Kundapra.com ಕುಂದಾಪ್ರ ಡಾಟ್ ಕಾಂ

2015ರಲ್ಲಿ ಕುಂದಾಪುರ ತಾಲೂಕಿನಲ್ಲಿ ಸುದ್ದಿಯಾದ, ಸದ್ದು ಮಾಡಿದ ಘಟನೆಗಳು

ಕುಂದಾಪ್ರ ಡಾಟ್ ಕಾಂ ವರದಿ.

ಕುಂದಾಪುರ: ಹೊಸ ವರ್ಷವೆಂಬುದು ನಿತ್ಯ ನಿರಂತರ ಕಾಯಕಕ್ಕೊಂದು ಹೊಸ ಹುರುಪು, ಹೊಳಪು ನೀಡುವ ದಿನ. ಬದಲಾವಣೆ ಬಯಸುವವರಿಗೊಂದು ನೆಪ. ಕನಸು ಕಂಗಳಿಗೊಂದು ಭರವಸೆಯ ಮೂಟೆ. ಹೊಸ ವರ್ಷ ದಿನವೂ ಹರ್ಷ ತರಲಿ ಎಂಬ ಹಾರೈಕೆ ‘ಕುಂದಾಪ್ರ ಡಾಟ್ ಕಾಂ’ನದ್ದು. ಸಂಭ್ರಮದ ನಡುವೆ ಈ ನಿಲ್ಲದ ಕಾಲದ ಹಿಂದೆ ನಡೆದು ಬಂದ ಹಾದಿಯ ಅವಲೋಕನ ಮಾಡುತ್ತಾ ಮುನ್ನಡೆಯೋಣ ಬನ್ನಿ.

2016 ನಮಗೆ ಹೊಸತಾಗಿ ಕಂಡರೂ ಈ ಎಲ್ಲಾ ಸುದ್ದಿ, ಘಟನೆ, ಸವಾಲುಗಳು ಹೊಸತಾಗಿ ಉಳಿದಿಲ್ಲ. ಅದು ನಿರಂತರವಾಗಿ ಘಟಿಸುವಂತದ್ದು. ಆದರೆ ಎಡವಿದಲ್ಲೇ ಮತ್ತೆ ಎಡವದೇ, ಮಾಡಿದ ತಪ್ಪನ್ನೇ ಮತ್ತೆ ಮಾಡದೇ, ಸಹನೆಗೂ ಮೀರಿದ ಆಕ್ರಮಣವನ್ನು ಸಹಿಸಿಕೊಳ್ಳದೇ ಪ್ರತಿಭಟಿಸುತ್ತಾ, ಅಭಿವ್ಯಕ್ತಪಡಿಸುತ್ತಾ, ಅಭಿವೃದ್ಧಿಯ ವ್ಯಾಖ್ಯಾನಕ್ಕೆ ಹೊಸ ಅರ್ಥ ನೀಡುತ್ತಾ, ಸೃಜನಶೀಲ, ಸೌಹಾರ್ದಯುತ ಮನಸ್ಸುಗಳನ್ನು ಕಟ್ಟಲು ಹೊಸವರ್ಷವೊಂದು ಸ್ಪೂರ್ತಿಯಾಗಬೇಕಿದೆ.

ಕುಂದಾಪುರ ತಾಲೂಕಿನ ಮಟ್ಟಿಗೆ 2015ರ ಆರಂಭ ಚನ್ನಾಗಿಯೇ ಆಗಿದ್ದರೂ ಬರಬರುತ್ತಲೇ ಸಾಕಷ್ಟು ತವಕ, ತಲ್ಲಣಗಳನ್ನು ಸೃಷ್ಟಿಸಿತ್ತು. ತಾಲೂಕಿನಾದ್ಯಂತ ಹಿಂದೆಂದೂ ಕಂಡು ಕೇಳರಿಯದ ಘಟನೆಗಳು ನಡೆದು ಹೋದವು. ಇವುಗಳ ಜೊತೆ ಜೊತೆಗೆ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಾದ ಸ್ಥಿತ್ಯಂತರಗಳು, ಹೊಸತನದ ಹುಡುಕಾಟ ಇಡಿ ವರ್ಷವೂ ಕುಂದಾಪುರವನ್ನು ಸುದ್ದಿಯಲ್ಲಿಡುವಂತೆ ಮಾಡಿತ್ತು. ಒಮ್ಮೊಮ್ಮೆ ಕೆಲವು ಸಂಗತಿಗಳು ಅತಿಯಾಯಿತು ಎಂದೂ ಅನ್ನಿಸಿದ್ದೂ ಉಂಟು.

ಬನ್ನಿ 2015ರಲ್ಲಿ ಕುಂದಾಪುರ ತಾಲೂಕಿನ ಜನತೆಯನ್ನು ಮುದಗೊಳಿಸಿದ, ರಂಜಿಸಿದ, ಚಿಂತನೆಗೆ ಹಚ್ಚಿದ, ಬೆರಗಾಗಿಸಿದ, ಬೆಚ್ಚಿ ಬೀಳಿಸಿದ, ನಿದ್ದೆಗೆಡಿಸಿದ ಘಟನೆಗಳ ಸುತ್ತ ಒಂದು ಸುತ್ತು ಹೊಡೆದು ಬರೋಣ.

