Kundapra.com ಕುಂದಾಪ್ರ ಡಾಟ್ ಕಾಂ

ಭತ್ತದ ಕೃಷಿಯಲ್ಲಿ ಯುವಕರ ಒಲವು: ದಾಖಲೆ ಪ್ರಮಾಣದಲ್ಲಿ ಬೀಜ, ರಸಗೊಬ್ಬರ ಖರೀದಿ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಈ ಭಾರಿ ದಾಖಲೆ ಪ್ರಮಾಣದಲ್ಲಿ ಭತ್ತ ಹಾಗೂ ರಸಗೊಬ್ಬರಗಳು ಮಾರಾಟವಾಗುತ್ತಿದ್ದು, ಕೊರೋನಾ ಹೊಡೆತದಿಂದಾಗಿ ಭತ್ತದ ಕೃಷಿಯಲ್ಲಿ ಯುವಕರ ಒಲವು ಹೆಚ್ಚಿದೆ. ಹಡಿಲು ಬಿದ್ದ ಗದ್ದೆಗಳು ಹಸಿರಾಗುವ ಸೂಚನೆ ದೊರೆಯುತ್ತಿದೆ.

ಲಾಕ್‌ಡೌನ್‌ನಿಂದಾಗಿ ನಗರಗಳಲ್ಲಿ ಈವರೆಗೂ ವ್ಯಾಪಾರ-ವ್ಯವಹಾರ ಸಸೂತ್ರವಾಗಿ ಆರಂಭವಾಗಿಲ್ಲ. ಮುಂಬೈನಂತಹ ಮಹಾನಗರಿಗಳಲ್ಲಿ ಮತ್ತೆ ವ್ಯವಹಾರ, ಕೆಲಸ ಆರಂಭಿಸಲು ಕೆಲವು ತಿಂಗಳುಗಳೇ ಬೇಕು. ಅಲ್ಲಿಯ ತನಕ ಊರಿನಲ್ಲಿಯೇ ಇರುವುದು ಅನಿವಾರ್ಯ. ಹಾಗಾಗಿ ಸದ್ಯ ಮನೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಕೆಲವರು ಕೃಷಿಯತ್ತ ಒಲವು ತೋರುವ ಮಾತುಗಳ ಕೇಳಿಬರುತ್ತಿದ್ದು, ಇನ್ನು ಒಂದಿಷ್ಟು ಮಂದಿ ಮತ್ತೆ ನಗರಗಳಿಗೆ ತೆರಳದೇ ಊರಿನಲ್ಲಿಯೇ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಉಭಯ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದ ಭತ್ತ ಹಾಗೂ ರಸಗೊಬ್ಬರ ಮಾರಾಟವಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ.

