ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ಲೇಖನ
ಗಣೇಶನ ಹಬ್ಬವೆಂದರೆ ಹಾಗೆ. ಅದು ಸರ್ವರ ಸಂಭ್ರಮ. ನಾನಾ ರೂಪದಲ್ಲಿ ಪೂಜಿಸಲ್ಪಡುವ ಗಣನಾಯಕನೂ ಅಷ್ಟೇ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಪ್ರೀತಿ. ನಿರ್ವಿಕಾರ ಮೂರ್ತಿಯನ್ನು ಬಗೆ ಬಗೆಯಲ್ಲಿ ಕಾಣುವ ಸಂಭ್ರಮ.
ಚಿತ್ರ ಕಲಾವಿದೆ, 11ನೇ ತರಗತಿಯ ಕಾಮರ್ಸ್ ವಿದ್ಯಾರ್ಥಿನಿ ಶ್ರೇಯಾಳ ಗಣಪತಿಯ ಪ್ರೀತಿಯೂ ಅಂತಹದ್ದೇ. ಪ್ರತಿ ಚೌತಿಯ ಸಮಯದಲ್ಲಿಯೂ ವಿಘ್ನನಿವಾರಕನನ್ನು ವಿವಿಧ ರೂಪದಲ್ಲಿ ಚಿತ್ರಿಸುತ್ತಿದ್ದ ಆಕೆ ಈ ಭಾರಿ ಗಣೇಶ ಹಬ್ಬದ ಸಲುವಾಗಿ ಆಂಗ್ಲ ಭಾಷೆಯ 26 ವರ್ಣಮಾಲೆಗನುಸಾರವಾಗಿ A ಯಿಂದ Z ಅಕ್ಷರ ಆರಂಭಗೊಳ್ಳುವ ಗಣಪತಿಯ ಹೆಸರುಗಳನ್ನು ಕಲೆಹಾಕಿ ಹೆಸರಿಗೆ ತಕ್ಕಂತೆ 26 ರೂಪಗಳಲ್ಲಿ ಗಣಪತಿಯನ್ನು ಚಿತ್ರಿಸಿದ್ದಾಳೆ.
A for Apple, B for bat, C for Cat.. ಅಂತಿದ್ದವರು ಇನ್ನು ಮುಂದೆ ಚೌತಿಯ ಸಮಯದಲ್ಲಾದರೂ A for Akhuratha, B for Buddhipriya, C for Chaturbhuj, D for Devantakanashakarin…ಅನ್ನಬಹುದೆನ್ನಿ
ಗಣಪತಿಯ ಪ್ರೀತಿ:
ಶ್ರೇಯಾ ನಾಲ್ಕನೆ ತರಗತಿಯಲ್ಲಿರುವಾಗಿನಿಂದ ಪ್ರತಿ ಚೌತಿಗೂ ವಿವಿಧ ಬಗೆಯ ಗಣಪತಿಯನ್ನು ಚಿತ್ರಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ 21 ಬಗೆಯ ವಿವಿಧ ಗಣಪತಿಗಳನ್ನು ಬಿಡಿಸುತ್ತಾ ಬಂದ ಆಕೆ, ಈ ಭಾರಿ ಇಂಗ್ಲೀಷ್ ವರ್ಣಮಾಲೆಗನುಸಾರವಾಗಿ 26 ಹೆಸರಿನ ಗಣಪತಿಯನ್ನು ರಚಿಸಿ ಚಂದದ್ದೊಂದು ಸ್ರ್ಯಾಪ್‌ಬುಕ್ ರಚಿಸಿದ್ದಾಳೆ. ಅಗಸ್ಟ್ ತಿಂಗಳಿನಿಂದ ಅರಂಭಿಸಿ ಚೌತಿ ಆರಂಭಕ್ಕೂ ಮುನ್ನ ಶ್ರೇಯಾಳ 26 ಗಣಪತಿಗಳು ತಯಾರಾಗಿದ್ದವು.
ಕಲಾ ಪ್ರತಿಭೆ ಶ್ರೇಯಾ:
ಎಳೆವೆಯಿಂದಲೇ ಚಿತ್ರಕಲೆಯಲ್ಲಿ ವಿಶೇಷ ಒಲವು ಹೊಂದಿರುವ ಶ್ರೇಯಾ, ತನ್ನ ಓದಿನೊಂದಿಗೆ ಕಲಾ ಅಭಿರುಚಿಯನ್ನು ಬಿಡದೇ ಮುಂದುವರಿಸಿದ್ದಾರೆ. ಆಫ್ರಿಕಾದ ಉಗಾಂಡಾದಲ್ಲಿ ಮೂರನೇ ತರಗತಿ ಓದುತ್ತಿದ್ದಾಗ ಅಲ್ಲಿನ ಪತ್ರಿಕೆಯೊಂದು ಆಯೋಜಿಸಿದ್ದ ಪ್ರಕೃತಿ ಚಿತ್ರ ಬಿಡುಸುವ ಸ್ವರ್ಧೆಯಲ್ಲಿ ಗಣಪತಿಯ ಚಿತ್ರ ಬಿಡಿಸಿ ‘ನೇಚರ್ ಈಸ್ ಗಾಡ್; ಎಲಿಫೆಂಟ್ ಈಸ್ ಗಾಡ್’ ಎಂದು ಬರೆದಿದ್ದಳು. ಆಕೆಯ ಚಿತ್ರಕ್ಕೆ ತೃತೀಯ ಬಹುಮಾನವೂ ಬಂದಿತ್ತು. ಆ ಬಳಿಕ ಚಿತ್ರಕಲೆಯನ್ನೇ ಹವ್ಯಾಸವನ್ನಾಗಿಸಿಕೊಳ್ಳಲು ಇದೊಂದು ಪ್ರೇರಣೆ ಅಲ್ಲಿಂದಿಚೆಗೆ ವಿವಿಧ ಪ್ರಕಾರದ ಚಿತ್ರಗಳಿಗಳಿಗಾಗಿ ಕುಂಚ ಹಿಡಿಯುತ್ತಲೇ ಬಂದಿದ್ದಾಳೆ. ವಾಟರ್ ಪೆಂಟಿಂಗ್, ಆರ್ಕ್ಯಾಲಿಕ್ ಪೆಂಟ್, ವಿವಿಧ ಬಗೆಯ ಪೆಂಟಿಂಗ್ ಹಾಗೂ ಕಲಾಕೃತಿಗಳನ್ನು ರಚಿಸಿ ಸೈ ಎನಿಸಿಕೊಂಡಿದ್ದಾಳೆ. ಹೆಬ್ರಿಯಲ್ಲಿರುವ ಆಕೆಯ ಮನೆ ‘ಇಂದ್ರಧನುಷ್’ ವಾರ್ಲಿ ಆರ್ಟ್’ನ ವಿವಿಧ ಪ್ರಕಾರಗಳಿಂದ ಕಂಗೊಳಿಸುತ್ತಿದೆ. ಶ್ರೇಯಾ ಕುಂದಾಪುರದಲ್ಲಿದ್ದಾಗ ಭಂಡಾರ್‌ಕಾರ್ಸ್ ಕಾಲೇಜು, ವೆಂಕಟರಮಣ ದೇವಸ್ಥಾನ ಮುಂತಾದೆಡೆ ಆಕೆಯ ಚಿತ್ರಗಳೂ ಪ್ರದರ್ಶನಗೊಂಡಿದ್ದವು. ಚಿತ್ರಕಲಾ ಶಿಕ್ಷಕ ಸುರೇಶ್ ಹೆಮ್ಮಾಡಿ ಶ್ರೇಯಾಳ ಕಲಾ ಪ್ರೀತಿಗೆ ಸೂಕ್ತ ಮಾರ್ಗದರ್ಶನವನ್ನಿತ್ತಿದ್ದಾರೆ.
ಪ್ರತಿಭಾನ್ವಿತೆ:
ಭಾರತ ಸೇರಿದಂತೆ ಆರು ದೇಶಗಳಲ್ಲಿ ಒಂಬತ್ತನೇ ತರಗತಿ ವರೆಗೆ ಶಿಕ್ಷಣ ಪಡೆದ ಶ್ರೇಯಾ ಎಸ್.ಎಸ್.ಎಸ್.ಸಿ ಗೆ ಕುಂದಾಪುರದ ಸೈಂಟ್ ಮೇರಿಸ್ ಶಾಲೆಯನ್ನು ಆಯ್ದುಕೊಂಡಿದ್ದಳು. ವಿದೇಶಗಳಲ್ಲಿ ಬೆಳೆದಿದ್ದರಿಂದ ಕನ್ನಡದ ಕಲಿಕೆ ಕಷ್ಟವೆನಿಸಿದರೂ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಆಯ್ದುಕೊಂಡದ್ದಳು. ಕನ್ನಡದಲ್ಲಿ 100ರಲ್ಲಿ 99 ಅಂಕ ಗಳಿಸಿದ್ದಲ್ಲದೇ 625 ರಲ್ಲಿ 620 ಅಂಕ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಳು. ಪ್ರಸ್ತುತ ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಹನ್ನೊಂದನೇ ತರಗತಿಗೆ (ಪಿಯುಸಿ) ವಾಣಿಜ್ಯಶಾಸ್ತ್ರದೊಂದಿಗೆ ಲೀಗಲ್ ಸ್ಟಡೀಸ್ ಆಯ್ದಕೊಂಡು ಕಲಿಕೆಯಲ್ಲಿ ತೊಡಗಿದ್ದಾಳೆ. ಕುಂದಾಪ್ರ ಡಾಟ್ ಕಾಂ ಲೇಖನ.
ಓದಿನೊಂದಿಗೆ ಚಿತ್ರಕಲೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕ್ರೀಯಾತ್ಮಕ ಚಿಂತನೆ ಹಾಗೂ ಕೌಶಲ್ಯ ಶ್ರೇಯಾಳ ಪ್ರತಿ ಕೆಲಸದಲ್ಲಿಯೂ ಇದೆ. ಹೆಬ್ರಿ ಸಮೀಪದ ಕಳ್ತೂರಿನ ಗಣಪತಿ ಕಾಮತ್ ಹಾಗೂ ಶುಭಾ ದಂಪತಿಗಳು ಪುತ್ರಿಯ ಶಿಕ್ಷಣದೊಂದಿಗೆ ಆಕೆಯ ಪ್ರೌವೃತ್ತಿಯನ್ನು ಪೋಷಿಸುತ್ತಲೇ ಬಂದಿದ್ದಾರೆ/ಕುಂದಾಪ್ರ ಡಾಟ್ ಕಾಂ ಲೇಖನ/
ಇದನ್ನೂ ಓದಿ
► 6 ದೇಶದಲ್ಲಿ ಕಲಿತ ಹುಡುಗಿ ಎಸ್.ಎಸ್.ಎಲ್.ಸಿ ಓದಿದ್ದು ಕುಂದಾಪುರದಲ್ಲಿ. ಶ್ರೇಯಾಗೆ ಕನ್ನಡದಲ್ಲಿ 99 ಮಾರ್ಕ್ಸ್! – http://kundapraa.com/?p=14233