● ಪೊರ್ಬ್ ಮ್ಯಾಗಜಿನಿನಲ್ಲಿ ಸತೀಶ್ ಆಚಾರ್ಯ, ಕುಂದಾಪುರದಲ್ಲಿ ಕಾರ್ಟೂನು ಹಬ್ಬ
ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಹೆಸರು ಪ್ರಸಿದ್ಧ ಇಂಗ್ಲಿಷ್ ಮ್ಯಾಗಜಿನ್ ಫೋರ್ಬ್ಸ್ ನಲ್ಲಿ ಪ್ರಕಟಗೊಂಡಿದ್ದು ಕುಂದಾಪುರದ ಕೀರಿಟಕ್ಕೆ ಮತ್ತೊಂದು ಗರಿ ಸೇರಿದಂತಾಗಿತ್ತು. ತನ್ನ ಸೂಕ್ಷ್ಮ ಸಂವೇದನೆಯ ರೇಖೆಗಳ ಮೂಲಕವೇ ಪ್ರಸಿದ್ಧಿ ಹೊಂದಿದ್ದ ಸತೀಶ್ ಆಚಾರ್ಯ ಅವರ ಹೆಸರು ಫೋರ್ಬ್ಸ್ ನಲ್ಲಿ ಕಾಣಿಸಿಕೊಂಡದ್ದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿತ್ತು. ಮಾಯಾ ಕಾಮತ್ ಪುರಸ್ಕಾರ 2015ರಲ್ಲಿ ಸತೀಶರಿಗೆ ಕಾರ್ಟೂನ್ ಲೋಕದಲ್ಲಿ ಸಂದ ದೊಡ್ಡ ಗೌರವ. ►ಫೋರ್ಬ್ಸ್ ಚಿಂತಕರ ಪಟ್ಟಿಯಲ್ಲಿ ಸ್ಥಾನ ಪಡೆದ ಕುಂದಾಪುರದ ಸತೀಶ್ ಆಚಾರ್ಯ – http://kundapraa.com/?p=9814

ಕುಂದಾಪುರದಲ್ಲಿದ್ದುಕೊಂಡೇ ಕಾರ್ಟೂನ್ ಪ್ರಪಂಚಕ್ಕೆ ತೆರೆದುಕೊಳ್ಳುವುದರ ಜೊತೆಗೆ ಕಾರ್ಟೂನ್ ಲೋಕದ ಹೊಸ ಸಾಧ್ಯತೆಗಳನ್ನು ಅರಿತು, ಬೆರೆತು, ಕಾರ್ಟೂನಿಷ್ಟ್ ಹಾಗೂ ಕಾರ್ಟೂನ್ ಪ್ರೀಯರಿಗೆ ಮುಖಾಮುಖಿಯಾಗುತ್ತಾ, ಕಾರ್ಟೂನ್ ಪ್ರೀತಿಯನ್ನು ಗುರುತಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದ ಖ್ಯಾತ ಕಾರ್ಟೂನಿಷ್ಠ್ ಸತೀಶ್ ಆಚಾರ‍್ಯ ಅವರ ಮುಂದಾಳತ್ವದಲ್ಲಿ ಕಲಾಮಂದಿರದಲ್ಲಿ 4 ದಿನಗಳ ಕಾರ್ಟೂನು ಹಬ್ಬ ನಡೆದಿತ್ತು. ► http://kundapraa.com/cartoonuhabba

● ಯಕ್ಷದಿಗ್ಗಜ ಗೋವಿಂದ ಶೇರೆಗಾರರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀಪಾತ್ರಗಳ ಮೂಲಕ ತನ್ನ ಕಲಾವರ್ಚಸ್ಸನ್ನು ಅಸಂಖ್ಯ ಯಕ್ಷಪ್ರೀಯರಿಗೆ ಉಣಬಡಿಸಿದ ಕಲಾವಿದ ಕುಂದಾಪುರ ತಾಲೂಕಿನ ಮಾರ್ಗೋಳಿ ಗೋವಿಂದ ಶೇರೆಗಾರ್ ಅವರಿಗೆ 2015ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಇದು ಕುಂದಾಪುರ ತಾಲೂಕಿಗೆ ಹೆಮ್ಮೆ. ► http://kundapraa.com/?p=7197

● ಸಂಗೀತ ಕುವರ ರವಿ ಬಸ್ರೂರ್ ಗೆ ಪ್ರಶಸ್ತಿ
ಹೊಸ ಬಗೆಯ ಸಂಗೀತದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಯಶಸ್ವಿ ಯುವ ಸಂಗೀತ ನಿರ್ದೇಶಕ, ಕುಂದಾಪುರ ತಾಲೂಕಿನ ಬಸ್ರೂರಿನ ಹುಡುಗ ರವಿ ಬಸ್ರೂರು ತೆಕ್ಕೆಯಲ್ಲಿ 2015ರಲ್ಲಿ ಎರಡು ಸಂಗೀತ ಪ್ರಶಸ್ತಿಗಳು ಸೇರಿಕೊಂಡಿದೆ. ಚಿತ್ರರಂಗದಲ್ಲಿ ಸಂಗೀತ ಸ್ವರ ಮೂಡಿಸುತ್ತಿದ್ದ ರವಿ ಬಸ್ರೂರ್ ಅವರಿಗೆ 2015ರಲ್ಲಿ ಅವಳಿ ಪ್ರಶಸ್ತಿ ದೊರೆತಿರುವುದು ಅವರ ಪ್ರತಿಭೆಗೆ ಸಂದ ದೊಡ್ಡ ಗೌರವವರೇ ಸರಿ. ಜೀ ಕನ್ನಡ ವಾಹಿನಿ ಕೊಡಮಾಡಿದ 2014ನೇ ಸಾಲಿನ ‘ಜೀ ಮ್ಯೂಸಿಕ್ ಅವಾರ್ಡ್’ನ ‘ಉತ್ತಮ ಹಿನ್ನೆಲೆ ಸ೦ಗೀತ’ ವಿಭಾಗದಲ್ಲಿ ಉಗ್ರಂ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರೆ, ಕನ್ನಡ ಇಂಟರ್ ನ್ಯಾಷನಲ್ ಮ್ಯೂಸಿಕ್ ಅವಾರ್ಡ್ (ಕಿಮಾ) ಕೊಡಮಾಡುವ ‘ಉತ್ತಮ ಹಿನ್ನೆಲೆ ಸಂಗೀತ’ ವಿಭಾಗದ ಪ್ರಶಸ್ತಿಯನ್ನೂ ಉಗ್ರಂ ಚಿತ್ರಕ್ಕಾಗಿಯೇ ಪಡೆದುಕೊಂಡಿದ್ದಾರೆ. ►ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾನೆ ಕುಂದಾಪುರ ಕುವರ – http://kundapraa.com/?p=4479

