Kundapra.com ಕುಂದಾಪ್ರ ಡಾಟ್ ಕಾಂ

ಗಡಿ ಭದ್ರತಾ ಪಡೆ ಸೇರಿದ ಬೈಂದೂರು ಏಳಜಿತದ ಕುವರಿ ವಿದ್ಯಾ ಗೌಡ

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇನೆ ಸೇರುತ್ತಿದ್ದು, ಬೈಂದೂರು ತಾಲೂಕಿನ ಯುವತಿಯೂರ್ವಳು ಇದೀಗ ಭಾರತೀಯ ಗಡಿ ಭದ್ರತಾ ಪಡೆಗೆ (BSF) ಸೇರಲು ಸಿದ್ಧಳಾಗಿದ್ದಾಳೆ. ಬೈಂದೂರು ತಾಲೂಕಿನ ಏಳಜಿತ ಗ್ರಾಮದ ಹುಣ್ಸೆಮಕ್ಕಿ ನಿವಾಸಿಯಾದ ವಿದ್ಯಾ ಗೌಡ ಪ್ರಸಕ್ತ ಸಾಲಿನಲ್ಲಿ ಸೇನೆಗೆ ಸೇರುತ್ತಿರುವ ಉಡುಪಿ ಜಿಲ್ಲೆಯ ಏಕೈಕ ಅಭ್ಯರ್ಥಿಯೆನಿಸಿಕೊಂಡಿದ್ದು ಏಪ್ರಿಲ್ 1ರಿಂದ ತರಬೇತಿಗೆ ಹಾಜರಾಗಲಿದ್ದಾರೆ.

ಏಳಜಿತದ ಗ್ರಾಮದ ಹುಣ್ಸೆಮಕ್ಕಿ ರಮೇಶ್ ಗೌಡ ಹಾಗೂ ಪಾರ್ವತಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಕಿರಿಯವಳಾದ ವಿದ್ಯಾ ಹೆಚ್. ಗೌಡ ಅವರು ಕ್ರೀಡೆ ಹಾಗೂ ಕಲಿಕೆಯಲ್ಲಿ ಬಾಲ್ಯದಿಂದಲೂ ಚುರುಕು. ವಿದ್ಯಾ ಪ್ರಾಥಮಿಕ ಶಿಕ್ಷಣವನ್ನು ಏಳಜಿತ ಶಾಲೆ, ಹೈಸ್ಕೂಲ್ ಶಿಕ್ಷಣವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆ, ಪಿಯುಸಿ ಶಿಕ್ಷಣವನ್ನು ಕುಂದಾಪುರ ಜ್ಯೂನಿಯರ್ ಕಾಲೇಜು, ಬಿಎಸ್ಸಿ ಪದವಿಯನ್ನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಹಾಗೂ ಬಿ.ಎಡ್ ಪದವಿಯನ್ನು ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬಿ.ಎಡ್ ಪದವಿಯ ಕೊನೆಯ ಘಟ್ಟದಲ್ಲಿರುವಾಗಲೇ ವಿದ್ಯಾ ಅವರಿಗೆ ಸೇನೆ ನೇಮಕಾತಿ ಆದೇಶ ಬಂದಿದ್ದು ಅದರಂತೆ ಮಧ್ಯಪ್ರದೇಶ ಗ್ವಾಲಿಯರ್’ನಲ್ಲಿ ತರಬೇತಿ ಪಡೆಯಲು ಮಾರ್ಚ್ 30ರಂದು ತೆರಳಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ಕ್ರೀಡಾ ಚಾಂಪಿಯನ್:
ವಿದ್ಯಾ ಅವರು ಹೈಸ್ಕೂಲು ಹಾಗೂ ಕಾಲೇಜು ದಿನಗಳಲ್ಲಿ ಶಿಕ್ಷಣದೊಂದಿಗೆ ಕ್ರೀಡೆಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದರು. ಕ್ರೀಡೆಯ ವಿವಿಧ ವಿಭಾಗಗಳಲ್ಲಿ ಚಾಂಪಿಯನ್ ಆಗಿಯೂ ಗುರುತಿಸಿಕೊಂಡಿದ್ದರು. ನೆಟ್ ಬಾಲ್’ನಲ್ಲಿ ಐದು ಬಾರಿ ರಾಜ್ಯ ಮಟ್ಟ, ಒಂದು ಭಾರಿ ರಾಷ್ಟ್ರಮಟ್ಟವನ್ನೂ ಪ್ರತಿನಿಧಿಸಿದ್ದರು. ಅಥ್ಲೆಟಿಕ್ಸ್’ನಲ್ಲಿ ಆರು ಭಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದು ಪೋಲ್ ವಾಲ್ಟ್’ನಲ್ಲಿ ಕಂಚಿನ ಪದಕವನ್ನೂ ಪಡೆದಿದ್ದರು. ಮಂಗಳೂರು ವಿವಿ, ಜಿಲ್ಲಾ, ತಾಲೂಕು ಪಟ್ಟದಲ್ಲಿ ಹಲವು ಭಾರಿ ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು. ಕ್ರೀಡಾ ಕ್ಷೇತ್ರದ ಸಾಧಕರಿಗೆ ಕ್ರೀಡಾ ಇಲಾಖೆ ನೀಡುವ ಚೈತ್ರದ ಚಿಗುರು ರಾಜ್ಯ ಪ್ರಶಸ್ತಿಯೂ ವಿದ್ಯಾ ಅವರಿಗೆ ದೊರೆತಿತ್ತು.

