ಕುಂದಾಪುರದಿಂದ ಶಿವಮೊಗ್ಗ ತೆರಳುವ ಮಾರ್ಗದ ಯಡಾಡಿ-ಮತ್ಯಾಡಿ ಗ್ರಾಮದಲ್ಲೊಂದು ತೀರಾ ಅಪರೂಪದ ದೇವಾಲಯ. ಕಾಡು-ಮೇಡು ಹಾಗೂ ಹಸಿರು ಬಯಲಿನ ಮಧ್ಯದಲ್ಲಿರುವ ಬೃಹತ್ ಬಂಡೆಯೇ ಇಲ್ಲಿಯ ಗುಡ್ಡಟ್ಟು ವಿನಾಯಕನ ಆವಾಸಸ್ಥಾನ. ಬಂಡೆಯ ಗುಹೆಯ ಮದ್ಯದಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ ದಕ್ಷಿಣಕ್ಕೆ ಮುಖಮಾಡಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಯ ಆರಾದ್ಯ ದೇವ. ಬಹಳಷ್ಟು ಆಕಾರ ಹೊಂದಿರುವ ಶ್ರೀ ದೇವರ ಮೂಲ ಬಿಂಬವು ವರ್ಷದ ಎಲ್ಲಾ ಸಂದರ್ಭದಲ್ಲಿಯೂ ಕಂಠದವರೆಗೂ ನೀರಿನಲ್ಲಿಯೇ ಮುಳುಗಿರುವುದು ಇಲ್ಲಿನ ವಿಶೇಷ. ನಿಸರ್ಗ ಪ್ರಿಯರಿಗಂತೂ ಈ ಕ್ಷೇತ್ರ ರಮಣೀಯ. ರಾಜ್ಯಾದ್ಯಾಂತ ಪ್ರವಾಸಿಗರು ಹುಡುಕಿಕೊಂಡು ಬರುವ ಧಾರ್ಮಿಕ-ಪ್ರೇಕ್ಷಣಿಯ ಸ್ಥಳವಿದು.
ಹಿನ್ನೆಲೆ-ಇತಿಹಾಸ:
ಗುಡ್ಡಟ್ಟು ಶ್ರೀವಿನಾಯಕ ದೇವಸ್ಥಾನವು ಒಂದು ಪುರಾಣ ಪ್ರಸಿದ್ದವಾದ ಕ್ಷೇತ್ರವಾಗಿದೆ. ತ್ರಿಪುರಾಸುರನ ಸಂಹಾರ ಕಾಲದಲ್ಲಿ ಈಶ್ವರನು ಯುದ್ದಕ್ಕೆ ಹೋಗುವಾಗ ಪ್ರಮಾದವಶಾತ್ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ, ಆದರೆ ಜಯಲಭಿಸದೇ ಪರದಾಡುತ್ತಿರುವಾಗ ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತು ಪರಶಿವನು ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ ಆದರೆ ಯಾವ ಅಸ್ತ್ರವು ಗಣಪತಿಯನ್ನು ಏನೂ ಮಾಡಲು ಸಾದ್ಯವಾಗಲಿಲ್ಲ. ಅದೇ ರೀತಿಯಲ್ಲಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾದ್ಯವಾಗಿಲ್ಲ, ಈ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೋಯ್ದು ಮಧು ಸಾಗರದಲ್ಲಿ ಕೆಡೆಯುತ್ತಿದೆ ಮಧು ಅರ್ಥಾತ್ ಜೇನು, ತುಪ್ಪ ಗಣಪತಿಗೆ ಅತಿ ಪ್ರಿಯವಾದ ವಸ್ತುವಾದ ಕಾರಣ ಯಥೇಚ್ಚ ಮಧುಪಾನ ಮಾಡಿದ ಗಣಪತಿಯ ವೃತನಾಗಿ ತನ್ನನ್ನು ಇಲ್ಲಿಗೆ ತಂದು ಹಾಕಿದವರ ಕಾರ್ಯ ಜಯವಾಗಲೆಂದು ವರಪ್ರಸಾದ ಮಾಡುತ್ತಾನೆ. ತತ್ ಪರಿಣಾಮ ತ್ರಿಪುರಾಸುರನ ಸಂಹಾರವಾಗಿ ಶಿವನಿಗೆ ಜಯ ಲಭಿಸುತ್ತದೆ. ಆದರೆ ಅತಿಯಾದ ಸಿಹಿ/ಮಧು ಸೇವನೆಯಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿ ಪ್ರಾರಂಭಿಸುವುದು ಸ್ವಾಭಾವಿಕ ಇದೇ ಪರಿಸ್ಥಿತಿ ಗಣಪತಿಗೆ ಪ್ರಾಪ್ತಿಯಾಗಿ ಮಧುಸಾಗರದಲ್ಲಿ ಉಷ್ಣಾಧಿಕದಿಂದ ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಶಿವನು ಗಣಪತಿಯ ಉರಿ ಶಮನಕ್ಕಾಗಿ ನರಸಿಂಹ ತೀರ್ಥದಲ್ಲಿ ಜಲಾಧಿವಾಸವಾಗಿರು ಎಂದು ಈ ಸ್ಥಾನವನ್ನು ಗಣಪತಿಗೆ ಅನುಗ್ರಹಿಸುತ್ತಾನೆ. ಅಂತೆಯೇ ಇಲ್ಲಿ ಹರಿಯುವ ವಾರಾಹಿ ಉಪ ನದಿ ನರಸಿಂಹ ತೀರ್ಥ ಎಂಬ ನದಿಯ ಪಕ್ಕದಲ್ಲಿ ಇರುವ ಬಂಡೆಯ ಮಡುವಿನಲ್ಲಿ ಜಲಾದಿವಾಸವಾಗಿ ನೆಲೆಸಿ ಗಣಪತಿಯು ಭಕ್ತರನ್ನು ಉದ್ದರಿಸುತ್ತಾನೆ ಎಂಬುವುದು ನಂಬಿಕೆ.