● ಕ್ರೀಡಾಪಟು ಅಶ್ವಿನಿ ಅಕ್ಕುಂಜೆ ನಿಶ್ಚಿತಾರ್ಥ
ಭಾರತದ ಹೆಮ್ಮೆಯ ಅಥ್ಲೆಟಿ, ಕುಂದಾಪುರದ ಕುವರಿ ಅಶ್ವಿನಿ ಅಕ್ಕುಂಜೆ ಅವರ ಕ್ರೀಡಾ ಕ್ಷೇತ್ರದಲ್ಲಿ ಎದುರಾಗಿದ್ದ ಕಂಟಕಗಳೆಲ್ಲ ಕಳೆದು ಮತ್ತೆ ಟ್ರ್ಯಾಕಿಗೆ ಬಂದರಲ್ಲದೇ, ವಿವಾಹ ನಿಶ್ಚಿತಾರ್ಥವೂ ಆಯಿತು. ಮಂಗಳೂರು ಬಲ್ಮಠದ ಅಭಿಜಿತ್ ಎಂಬುವವರೊಂದಿಗೆ ಅವರ ನಿಶ್ಚಿತಾರ್ಥ ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ಜರುಗಿತು. ►ಕುಂದಾಪುರದ ಕುವರಿ, ಅಥ್ಲೆಟಿ ಅಶ್ವಿನಿ ಅಕ್ಕುಂಜೆಗೆ ನಿಶ್ಚಿತಾರ್ಥ –  http://kundapraa.com/?p=5735

● ಬ್ರಿಕ್ಸ್‌ ಬ್ಯಾಂಕ್‌ ಪ್ರಥಮ ಅಧ್ಯಕ್ಷರಾಗಿ ಕುಂದಾಪುರ ವಾಮನ್‌‌ ಕಾಮತ್
ಬ್ರಿಕ್ಸ್‌ ಬ್ಯಾಂಕ್‌ನ ಪ್ರಥಮ ಅಧ್ಯಕ್ಷರಾಗಿ ಹೆಸರಾಂತ ಬ್ಯಾಂಕರ್‌‌ ಹಾಗೂ ಅಪ್ಪಟ ಕನ್ನಡಿಗ ಕೆ.ವಿ.ಕಾಮತ್‌‌ (ಕುಂದಾಪುರ ವಾಮನ್‌‌ ಕಾಮತ್‌) ನೇಮಕಗೊಂಡಿದ್ದರು.
ಭಾರತ, ಚೀನಾ, ರಷ್ಯಾ, ದಕ್ಷಿಣಾ ಆಫ್ರಿಕಾ, ಬ್ರೆಜಿಲ್‌‌ ದೇಶಗಳು ರಚಿಸಿಕೊಂಡಿರುವ ಪ್ರಗತಿಶೀಲ ರಾಷ್ಟ್ರಗಳ ಒಕ್ಕೂಟ ‘ಬ್ರಿಕ್ಸ್‌‌’. ಈ ದೇಶಗಳ ಅಭಿವೃದ್ಧಿಗಾಗಿ ಪಾಶ್ಚಾತ್ಯ ರಾಷ್ಟ್ರಗಳ ಹಣಕಾಸು ಸಂಸ್ಥೆಗಳಿಗೆ ಪರ್ಯಾಯವಾಗಿ ಮಾಡಿಕೊಂಡದ್ದಾಗಿದೆ. ಕಾಮತ್‌‌ 2009ರ ಎಪ್ರಿಲ್‌‌ನಲ್ಲಿ ಐಸಿಐಸಿಐ ಬ್ಯಾಂಕ್‌‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ನಿವೃತ್ತಿಯಾಗಿದ್ದರು. ಅಲ್ಲದೇ ಆಗ್ನೇಯ ಏಷಿಯಾನ್‌‌ ಅಭಿವೃದ್ಧಿ ಬ್ಯಾಂಕ್‌‌ನಲ್ಲಿ ಹಲವು ಸೇವೆ ಸಲ್ಲಿಸಿದ್ದರು. 2008ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಗೌರಕ್ಕೆ ಪಾತ್ರರಾಗಿದ್ದರು. ಐಸಿಐಸಿಐ ಸಂಸ್ಥೆ ಉತ್ತುಂಗಕ್ಕೇರುವಲ್ಲಿ ಕಾಮತ್‌‌ ಪರಿಶ್ರಮ ಸಾಕಷ್ಟಿದೆ ಎಂಬುದು ಗಮನಾರ್ಹ. ಕಾಮತ್‌‌ ಗೌಡ್‌ ಕೊಂಕಣಿ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ 1947 ಡಿಸೆಂಬರ್‌ 2ರಂದು ಜನಿಸಿದ ಕಾಮತ್‌ ನಮ್ಮ ಕುಂದಾಪುರದವರು. ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಕಾಮತ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಅಹ್ಮದಾಬಾದ್ ನಿಂದ ಪದವೀಧರರಾಗಿದ್ದಾರೆ.

● ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ವರ್ಗಾವಣೆ
ಕುಂದಾಪುರದಲ್ಲಿ ಕೆಲಕಾಲ ಡಿಎಸ್ಪಿಯಾಗಿದ್ದ ಅಣ್ಣಾಮಲೈ ಉಡುಪಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಭೂ ಮಾಫಿಯಾ, ಮರಳು ಮಾಫಿಯ, ವೇಶ್ಯಾವಾಟಿಕೆ, ಮಟ್ಕಾ, ಕೋಮು ವಿವಾದ, ಸಮಾಜ ಘಾತುಕ ಕೃತ್ಯಗಳು ಹೀಗೆ ಉಡುಪಿ ಜಿಲ್ಲೆಗೆ ಕೆಲವು ದಶಕಗಳ ಕಾಲ ಅಂಟಿದ್ದ ಪಿಡುಗುಗಳಿಗೂ ಒಂದಿಷ್ಟು ಬಿಸಿದ್ದರು. ಕುಂದಾಪುರ ತಾಲೂಕಿನಲ್ಲಿ ಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣಗಳನ್ನೂ ಕೂಡ ಶೀಘ್ರ ಭೇದಿಸಿ ಆರೋಪಿಗಳನ್ನು ಜೈಲಿಗಟ್ಟಿದ್ದು ಈಗ ಇತಿಹಾಸ. ಸಮಾಜ ಸ್ನೇಹಿ ಪೊಲೀಸ್ ಇಲಾಖೆ, ಸ್ನೇಹಪರ ನಡತೆ, ವಿದ್ಯಾರ್ಥಿ ಸುರಕ್ಷಾ ಕ್ರಮಗಳು ಅಣ್ಣಾಮಲೈ ಅವರ ಸಾಮಾಜಿಕ ಕಾಳಜಿಯನ್ನು ಜನ ಕೊಂಡಾಡುವಂತೆ ಮಾಡಿತ್ತು. ಅವರ ವರ್ಗಾವಣೆ ವಿಚಾರ ಪದೆ ಪದೆ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗಿ ಪ್ರತಿಭಟನೆ, ಮುಷ್ಕರ ಮಾಡುವ ಹಂತಕ್ಕೆ ತಲುಪಿತ್ತಾದರೂ ಸ್ವತಃ ಅಣ್ಣಾಮಲೈ ಅವರೇ ಪ್ರತಿಭಟನೆ ನಡೆಸದಂತೆ ಮನವಿ ಮಾಡಿಕೊಂಡಿದ್ದರು. ► ಉಡುಪಿ ಎಸ್ಪಿ ಅಣ್ಣಾಮಲೈ ವರ್ಗಾವಣೆ ವದಂತಿ ಕೊನೆಗೂ ನಿಜವಾಯಿತೆ? – http://kundapraa.com/?p=9769

● ವಾಟ್ಸಪ್ – ಕುಂದಗನ್ನಡ ಮನು ಹಂದಾಡಿ
ನವಿರಾದ ಹಾಸ್ಯದ ಮೂಲಕ ಕುಂದಾಪ್ರ ಕನ್ನಡವನ್ನು ವಿಶ್ವಾದ್ಯಂತ ಕೇಳಿಸಿದ ಕೀರ್ತಿ ಮನು ಹಂದಾಡಿಯದ್ದು. ಬದಲಾದ ಜಮಾನಕ್ಕೆ ತಕ್ಕಂತೆ ವಾಟ್ಸಪ್ ಮೂಲಕ ಕುಂದಾಪ್ರ ಕನ್ನಡದಲ್ಲಿ ಆಡಿಯೋ ಮಾಡಿ, ಯಾವುದೋ ಸನ್ನಿವೇಶವನ್ನಿಟ್ಟುಕೊಂಡು ವಿಡಿಯೋಗಳಿಗೆ ಹಿನ್ನೆಲೆ ಧ್ವನಿ ನೀಡಿ ಕೇಳಿದವರ, ನೋಡಿದವರ ಮನದಲ್ಲೊಂದು ನಗು ಹುಟ್ಟು ಹಾಕಿದ್ದರು. 2015ರಲ್ಲಿ ಅವರ ಹೆಚ್ಚಿನ ಆಡಿಯೋ, ವಿಡಿಯೋಗಳು ಪ್ರಸಿದ್ಧಿ ಪಡೆದಿದ್ದವು. ಅಂತರ್ಜಾಲದಲ್ಲಿ ಅವರ ಪ್ರಸಿದ್ಧಿ ಎಷ್ಟಿತ್ತೆಂದರೇ ಫೇಸ್ಬುಕ್ ಖಾತೆ ತೆರೆದ ಮೂರೇ ದಿನದಲ್ಲಿ ಫ್ರೆಂಡ್ ರಿಕ್ವೆಸ್ಟ್ ಭರ್ತಿಯಾಗಿದ್ದವು. ಇಂದಿಂಗೂ ಹಂದಾಡಿ ಸ್ವರ ಸಾಮಾಜಿಕ ತಾಣಗಳಲ್ಲಿ ಚಿರಪರಿಚಿತವಾಗಿ ಉಳಿದಿದೆ. ಬ್ರಹ್ಮಾವರದವರಾದ ಮನು ಹಂದಾಡಿ ವೃತ್ತಿಯಲ್ಲಿ ಹುಬ್ಬಳ್ಳಿಯ ಶಾಲೆಯೊಂದರಲ್ಲಿ ಇಂಗ್ಲೀಷ್ ಅಧ್ಯಾಪಕರು.

