ಸುನಿಲ್ ಹೆಚ್. ಜಿ., ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಲಾಕ್‌ಡೌನ್ ಅವಧಿಯಲ್ಲಿ ಬೀದಿ ನಾಯಿಗಳ ಪಾಡು ಹೇಳತೀರದ್ದು. ಹೋಟೆಲ್ ಅಂಗಡಿ, ಮಾರ್ಕೆಟ್ ಎಲ್ಲವೂ ಬಂದ್ ಆದಾಗ ಅವುಗಳದ್ದು ಮೂಕರೋದನೆಯಾಗಿತ್ತು. ಇಂತಹ ಕಠಿಣ ಸಂದರ್ಭದಲ್ಲಿ ಕುಂದಾಪುರದ ಹಂಗಳೂರಿನ ಯುವತಿಯೋರ್ವಳು ಪ್ರತಿನಿತ್ಯವೂ ಬೀದಿ ನಾಯಿಗಳಿಗೆ ಆಹಾರ ನೀಡಿ ಅವುಗಳ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇಂದಿನ ತನಕವೂ ಅದನ್ನು ಮುಂದುವರಿಸಿದ್ದಾರೆ.
ಮೋನಿಶಾ ಗೇಬ್ರಿಯಲ್ ಕರ್ವಾಲೋ ಎಂಬ ಯುವತಿ ಪ್ರತಿನಿತ್ಯವೂ ಸುಮಾರು 30-35 ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದು, ಒಂದು ದಿನವೂ ತಪ್ಪಿದಿಲ್ಲ. ಇವರ ಈ ಸೇವೆಗೆ ಸ್ನೇಹಿತ ಅರವಿಂದ್ ಫೆರ್ನಾಂಡಿಸ್ ಕೈ ಜೋಡಿಸಿದ್ದು, ನಿಶಾ ತಂದೆ-ತಾಯಿ ಕೂಡ ನೆರವಾಗುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
4 ತಿಂಗಳ ನಿರಂತರ ಕಾಯಕ:
ಮಾರ್ಚ್ ತಿಂಗಳಿನಿಂದ ಆರಂಭಿಸಿ ಕಳೆದ 118 ದಿನಗಳಿಂದ ಪ್ರತಿನಿತ್ಯವೂ ಬೀದಿ ನಾಯಿಗಳಿಗೆ ಆಹಾರ ನೀಡಲಾಗುತ್ತಿದೆ. ಅನ್ನದ ಜೊತೆಗೆ ಕೋಳಿ ಹಾಗೂ ತರಕಾರಿ ಪ್ರತಿನಿತ್ಯ ಇದ್ದರೆ ವಾರದಲ್ಲಿ ಎರಡು ದಿನ ಮೀನು ಇರಲಿದೆ. ದಿನವೂ 15 ಕೆ.ಜಿಯಷ್ಟು ಅನ್ನ ತಯಾರಿಸಲಾಗುತ್ತದೆ. ಮಧ್ಯಾಹ್ನ 2:30ರಿಂದ ಆರಂಭಿಸಿ 1 ಗಂಟೆ ಸಮಯ ಹಂಗಳೂರು ಹಾಗೂ ಸುತ್ತಲಿನ 30-35 ಬೀದಿ ನಾಯಿಗಳಿಗೆ ಸ್ವತಃ ಮೋನಿಶಾ ಅವರೇ ಊಟ ಹಾಕಿ, ಬಳಿಕ ಪ್ಲೇಟ್ ಮನೆಗೆ ತಂದು ಸ್ವಚ್ಛಗೊಳಿಸುತ್ತಾರೆ. ಆರಂಭದಲ್ಲಿ ನಡೆದುಕೊಂಡೇ ಹೋಗುತ್ತಿದ್ದ ಅವರು ಮಳೆಗಾಲ ಆರಂಭವಾದ ಬಳಿಕ ಕಾರಿನಲ್ಲಿ ಊಟ ಕೊಂಡೊಯ್ಯುತ್ತಿದ್ದಾರೆ. ಇದರ ನಡುವೆ ಬೀದಿ ನಾಯಿಗಳಿಗೆ ಗಾಯಗಳಾಗಿದ್ದರೆ, ಬೇರೆ ರೋಗದಿಂದ ಬಳಲುತ್ತಿದ್ದರೆ ಅವುಗಳಿಗೂ ಪ್ರೀತಿಯಿಂದಲೇ ಆರೈಕೆ ಮಾಡುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ದಾನಿಗಳ ನೆರವು:
ಆರಂಭದಲ್ಲಿ ಸ್ವಂತ ಹಣದಿಂದ ಈ ಕಾಯಕದಲ್ಲಿ ತೊಡಗಿಕೊಂಡಿದ್ದ ಮೊನಿಶಾ ಹಾಗೂ ಸ್ನೇಹಿತ ಅರವಿಂದ್ ಫೆರ್ನಾಂಡಿಸ್ ಅವರು ಮುಂದೆ ಜಾಸ್ತಿ ನಾಯಿಗಳಿಗೆ ಇನ್ನೂ ಕೆಲವು ದಿನಗಳು ಆಹಾರ ನೀಡಬೇಕಾದ ಸಂದರ್ಭ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ದಾನಿಗಳ ನೆರವು ಕೋರುತ್ತಾರೆ. ಅದರಿಂದಾಗಿ ಆದರಿಂದಾಗಿ ಒಂದಿಷ್ಟು ಸಾಮಾಗ್ರಿ ಹಾಗೂ ಹಣ ದೊರೆಯಿತು. ಸೇವೆಯೂ ಮುಂದುವರಿಯಿತು.
