ಕನ್ನಡ ತಿಳಿಯದ ಹುಡುಗಿಯ ಛಲಕ್ಕೆ ದಕ್ಕಿತು ಕನ್ನಡದಲ್ಲಿ 99 ಅಂಕ !
ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಒಂದನೇ ತರಗತಿಯಿಂದ 9ನೇ ತರಗತಿವರೆಗೆ ಪ್ರಪಂಚದ ಆರು ದೇಶಗಳಲ್ಲಿ ಓದಿದ ಹುಡುಗಿ ಹತ್ತನೇ ತರಗತಿ ಓದಿಗೆ ಆಯ್ದುಕೊಂಡದ್ದು ಕುಂದಾಪುರದ ಶಾಲೆಯನ್ನು. ಹನ್ನೊಂದು ವರ್ಷಗಳಿಂದ ಕನ್ನಡ ಓದದೇ ದೇಶ-ವಿದೇಶ ಸುತ್ತಿದ್ದಹುಡುಗಿ ಶ್ರೇಯಾ ಗಣಪತಿ, ಎಸ್.ಎಸ್.ಎಲ್.ಸಿಗೆ ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆಯ್ದುಕೊಂಡು 100ರಲ್ಲಿ 99 ಅಂಕಗಳಿಸಿ ಕನ್ನಡ ಪ್ರೀತಿ ಮೆರೆದಿದ್ದಾಳೆ.
ಹೆಬ್ರಿ ಸಮೀಪದ ಸಂತೆಕಟ್ಟೆಯ ಗಣಪತಿ ಕಾಮತ್ ಹಾಗೂ ಕುಂದಾಪುರದ ಶುಭಾ ಕಾಮತ್ ಅವರ ಪುತ್ರಿಯಾಗಿರುವ ಶ್ರೇಯಾಗೆ ಎಲ್ಕೆಜಿ ಯಿಂದ ಶಿಕ್ಷಣಾಭ್ಯಾಸವನ್ನು ಆರಂಭಿಸಿದ ಬಳಿಕ ಇಲ್ಲಿಯವರೆಗೆ ಭಾರತ ಸೇರಿದಂತೆ ವಿಶ್ವದ ಆರು ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆಯುವಂತಾಗಿತ್ತು. ಸಾರ್ಕ್ ನಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ತಂದೆ ಗಣಪತಿ ಕಾಮತ್ ಉದ್ಯೋಗ ಕಾರಣದಿಂದ ಕೀನ್ಯಾ, ನೈಜೇರಿಯಾ, ತಾಂಜೇನಿಯಾ, ಭೂತಾನ್, ಉಗಾಂಡದಲ್ಲಿ ವಾಸಿಸುತ್ತಿದ್ದಾಗ ಅವರೊಂದಿಗೆ ಕುಟುಂಬವೂ ತೆರಳಿತ್ತು. ಕುಂದಾಪ್ರ ಡಾಟ್ ಕಾಂ ವರದಿ. ವಿದೇಶದಲ್ಲಿದ್ದಾಗ ಆಂಗ್ಲ ಮಾಧ್ಯಮವನ್ನೂ, ಭಾರತದ ಮುಂಬಯಿ, ಹುಬ್ಬಳ್ಳಿ, ತುಮಕೂರುಗಳಲ್ಲಿ ನೆಲೆಸಿದ್ದಾಗ ಅಲ್ಲಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದ್ವಿತೀಯ ಭಾಷೆಯನ್ನಾಗಿ ಇತರೆ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಅನೀವಾರ್ಯತೆ ಇದ್ದಿದ್ದರಿಂದ ಕನ್ನಡದ ಕಲಿಯದೇ ಉಳಿದಿದ್ದಳು ಶ್ರೇಯಾ. ಒಂಬತ್ತನೇ ತರಗತಿವರೆಗಿನ ಪುತ್ರಿಯ ಶಿಕ್ಷಣದಲ್ಲಿ ಏರುಪೇರಾಗುತ್ತಿರುವುದನ್ನು ಗಮನಿಸಿದ ಪೋಷಕರು, ಹತ್ತನೇ ತರಗತಿಯ ಶಿಕ್ಷಣಾಭ್ಯಾಸವನ್ನು ಕುಂದಾಪುರದಲ್ಲಿಯೇ ಪೂರೈಸುವ ತೀರ್ಮಾನ ಮಾಡಿದ್ದರು. ಶ್ರೇಯಾಳ ತಾಯಿಯ ತಂದೆ, ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಮೋಹನ್ದಾಸ್ ಪೈ ಅವರ ಸಲಹೆಯಂತೆ ಕುಂದಾಪುರದಲ್ಲಿಯೇ ತಾಯಿಯೊಂದಿಗೆ ನೆಲೆಸಿ ಹೊಲಿ ರೋಜರಿ ಶಾಲೆಗೆ ಸೇರಿದ್ದಳು. ಕುಂದಾಪ್ರ ಡಾಟ್ ಕಾಂ ವರದಿ.