● ಗ್ರಾಮ ಪಂಚಾಯತ್ ಚುನಾವಣೆ
ರಾಜ್ಯದಲ್ಲಿ ನಡೆದ ಗ್ರಾಮ ಸರಕಾರದ ಚುನಾವಣೆಯಲ್ಲಿ ಕುಂದಾಪುರ ತಾಲೂಕಿನ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 29 ಪಂಚಾಯತಿಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡೇ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 24 ಪಂಚಾಯತಿಗಳನ್ನು ಪಡೆದಿದ್ದರು. ಉಳಿದ 5 ಗ್ರಾಮ ಪಂಚಾಯತಿಗಳಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿತ್ತು. ► ಗ್ರಾಮ ಸರಕಾರಕ್ಕೆ ಆಯ್ಕೆಯಾದರು ಪ್ರತಿನಿಧಿಗಳು – http://kundapraa.com/?p=3083

● ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಭಿನ್ನಮತ. ಜಯಪ್ರಕಾಶ್ ಹೆಗ್ಡೆ ಭಂಡಾಯ
ಮೇಲ್ಮನೆಗಾಗಿ ನಡೆದ ಕದನದಲ್ಲಿ ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರತಾಪಚಂದ್ರ ಶೆಟ್ಟಿ ವಿಧಾನ ಪರಿಷತ್ ಗೆ ಮತ್ತೆ ಪ್ರವೇಶಿಸಿದರು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ ಪರಾಭವಗೊಂಡರೂ ಹೆಚ್ಚಿನ ಮತ ಪಡೆದು ಪ್ರಾಬಲ್ಯ ತೋರ್ಪಡಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಗಿಂತ ಜಯಪ್ರಕಾಶ ಹೆಗ್ಡೆ ಪ್ರಬಲ ಪ್ರತಿಸ್ವರ್ಧಿಯಾಗಿದ್ದರು. ಅವಿಭಜಿತ ಜಿಲ್ಲೆಯ ಕಾಂಗ್ರೆಸ್ ಶಾಸಕರು ಅವರನ್ನು ಮಣಿಸಲು ಸ್ವತಃ ಪ್ರಚಾರಕ್ಕಿಳಿದಿದ್ದರು. ►ವಿಧಾನ ಪರಿಷತ್ ಚುನಾವಣೆ: ಯಾರು ಹಿತವರು ನಿಮಗೆ ಈ ಮೂವರೊಳಗೆ… – http://kundapraa.com/?p=9545 ►ಪರಿಷತ್ ಕದನ: ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಚಂದ್ರ ಶೆಟ್ಟರಿಗೆ ಗೆಲುವು – http://kundapraa.com/?p=9775

● ಮೃತ ಪೊಲೀಸ್ ಶ್ರೀಧರ್ ಪರವಾದ ನ್ಯಾಯ. ಆಪರಾಧಿಗಳಿಗೆ ಗಲ್ಲು
ಕುಂದಾಪುರದ ಸಂಗಮ್ ಸೇತುವೆ ಬಳಿ 2010ರ ಮೇ 31ರಂದು ಬೈಂದೂರು ಪೊಲೀಸ್ ಪೇದೆ ಶ್ರೀಧರ್ ಅವರನ್ನು ಹತ್ಯೆಗೈದ ಪ್ರಕರಣದ ವಿಚಾರಣೆಯ ತೀರ್ಪು 5ವರ್ಷಗಳ ಬಳಿಕ 2015 ಮೇ 12ರಂದು ಹೊರಬಿದ್ದಿತ್ತು. ಶ್ರೀಧರ್ ಅವರನ್ನು ಹತ್ಯೆಗೈದ ಆರೋಪಿ ರಘು ಎಂಬುವವನಿಗೆ ಜೀವಾವಧಿ ಶಿಕ್ಷೆ ಹಾಗೂ ವೃತ್ತನಿರೀಕ್ಷಕ ಕಾಂತರಾಜ್ ಮೇಲೆ ಹಲ್ಲೆಗೆ ಮುಂದಾದ ಆರೋಪಿ ರಾಜೇಶ್ ಎಂಬಾತನಿಗೆ 5 ವರ್ಷ ಕಠಿಣ ಸಜೆ ವಿಧಿಸಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ತೀರ್ಪು ಪ್ರಕಟಿಸಿದ್ದರು. ►ಕುಂದಾಪುರವನ್ನು ಬೆಚ್ಚಿ ಬಿಳಿಸಿದ ಪ್ರಕರಣ: ಪೊಲೀಸ್ ಪೇದೆ ಶ್ರೀಧರ್ ಹಂತಕರಿಗೆ ಶಿಕ್ಷೆ – http://kundapraa.com/?p=2641

● ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರ
ಕುಂದಾಪುರ ತಾಲೂಕಿನ ಏಕೈಕ ಮಹಿಳಾ ಪೊಲೀಸ್ ಠಾಣೆಯನ್ನು ಉಡುಪಿಗೆ ಸ್ಥಳಾಂತರಿಸುವುದಕ್ಕೆ ಕುಂದಾಪುರದ ನಾಗರೀಕರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಪ್ರತಿಭಟನೆಗಳು ನಡೆದು ಹಿರಿಯ ಅಧಿಕಾರಿಗಳು, ಮಂತ್ರಿಗಳಿಗೆ ಸಾಕಷ್ಟು ಭಾರಿ ಮನವಿ ನೀಡಲಾಗಿದೆ. ಆದರೆ ಸ್ಥಳಾಂತರ ವಿಚಾರ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ. ►ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ನಾಗರೀಕರ ವಿರೋಧ –http://kundapraa.com/?p=2488

● 2015ರ ಮೊದಲ ಮಳೆಯ ನೆರೆಗೆ ಕುಂದಾಪುರ ತತ್ತರ
ಮಳೆಯಿಲ್ಲ ಎಂದು ಕಂಗಾಲಾಗಿದ್ದ ಕುಂದಾಪುರ ತಾಲೂಕಿನ ಜನತೆಗೆ ಒಂದೇ ಸವನೇ ಸುರಿದ ಧಾರಾಕಾರ ಮಳೆ ಸಂತಸವನ್ನುಂಟುಮಾಡಿತ್ತಾದರೂ ಹಲವೆಡೆ ಮನೆ, ರಸ್ತೆ, ಕೃಷಿ ಭೂಮಿ, ತಗ್ಗು ಪ್ರದೇಶಗಳು ಜಲಾವೃತಗೊಂಡು ಆತಂಕ ಮೂಡಿಸಿತು. ಕುಂದಾಪುರ ನಗರ ಸೇರಿದಂತೆ ತಾಲೂಕಿನ ಗಂಗೊಳ್ಳಿ, ನಾವುಂದ, ಮರವಂತೆ, ತೆಕ್ಕಟ್ಟೆ, ಕೊಟೇಶ್ವರ, ಬಸ್ರೂರು, ಅಮಾಸೆಬೈಲು, ಸಿದ್ಧಾಪುರ, ಹಳ್ಳಿಹೊಳೆ, ಕೊಲ್ಲೂರು, ಜಡ್ಕಲ್, ಬೈಂದೂರು, ಬೆಳ್ವೆ, ಗೊಳಿಯಂಗಡಿ ಮುಂತಾದೆಡೆ ಭಾರಿ ಮಳೆ ಸುರಿದಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರೇ, ಕೆಲವೆಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಕೃತಕ ನೆರೆ ಸೃಷ್ಟಿಯಾಗಿತ್ತು. ►ಅಬ್ಬರಿಸಿದ ಮಳೆಗೆ ತತ್ತರಗೊಂಡ ಕುಂದಾಪುರ – http://kundapraa.com/?p=3976

● ಬೈಂದೂರಿನ ಅಕ್ಷತಾ, ಶಂಕರನಾರಾಯಣದ ಸುಚಿತ್ರಾಳ ಅಮಾನುಷ ಕೊಲೆ ಪ್ರಕರಣ.

‘ನಾನು ಆದರ್ಶ ಇಂಜಿನಿಯರ್ ಆಗಿಯೇ ಆಗುವೆ. ನನ್ನ ಸಮಯ ಅತ್ಯಮೂಲ್ಯ. ಏನನ್ನಾದರೂ ಸಾಧಿಸಬಲ್ಲ ಶಕ್ತಿಯ ಚಂಡು ನಾನು’ ಹೀಗೆ ತನ್ನ ಡೈರಿಯ ಪುಟಗಳಲ್ಲಿ ಬರೆದುಕೊಂಡು, ನೂರಾರು ಕನಸುಗಳನ್ನು ಹೊತ್ತು, ಪ್ರತಿದಿನವೂ ದುರ್ಗಮ ಕಾಡು ಹಾದಿಯನ್ನು ದಾಟಿ ಕಾಲೇಜಿಗೆ ಬರುತ್ತಿದ್ದ ಅಕ್ಷತಾ ದೇವಾಡಿಗ ಎಂಬ ದಿಟ್ಟ ನಿಲುವಿನ ಆ ಹೆಣ್ಣುಮಗಳು ಪಡ್ಡೆ ಹುಡುಗನ ದುಷ್ಕೃತ್ಯಕ್ಕೆ ಬಲಿಯಾದಳು. ದುಷ್ಕೃತ್ಯ ನಡೆಸಿದಾತ ಸಿಕ್ಕಿಬಿದ್ದ ಆದರೆ ಪ್ರತಿಭಾವಂತೆಯೊಳಗಿದ್ದ ಅವಳ ಬೆಟ್ಟದಷ್ಟು ಕನಸುಗಳನ್ನು ನನಸಾಗಿಸಲು ಯಾರಿಂದ ಸಾಧ್ಯವಾದಿತು? ► ಆರಿದ ಅಕ್ಷತಾ ಎಂಬ ಬೆಳಕು- http://kundapraa.com/?p=3593