ಬಾಲ್ಯದಿಂದಲೇ ಪ್ರಾಣಿ ಪ್ರೀತಿ:
ಮೋನಿಶಾ ಕುಂದಾಪುರ ತಾಲೂಕಿನ ಹಂಗಳೂರಿನವರು ತಂದೆ ಜೇಮ್ಸ್ ಕರ್ವಾಲೋ ಸಿವಿಲ್ ಕಾಟ್ರಾಕ್ಟರ್, ತಾಯಿ ಆನ್ಸಿಲ್ಲಾ ಕರ್ವಾಲೋ ಸಮಾಜ ಸೇವೆಯಲ್ಲಿ ತೋಡಗಿಕೊಂಡಿದ್ದಾರೆ. ಮೋನಿಶಾ ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನಲ್ಲಿ ಬಿ.ಎ ಪದವಿ ಮುಗಿಸಿ ಬಳಿಕ ಇಂಗ್ಲೆಂಡಿನ ಲ್ಯಾಂಕಸ್ಟರ್ ಯುನಿವರ್ಸಿಟಿಯಲ್ಲಿ ವಕೀಲ ಪದವಿ ಪಡೆದಿದ್ದಾರೆ.
ಬಾಲ್ಯದಿಂದಲೇ ಪ್ರಾಣಿಗಳ ಬಗ್ಗೆ ಒಲವು ಹೊಂದಿದ್ದ ಮೋನಿಶಾ ಅವುಗಳ ಆರೈಕೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಈಗ ಉದ್ಯಮದೊಂದಿಗೆ ತಮ್ಮ ಹವ್ಯಾಸವನ್ನೂ ಮುಂದುವರಿಸುವ ಇರಾದೆ ಅವರದ್ದು.
ಉದ್ಯಮದ ಗುರಿ, ಚಾರಿಟಿ ಕನಸು:
ಪ್ರಾಣಿಪ್ರಿಯರಾಗಿದ್ದ ಮೋನಿಶಾ ಹಾಗೂ ಸ್ನೇಹಿತ ಅರವಿಂದ್ ಫೆರ್ನಾಂಡಿಸ್ ಅವರು ಸಾದು ಪ್ರಾಣಿಗಳ ರಕ್ಷಣೆಗಾಗಿ ಒಂದು ಎನ್ಜಿಓ ಆರಂಭಿಸಬೇಕು ಎಂಬ ಕನಸು ಕಂಡದ್ದರು. ಬೇರೆ ಬೇರೆ ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದರೆ ಬೀದಿ ನಾಯಿಗಳು ಹಸಿವಿನಿಂದ ಇರುವುದನ್ನು ನೋಡಿ ತಮ್ಮ ಸೇವೆ ಆರಂಭಿಸಲು ಅನಿರೀಕ್ಷಿತ ಆರಂಭ ದೊರೆಯಿತು. ಆದ್ಯಾ ಎನಿಮಲ್ ಫೆಲ್ಫೇರ್ ಎಂಬ ಚಾರಿಟಿಯೊಂದನ್ನು ಆರಂಭಿಸಿದ್ದಾರೆ. ಮುಂದೆ ದೊಡ್ಡ ಮಟ್ಟದಲ್ಲಿ ಚಾರಿಟೇಬಲ್ ಟ್ರಸ್ಟ್ ಆರಂಭಿಸುವ ಯೋಜನೆ ಹೊಂದಿದ್ದಾರೆ.