2019ರಲ್ಲಿ 13,725 ಹೆಕ್ಟೇರ್ ಭೂಮಿಯಲ್ಲಿ ಭತ್ತದ ಕೃಷಿ ಮಾಡಿದರೆ, ಈ ಬಾರಿ ಸುಮಾರು 15 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಭತ್ತದ ಕೃಷಿ ಮಾಡುವಷ್ಟು ಬೀಜ, ರಸಗಬ್ಬರ ಕ್ರಿಮಿನಾಶಕ ರೈತರು ಸಂಗ್ರಹಿಸಿದ್ದಾರೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭತ್ತದ ಕೃಷಿಕರು ಎಂಒ4 ತಳಿಯನ್ನೇ ಪ್ರಸಕ್ತ ವರ್ಷ ಅವಲಂಭಿಸಿದ್ದು, ಹಿಂದೆ ಎಂಒ4, ಜ್ಯೋತಿ, ಎಂ16 ಬೀಜ ಬಳಸಲಾಗುತ್ತಿತ್ತು. ಎಂಒ4 ಬೀಜ ಕ್ವಿಂಟಾಲಿಗೆ 3,200 ರೂ. ಇದ್ದು, 800 ರೂ. ಸಬ್ಸಿಡಿ ಇದೆ.  2019ರಲ್ಲಿ 974 ಕ್ವಿಂಟಾಲ್ ಎಂಒ4, ಹಾಗೂ 10 ಕ್ವಿಂಟಾಲ್ ಜ್ಯೋತಿ ಭಿತ್ತಿನ ಬೀಜ ಮಾರಾಟವಾಗಿದ್ದರೆ, ಈ ವರ್ಷ 815 ಕ್ವಿಂಟಾಲ್ ಎಂಒ4 ಬಿತ್ತನೆಬೀಜ ರೈತರು ವಿಕ್ರಯಿಸಿದ್ದಾರೆ. ರೈತರೇ ಉತ್ಪಾದಿಸಿಕೊಂಡ ಬೀಜಗಳ ಪ್ರಮಾಣ 15 ಟನ್‌ಗೂ ಅಧಿಕ ಇದೆ. ಕುಂದಾಪುರ ಹೋಬಳಿ 244 ಕ್ವಿಂಟಲ್, ಬೈಂದೂರು ಹೋಬಳಿ 334.75 ಕ್ವಿಂಟಾಲ್, ವಂಡ್ಸೆ ಹೋಬಳಿ 237.25 ಕ್ವಿಂಟಾಲ್ ಬಿತ್ತನೆ ಬೀಜ ರೈತರು ಪಡೆದುಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ರಸಗೊಬ್ಬರ ಮಾರಾಟ ಅಧಿಕ :
ಕಳೆದ ಎರಡು ವರ್ಷದ ಲೆಕ್ಕದಲ್ಲಿ ರಸಗೊಬ್ಬರ ಮಾರಾಟದ ಲೆಕ್ಕ ತೆಗೆದರೆ ಈ ಬಾರಿ ಏಪ್ರಿಲ್ ತಿಂಗಳಲ್ಲೇ 152.45 ಟನ್ ರಸಗೊಬ್ಬರ ಖರ್ಚಾಗಿದೆ. 2018ರಲ್ಲಿ ಮೇ ಅಂತ್ಯಕ್ಕೆ 238 ಟನ್ ಗೊಬ್ಬರ ಖಾಲಿಯಾಗಿದ್ದರೆ, 2019 ಮೇ ಅಂತ್ಯಕ್ಕೆ 2018ರಲ್ಲಿ ಖರ್ಚಾದಷ್ಟೇ ರಸಗೊಬ್ಬರ ವಿತರಣೆ ಮಾಡಲಾಗಿದೆ. ಯೂರಿಯಾ, ಡಿಎಪಿ, ಎನ್‌ಪಿಕೆ, ಎಂಒಪಿ ವಿತರಣೆ ಮಾಡಲಾಗಿದೆ. ರಸಗೊಬ್ಬರವನ್ನು ಕೃಷಿ ಇಲಾಖೆ ಅಲ್ಲದೆ ಖಾಸಗಿಯಾಗಿಯೂ ವಿತರಣೆ ಮಾಡಲಾಗಿದೆ. ದ್ರವ ರೂಪದ 13,952 ಲೀಟರ್ ಕ್ರಿಮಿ ನಾಶಕ, ಪೌಡರ್ ಕ್ರಿಮಿ ನಾಶಕ 274.5 ಟನ್ ಬೇಕಾಗುತ್ತದೆ. ರಸಗೊಬ್ಬರ ಎನ್‌ಪಿಐಎಲ್ 825 ಟನ್, ರಂಜಕ 412 ಟನ್, ಪೊಟ್ಯಾಷ್ 824 ಟನ್ ಬೇಕಾಗುತ್ತದೆ./ಕುಂದಾಪ್ರ ಡಾಟ್ ಕಾಂ ವರದಿ/

  • ಈ ವರ್ಷ 15 ಸಾವಿರ ಹೆಕ್ಟೇರ್ ಕೃಷಿ ಭೂಮಿಗಾಗುಷ್ಟು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕ ದಾಖಲೆ ಪ್ರಮಾಣದಲ್ಲಿ ರೈತರು ವಿಕ್ರಯಿಸಿದ್ದಾರೆ. ಕಳೆದ ವರ್ಷಕ್ಕಿಂತಲೂ ಸುಮಾರು 100 ಹೆಕ್ಟೇರ್ ಅಧಿಕ ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ಗುರಿ ಇಟ್ಟುಕೊಳ್ಳಲಾಗಿದೆ. ರೈತರಿಗೆ ಕೊರತೆಯಾಗದಂತೆ ಬೀಜ, ಗೊಬ್ಬರ, ಕ್ರಿಮಿನಾಶಕ ಇಲಾಖೆಯಿಂದ ಪೂರೈಕೆ ಮಾಡಲಾಗಿದೆ. ರೈತರು ಇನ್ನೂ ಹೆಚ್ಚಿನ ಬೇಡಿಕೆ ಇಟ್ಟರೆ ಇಲಾಖೆ ಪೂರೈಕೆ ಮಾಡುತ್ತದೆ. – ರೂಪಾ ಜೆ., ಮಾಡಾ ಪ್ರಭಾರ ಕೃಷಿ ಸಹಾಯಕ ಅಧಿಕಾರಿ, ಕುಂದಾಪುರ

ಇದನ್ನೂ ಓದಿ:
► ದ.ಕನ್ನಡ ಹಾಲು ಒಕ್ಕೂಟದಿಂದ ಜಾನುವಾರುಗಳಿಗೆ ವಿಮಾ ಸೌಲಭ್ಯ – https://kundapraa.com/?p=37935 .
► ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಗೆ ಅರ್ಜಿ ಆಹ್ವಾನ – https://kundapraa.com/?p=37963 .

 

Exit mobile version