ಗರ್ಭ ಗುಡಿಯು ಸಾಧಾರಣ 800 ವರ್ಷಗಳ ಹಳೆಯದು ಎಂದು ಇಲ್ಲಿಗೆ ಭೇಟಿ ನೀಡಿದ ಪುರಾತತ್ವ ಸಂಶೋಧಕರಾದ ಗುರುರಾಜ ಭಟ್ಟ್ ಇವರ ಅಭಿಪ್ರಾಯವಾಗಿದೆ. 1997 ರಲ್ಲಿ ನೂತನ ಗರ್ಭಗುಡಿ, ತೀರ್ಥ ಮಂಟಪ, ಹೆಬ್ಬಾಗಿಲು ರಚನೆಯಾಗಿದೆ.
ಆಯರ್ ಕೊಡ:
ಇಲ್ಲಿಯ ವಿಶೇಷ ಸೇವೆ ಇದಾಗಿದ್ದು, ಗುಹೆಯೊಳಗಿನ ನೀರನ್ನು ತಾಮ್ರದ ಕೈಬಟ್ಟಲು ಉಪಯೋಗಿಸಿ ಪೂರ್ತಿ ಖಾಲಿ ಮಾಡಲಾಗುತ್ತದೆ ನಂತರ ನಂತರ ದೇವರಿಗೆ ತೈಲಾಭ್ಯಂಜನ ಮಾಡಿಸಿ ರುದ್ರಾಭಿಷೇಕ ಮಾಡಲಾಗುತ್ತದೆ. ಅಭಿಷೇಕದ ನೀರನ್ನು ಹೊರತೆಗೆದು ಭಕ್ತಾಭಿಮಾನಿಗಳಿಗೆ ಶ್ರೀ ದೇವರ ಮೂಲ ಬಿಂಬ ಪ್ರಸಾದ ನೀಡಲಾಗುವುದು. ಪುನಃ ಮೂಲ ಬಿಂಬಕ್ಕೆ ಆಲಂಕಾರ ಪೂಜೆ ನೈವೆದ್ಯ ನೆರವೇರಿಸಿ ಪವಮಾನ ಮಂತ್ರ ಪಠಿಸುತ್ತಾ ಗುಹೆಯೊಳಗೆ ತುಂಬಿ ಹರಿವಷ್ಟು ಶುದ್ದ ಜಲ ಅಭಿಷೇಕ ಮಾಡಿ ಪೂಜೆ ಮಾಡಲಾಗುತ್ತದೆ. ಹೀಗೆ ಹಳೆ ನೀರನ್ನು ತೆಗೆದು ಹೊಸ ನೀರಿನ ಅಭಿಷೇಕ, 2 ಭಾರಿ ರುದ್ರಾಭಿಷೇಕ, ಒಮ್ಮೆ ಪವಮಾನ ಅಭಿಷೇಕ, ನಂತರ 1000 ಸಾವಿರ ಕೊಡ ಜಲ ಅಭಿಷೇಕವಾಗುವುದರಿಂದ ಸೇವೆಗೆ ಆಯರ್ ಕೊಡ ಎಂದು ಹೆಸರು.
ಸಂತಾನ ಪ್ರಾಪ್ತಿ, ಶೀಘ್ರ ವಿವಾಹ, ಕೋರ್ಟ್ ವ್ಯಾಜ್ಯ ಪರಿಹಾರ ಹಾಗೂ ಉತ್ತಮ ಆರೋಗ್ಯ ಸಂಪತ್ತಿಗಾಗಿ ಹಿಂದೆ ದಿನಕ್ಕೆ ಒಮ್ಮೆ ಮಾತ್ರ ಸೇವೆ ನಡೆಯುತ್ತಿತ್ತು ಕ್ರಮೇಣ ಬೇಡಿಕೆ ಜಾಸ್ತಿಯಾಗಿ 2007 ರಲ್ಲಿ ( ಬೆಳಿಗ್ಗೆ 7 ರಿಂದ 10, 10 ರಿಂದ ಅಪರಾಹ್ನ 1 ಗಂಟೆ ತನಕ) ದಿನವೊಂದರ ಎರಡು ಸೇವೆಗಾಗಿ 30 ಬ್ರಾಹ್ಮಣ ಕುಟುಂಬಗಳು ತೊಡಗಿಸಿಕೊಂಡಿದ್ದಾರೆ, ಇದೀಗ ಆಯರ್ ಕೊಡ ಸೇವೆ ಒಂದು ವರ್ಷದ ವರೆಗೂ ಬುಕ್ಕಿಂಗ್ ಆಗಿರುತ್ತದೆ.
ಮಾರ್ಗ:
ಉಡುಪಿಯಿಂದ- ಬ್ರಹ್ಮಾವರ-ಬಾರ್ಕೂರು- ಶಿರಿಯಾರ- ಗುಡ್ಡಟ್ಟು-28 ಕಿಲೋ ಮೀಟರ್
ಕುಂದಾಪುರದಿಂದ-ಶಿವಮೊಗ್ಗ ಮಾರ್ಗವಾಗಿ- ಕೋಟೇಶ್ವರ-ಗುಡ್ಡಟ್ಟು-18 ಕಿಲೋ ಮೀಟರ್.
ಶಿವಮೊಗ್ಗ_ ಹೊಸಂಗಡಿ-ಸಿದ್ದಾಪುರ- ಶಂಕರನಾರಾಯಣ-ಗುಡ್ಡಟ್ಟು-147 ಕಿಲೋ ಮೀಟರ್.