ಈ ಘಟನೆ ನಡೆದು ಕೆಲವೇ ತಿಂಗಳುಗಳಲ್ಲಿ ಗೊಳಿಯಂಗಡಿ ಸಮೀಪದ ಸುಚಿತ್ರಾ ಎಂಬ ಹೆಣ್ಣು ಮಗಳು ನಿಷ್ಕರುಣಿಯ ದುಷ್ಕೃತ್ಯಕ್ಕೆ ಬಲಿಯಾದಳು. ಒಂದು ಘಟನೆಯಿಂದ ಚೇತರಿಸಿಕೊಳ್ಳುತ್ತಿದ್ದ ಜನಕ್ಕೆ ಮತ್ತೊಂದು ಘಟನೆ ಆಘಾತ ತಂದೊಡ್ಡಿತು. ದೇಶದ ದೊಡ್ಡ ನಗರಗಳಿಗಷ್ಟೇ ಸೀಮಿತ ಎಂಬ ಪ್ರಕರಣಗಳು ಕುಂದಾಪುರದಲ್ಲಿಯೂ ನಡೆದುಹೊಯಿತು. ►ಗೋಳಿಯಂಗಡಿ: ಯುವತಿಯ ಕೊಲೆ. ಅನುಮಾನಾಸ್ಪದ ವ್ಯಕ್ತಿಯ ಬಂಧನ – http://kundapraa.com/?p=6056

ಕುಂದಾಪುರದ ಖಾಸಗಿ ಲಾಡ್ಜ್ ನಲ್ಲಿ ನಡೆದ ಲಲಿತಾ ದೇವಾಡಿಗರ ಕೊಲೆ, ಬೆಳ್ವೆ ಉಷಾ ಶೆಟ್ಟಿ ಕೊಲೆ ಪ್ರಕರಣ, ಕುಂಭಾಶಿ ಜಯಮಾಲ ಸೇರಿದಂತೆ ಮಹಿಳೆಯರ ಕೊಲೆ ಪ್ರಕರಣಗಳು 2015ರ ಕರಾಳ ಅಧ್ಯಾಯಗಳಾಗಿ ಉಳಿದಿದೆ.

● ಮರಳು ಗಣಿಗಾರಿಕೆಗೆ ನಲುಗಿದ ಕುಂದಾಪುರ
ಕಳೆದ ವರ್ಷಪೂರ್ತಿ ಕುಂದಾಪುರ ತಾಲೂಕಿನ ಹೊಳೆಗಳಲ್ಲಿ ಮರಳು ಲೂಟಿ ಎಗ್ಗಿಲ್ಲದೇ ನಡೆದಿದ್ದು, ಸ್ಥಳಿಯರು ನಿದ್ದೆಗೆಡಿಸಿತ್ತು. ಅಲ್ಲಲ್ಲಿ ಪ್ರತಿಭಟನೆಗಳು ನಡೆದರೂ ಪರಿಣಾಮ ಮಾತ್ರ ಶೂನ್ಯ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿದ್ದೆಗೆ ಜಾರಿದ್ದಂತೂ ಸತ್ಯ. ಮಳೆಗಾಲದ ಮೂರು ತಿಂಗಳನ್ನು ಹೊರತುಪಡಿಸಿ ಉಪ್ಪುನೀರಿನ ಮರಳನ್ನೂ ನಿರ್ಮಾಣ ಕಾರ್ಯಕ್ಕೆ ಬಳಸಿಕೊಂಡದ್ದರ ಹಿಂದಿನ ದಂದೆ ಗೊಚರವಾಗುತ್ತದೆ. ಮರಳು ದಿಣ್ಣೆಗಳನ್ನು ತೆರವುಗೊಳಿಸುವ ನೆಪವೊಡ್ಡಿ ನದಿತೀರ ಪ್ರದೇಶಗಳಿಗೆ ಆಗಬಹುದಾದ ಪರಿಣಾಮಗಳನ್ನೂ ಲೆಕ್ಕಿಸದೇ, ಕೆಲವೆಡೆ ನದಿಯನ್ನು ಒತ್ತುವರಿ ಮಾಡಿಕೊಂಡು ಮರಳುಗಾರಿಕೆ ನಡೆದಿತ್ತು. ಇನ್ನೊಂಡೆದೆ ಸಿಹಿ ನೀರಿನ ಮರಳುಗಾರಿಕೆಗೆ ಅವಕಾಶ ಕೊಡದೇ ನಿರ್ಮಾಣ ಕಾರ್ಯಗಳು ಕುಂಠಿತವಾಗುವಂತೆ ಮಾಡಲಾಗಿತ್ತು. ಹೆರಿಕುದ್ರು, ಕಂಡ್ಲೂರು, ಬಳ್ಕೂರು, ಬಿಜೂರು ಅಕ್ರಮ ಮರಳುಗಾರಿಕೆಯಿಂದಾಗಿ ಸುದ್ದಿಯಾದ ಪ್ರದೇಶಗಳು. ►ಅಕ್ರಮ ಮರಳುಗಾರಿಕೆ : ನೆಮ್ಮದಿಯ ಬದುಕಿಗೆ ನಿವಾಸಿಗಳ ಮನವಿ – http://kundapraa.com/?p=2829 ►ಮರಳು ಮಾಫಿಯಾ ತಡೆಗೆ ಆಗ್ರಹಿಸಿ ಪ್ರತಿಭಟನೆ – http://kundapraa.com/?p=3964

