚಿವರ ಆಗಮನದಿಂದಾದರೂ ಅಭಿವೃದ್ಧ ಹೊಂದುವಂತಾದರೆ ನಮ್ಮ ಕಾಲನಿಯಲ್ಲಿ ವಾಸ್ತವ್ಯ ಮಾಡಿದ್ದಕ್ಕೊಂದು ಸಾರ್ಥಕತೆ ಬರುತ್ತದೆ. ವಿದ್ಯುತ್ ಬಂದಿದೆ, ಆದರೆ ಅದರಿಂದ ಪ್ರಯೋಜನ ಇಲ್ಲ. ತ್ರೀಫೇಸ್ ವಿದ್ಯುತ್, ಕುಡಿಯುವ ನೀರು, ಅರ್ಧಕ್ಕೆ ನಿಂತ ಸೇತುವೆ ನಿರ್ಮಾಣ, ಸಂಪರ್ಕ ವ್ಯವಸ್ಥೆ, ಕಾಲನಿ ನಿವಾಸಿಗಳಿಗೆ ಉದ್ಯೋಗ ಭರವಸೆ ಸಿಕ್ಕರೆ ನಾವು ಧನ್ಯರು – ಮರ್ಲಿ, ಸಚಿವರು ವಾಸ್ತವ್ಯ ಮಾಡುವ ಮನೆ ಒಡತಿ

ಮೂರೂರು ಕಾಲನೆ ನಿವಾಸಿಗಳ ಮನೆ ಶಿಥಿಲಾಗಿದ್ದು, ಐಡಿಟಿಪಿ ಮೂಲಕ ಮನೆಗಳ ನಿರ್ಮಾಣ ಮಾಡಿಕೊಡಬೇಕು. ತ್ರೀ ಫೇಸ್ ವಿದ್ಯುತ್ ಸಂಪರ್ಕ ನೀಡಿದರೆ, ಕಾಲನಿ ವಾಸಿಗಳು ಮೋಟಾರ್ ಅಳವಡಿಸಿಕೊಂಡು ತೆಂಗು, ಅಡಿಕೆ ಕೃಷಿ ಮಾಡಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಕಾಲ್ತೋಡು ವಿಸ್ತೀರ್ಣದಲ್ಲಿ ಜಿಲ್ಲೆಯ ಅತೀ ದೊಡ್ಡ ಗ್ರಾಪಂ ಅಗಿದ್ದು, ಇಲ್ಲಿಗೆ ಹೈಸ್ಕೂಲ್ ಜರೂರತ್ತಿದ್ದು, ಕಾಲ್ನಡಿಗೆಯಲಿ ದೂರದ ಶಾಲೆಗೆ ಹೋಗುವುದು ತಪ್ಪುವ ಜೊತೆ ಗ್ರಾಮ ಭಾಗದ ವಿದ್ಯಾರ್ಥಿಗಳಿಗೆ ಕನಿಷ್ಟ ೧೦ನೇ ತರಗತಿ ತನಕ ಕಲಿಯುವ ಅವಕಾಶ ಸಿಗುತ್ತದೆ. ಮೂರೂರು ಸೇತುವೆ ಸಂಪೂರ್ಣವಾದರೆ ಬೋಳಂಬಳ್ಳಿ, ಮೂರೂರು, ಗೋಳಿಹೊಳೆ ಹಾಗೂ ಅರೆಶಿರೂರು ಮೂಲಕ ವಾಹನ ಸಂಪರ್ಕ ಕಲ್ಪಿಸಲು ಅನುಕೂಲವಾಗುತ್ತದೆ – ಅಣ್ಣಪ್ಪ ಶೆಟ್ಟಿ ಭಟ್ನಾಡಿ, ಅಧ್ಯಕ್ಷ, ಗ್ರಾಪಂ ಕಾಲ್ತೋಡು.

Exit mobile version