ಲೋಕಾ ಸಮಸ್ತಾ ಸುಖಿನೋಭವಂತು ಎಂಬ ವಾಕ್ಯದಂತೆ ಎಲ್ಲಾ ಜೀವಿಗಳು ಸಮಾನವಾಗಿ ಬದುಕಬೇಕು ಎಂಬ ಕಾಳಜಿ ಅವರದ್ದು. ಬೀದಿ ನಾಯಿಗಳನ್ನು ರಕ್ಷಣೆ ಮಾಡಲು, ಮತ್ತು ಪ್ರಾಣಿಗಳನ್ನು ಆರೈಕೆ ಮಾಡುವ ಶೆಲ್ಟರ್ ವ್ಯವಸ್ಥೆ ಮಾಡಬೇಕು ಎನ್ನುವ ಆಸೆ ಹೊಂದಿದ್ದಾರೆ. ಊರಿನಲ್ಲಿಯೇ ಇದ್ದು ಉದ್ಯಮ ಆರಂಭಿಸಿ ಅದರೊಂದಿಗೆ ಚಾರಿಟಿ ಕೆಲಸಗಳಲ್ಲಿ ತೊಡಗಿಕೊಳ್ಳುವ ಹಂಬಲ ಅವರದ್ದು. ಕುಂದಾಪ್ರ ಡಾಟ್ ಕಾಂ ವರದಿ.
ಭಗವದ್ಗೀತೆ ಪ್ರೀತಿ:
ಮೊನಿಶಾ ಅವರು ಕ್ರಿಶ್ಚಿಯನ್ ಧರ್ಮದ ಅನಿಯಾಯಿಯಾದರೂ, ಎಲ್ಲಾ ಧರ್ಮಗಳ ಬಗ್ಗೆ ಸಹಿಷ್ಣುತೆ ಹಾಗೂ ಒಲವು ಹೊಂದಿದ್ದಾರೆ. ಮಹಾಭಾರತ, ಭಗವದ್ಗೀತೆ, ಕುರಾನ್ ಓದಿದ್ದಾರೆ. ಎಲ್ಲವನ್ನೂ ಧರ್ಮದ ಕನ್ನಡಕದಲ್ಲಿ ನೋಡುವುದಕ್ಕಿಂತ ಎಲ್ಲಾ ಧರ್ಮಗಳಿಂದ ಬದುಕಿಗೆ ಕಲಿಯುವುದು ಸಾಕಷ್ಟಿದೆ ಎನ್ನುವುದು ಅವರ ವಾದ. ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ|| ಎಂಬ ಗೀತೆಯ ಶ್ಲೋಕವೊಂದು ಮೋನಿಶಾರ ಮೇಲೆ ಪ್ರಭಾವ ಬೀರಿತ್ತು. ಇದೀಗ ಭಗವದ್ಗೀತೆಯನ್ನು ಶ್ಲೋಕದ ಆಧಾರದ ಮೇಲೆ ಬದುಕನ್ನು ಸಂತೋಷದಿಂದ ನೋಡುವ ಒಂದು ಪ್ರೇರಣಾದಾಯಕ ಪುಸ್ತಕ ಬರೆಯುತ್ತಿದ್ದಾರೆ/ಕುಂದಾಪ್ರ ಡಾಟ್ ಕಾಂ ವರದಿ/
ಪ್ರಾಮಾಣಿಕತೆಯಲ್ಲಿ ಮನುಷ್ಯರಿಗಿಂತ ಪ್ರಾಣಿಗಳು ಬಹುಪಾಲು ಮೇಲು. ಪ್ರತಿನಿತ್ಯ ಆಹಾರ ನೀಡುತ್ತಿರುವ ಶ್ವಾನಗಳು ನನ್ನನ್ನು ಕಂಡಲ್ಲಿ ಓಡಿ ಬಂದು ಮುದ್ದಾಡುತ್ತವೆ. ನನಗೂ ಈ ಕಾರ್ಯದಲ್ಲಿ ತೃಪ್ತಿ ಸಿಗುತ್ತದೆ. ಈ ಸಂದರ್ಭದಲ್ಲಿ ದಾನಿಗಳ ಸಹಾಯವನ್ನು ಎಂದೂ ಮರೆಯುವುದಿಲ್ಲ. ಪೋಷಕರು ಬೆಂಬಲ ನೀಡಿದ್ದಾರೆ. ಸ್ನೇಹಿತರು ದಾನಿಗಳು ನೆರವಾಗಿದ್ದಾರೆ. – ಮೋನಿಶಾ ಗೇಬ್ರಿಯಲ್ ಕರ್ವಾಲೋ
ಇದನ್ನೂ ಓದಿ:
► ನಾಗರ ಪಂಚಮಿ: ಕರಾವಳಿಗರು ಭಕ್ತಿ ಭಾವದಿ ಆರಾಧಿಸುವ ಹಬ್ಬ – https://kundapraa.com/?p=4587 .
► ಕೋವಿಡ್ -19ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ – https://kundapraa.com/?p=39853 .
► ಕುಂದನಾಡಿನ ಮನೆ ಮಗಳಂತಾದ ಸ್ಪೇನ್ ದೇಶದ ಯುವತಿ ತೆರೆಸಾ – https://kundapraa.com/?p=39813 .