ಮನೆಯಲ್ಲಿ ಕೊಂಕಣಿ, ಇಲ್ಲಿಯವರೆಗೆ ಕಲಿತದ್ದು ಇಂಗ್ಲಿಷ್ ಸೇರಿದಂತೆ ಇತರೇ ಭಾಷೆ. ಆದರೂ ಹತ್ತನೇ ತರಗತಿಯಲ್ಲಿ ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದಲೇ ಎರಡನೇ ಭಾಷೆಯನ್ನಾಗಿ ಕನ್ನಡವನ್ನುಆಯ್ಕೆ ಮಾಡಿಕೊಂಡಿದ್ದಳು ಶ್ರೇಯಾ. ಓದಲು, ಬರೆಯಲು ಬಾರದ ಕನ್ನಡ ಭಾಷೆಯನ್ನು ಸವಾಲಾಗಿ ಸ್ವೀಕರಿಸಿದ ಆಕೆಯಲ್ಲಿ ಕನ್ನಡ ಕಲಿಯಬೇಕು ಎನ್ನುವ ಛಲವಿತ್ತು. ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟು 600 ಅಂಕವನ್ನು ಪಡೆದುಕೊಂಡಿರುವ ಆಕೆ ಪ್ರಥಮ ಭಾಷೆಯಾಗಿರುವ ಇಂಗ್ಲೀಷಿಗಿಂತ ಕನ್ನಡದಲ್ಲಿಯೇ ಹೆಚ್ಚು ಅಂಕವನ್ನು ಪಡೆದು ಕನ್ನಡದ ಹುಡುಗಿ ಎನಿಸಿಕೊಂಡಿದ್ದಾಳೆ ಶ್ರೇಯಾ. ಕುಂದಾಪ್ರ ಡಾಟ್ ಕಾಂ ವರದಿ.
ಶ್ರೇಯಾಳ ಸಾಧನೆಯನ್ನು ಪ್ರಶಂಸಿಸುವ ಶಾಲೆಯ ಮುಖ್ಯೋಪಾಧ್ಯಾಯಿನಿ ಜೋಯ್ಸ್ಲೀನ್ ಎ.ಸಿ ಹಾಗೂ ಕನ್ನಡ ಅಧ್ಯಾಪಕ ಪ್ರಶಾಂತ ಲೂಯಿಸ್, ಕ್ಲಾಸಿನಲ್ಲಿ ಒಮ್ಮೆ ಹೇಳಿದ್ದನ್ನು ಕೇಳಿದರೆ ಸಾಕು ಅದು ಆಕೆಯ ಮನ:ಸ್ಪಟಲದಲ್ಲಿ ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಕೇವಲ ಕಲಿಯುವಿಕೆಯಲ್ಲಿ ಮಾತ್ರವಲ್ಲ ಚಿತ್ರಕಲೆ, ಈಜು, ಕಥೆ, ಕವನ, ಸ್ಕೇಟಿಂಗ್, ಹಾಡು, ಡ್ಯಾನ್ಸ್ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲಿಯೂ ಆಕೆಯದು ವಿಶಿಷ್ಠ ಸಾಧನೆ. ಕನ್ನಡ ಭಾಷೆಯ ಮೇಲಿನ ಆಕೆಯ ಹಿಡಿತ ಮೆಚ್ಚಲೇಬೇಕಾದ್ದು ಎನ್ನುತ್ತಾರೆ. ತಾಯಿಯೂ ಮಗಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. / ಕುಂದಾಪ್ರ ಡಾಟ್ ಕಾಂ ವರದಿ./