ಇದೀಗ ವಿದ್ಯಾ ಅವರು ಸೇನೆ ಸೇರುತ್ತಿರುವ ಬಗ್ಗೆ ಆಕೆಯ ಕುಟುಂಬಸ್ಥರು ಹಾಗೂ ಗ್ರಾಮದವರು ಸಂತಸ ವ್ಯಕ್ತಪಡಿಸಿದ್ದರು, ಕುಂದಾಪ್ರ ಡಾಟ್ ಕಾಂನೊಂದಿಗೆ ಮಾತನಾಡಿದ ವಿದ್ಯಾ ಕೂಡ ದೇಶ ಸೇವೆ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಸಂತಸ ಹಂಚಿಕೊಂಡಿದದಾರೆ.

  • ಮಗಳು ಸೇನೆಗೆ ಸೇರುತ್ತಿರುವ ಬಗ್ಗೆ ಖುಷಿ ಇದೆ. ನಾನು ಹೆಚ್ಚು ಕಲಿತಿಲ್ಲ. ಆದರೆ ಮಕ್ಕಳು ವಿದ್ಯಾವಂತರಾಗಿ ಒಳ್ಳೆಯ ಕೆಲಸ ಪಡೆಯಲಿ ಎಂಬುದು ನನ್ನ ಆಕಾಂಕ್ಷೆಯಾಗಿತ್ತು. ಅದರಂತೆ ಮಗಳು ಉತ್ತಮ ಶಿಕ್ಷಣ ಪಡೆದು ಸೇನೆಗೆ ಸೇರುತ್ತಿರುವ ಬಗ್ಗೆ ಹೆಮ್ಮೆ ಇದೆ. – ರಮೇಶ್ ಗೌಡ, ವಿದ್ಯಾಳ ತಂದೆ
  • ದೇಶ ಸೇವೆಯಲ್ಲಿ ತೊಡಗಿಕೊಳ್ಳುವುದರ ಬಗ್ಗೆ ನನಗಷ್ಟೇ ಅಲ್ಲದೇ ನನ್ನ ಊರಿನವರಿಗೂ ಖುಷಿ ಹಾಗೂ ಹೆಮ್ಮೆ ಇದೆ. ನೇಮಕಾತಿ ಪತ್ರ ದೊರೆತಾಗ ನಿಜಕ್ಕೂ ಖುಷಿಯಾಗಿತ್ತು. ಮಧ್ಯಪ್ರದೇಶ ಗ್ವಾಲಿಯರ್’ನಲ್ಲಿ ತರಬೇತಿಗಾಗಿ ತೆರಳುತ್ತಿದ್ದೇನೆ. – ವಿದ್ಯಾ ಎಚ್.
Exit mobile version