● ದೇವಸ್ಥಾನಗಳ ಸರಣಿ ಕಳ್ಳತನ, ಪತ್ತೆಯಾಗದ ಕಳ್ಳರು
2015ರ ಜೂನ್ ತಿಂಗಳಿನಿಂದಿಚೆಗೆ ಕುಂದಾಪುರ ತಾಲೂಕಿನಲ್ಲಿ ಏಳಕ್ಕೂ ಹೆಚ್ಚು ದೇವಾಲಯಗಳ ಕಳ್ಳತನ ಪ್ರಕರಣ ವರದಿಯಾಗಿತ್ತು. ಆದರೆ ಈವರೆಗೆ ಕಳ್ಳರು ಮಾತ್ರ ಪತ್ತೆಯಾಗಿಲ್ಲ. ಹೀಗೆ ಒಂದರ ಹಿಂದೊಂದು ಸರಣಿ ಕಳ್ಳತನ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿರುವ ಪೊಲೀಸ್ ಇಲಾಖೆ ಶೀಘ್ರವೇ ಕಳ್ಳರನ್ನು ಪತ್ತೆಹಚ್ಚಿ ಬಂಧಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಕುಂದಾಪುರ ತಾಲೂಕಿನ ಕಾಲ್ತೋಡು ಮಹಾಲಸಾ ಮಾರಿಕಾಂಬ ದೇವಸ್ಥಾನ, ಕಿರಿಮಂಜೇಶ್ವರದ ಅಗಸ್ತೇಶ್ವರ ದೇವಸ್ಥಾನ, ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಸಮೀಪದ ದೈವಸ್ಥಾನ, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನ, ತಲ್ಲೂರು ರಕ್ತೇಶ್ವರ ದೇವಸ್ಥಾನ ಸೇರಿದಂತೆ ಉಡುಪಿ ಜಿಲ್ಲೆಯ ಹಲವು ದೇವಸ್ಥಾನದಲ್ಲಿ ಕಳವು ನಡೆದಿತ್ತು. ►ಕುಂದಾಪುರ ತಾಲೂಕಿನಲ್ಲಿ 5 ತಿಂಗಳಿನಲ್ಲಿ 6ಕ್ಕೂ ಹೆಚ್ಚು ದೇವಾಲಗಳ ಕಳ್ಳತನ. ಈವರೆಗೂ ಕಳ್ಳರ ಸುಳಿವಿಲ್ಲ – http://kundapraa.com/?p=7129

● ವಿಧಿಯಾಟಕ್ಕೆ ಬಲಿಯಾದ ಪ್ರಾಣ ಸ್ನೇಹಿತರು
ಅವರಿಬ್ಬರೂ ಜೀವದ ಗೆಳೆಯರು. ತಮ್ಮದೇ ಉದ್ಯೋಗ-ವ್ಯವಹಾರವನ್ನು ಮಾಡಿಕೊಂಡು ಚನ್ನಾಗಿಯೇ ಇದ್ದರು. ಬದುಕಿನ ನೂರಾರು ಕನಸು ಹೊತ್ತ ಈ ಸ್ನೇಹಿತರು ಸಾವುನಲ್ಲೂ ಜೊತೆಯಾದರು. ನೆಚ್ಚಿನ ಬೈಕಿನಲ್ಲಿ ಹೊರಟಿದ್ದ ಅವರು ಜೀವಂತವಾಗಿ ಮರಳಲೇ ಇಲ್ಲ. ಅಂದು ಸಂಜೆ ಬೈಕ್ ಹಾಗೂ 407 ಗೂಡ್ಸ್ ಟೆಂಪೋ ನಡುವಿನ ಅಪಘಾತದಲ್ಲಿ ಸಹಸವಾರಾಗಿದ್ದ ಸುರೇಂದ್ರ ಗಾಣಿಗ ಸ್ಥಳದಲ್ಲಿಯೇ ಮೃತಪಟ್ಟರೇ, ಬೈಕ್ ಚಲಾಯಿಸುತ್ತಿದ್ದಸಂಪತ್ ಪೂಜಾರಿ ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ವಂದಿಸದೇ ತಡರಾತ್ರಿ ಮೃತಪಟ್ಟಿದ್ದಾರೆ. ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಹೆಮ್ಮಾಡಿಯಲ್ಲಿಯೂ ಮನೆಮಾತಾಗಿದ್ದ ಸ್ನೇಹಿತರು ಮೃತಪಟ್ಟಿದ್ದು ಹೆಮ್ಮಾಡಿಯ ಸ್ಮಶಾನ ಮೌನ ಆವರಿಸುವಂತೆ ಮಾಡಿತ್ತು. ►ಒಂದೇ ಬೈಕಿನಲ್ಲಿ ಜೀವ ಕಳೆದುಕೊಂಡ ಪ್ರಾಣ ಸ್ನೇಹಿತರು- http://kundapraa.com/?p=9806

ತಲ್ಲೂರಿನಲ್ಲಿ ಕಾರ್ಯಕ್ರಮವೊಂದರ ಬ್ಯಾನರ್, ಬಂಟಿಂಗ್ಸ್ ಕಟ್ಟಲು ಹೋಗಿದ್ದ ಸ್ನೇಹಿತರು ವಿದ್ಯುತ್ ಸ್ವರ್ಶದಿಂದಾಗಿ ಜೊತೆಯಾಗಿಯೇ ಪ್ರಾಣ ಕಳೆದುಕೊಳ್ಳಬೇಕಾಯಿತು. ಕೋಡಿಯ ತಂಪು ಪಾನೀಯ ತಯಾರಿಕಾ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮನೋಜ್ ಕುಟುಂಬದ ಆಧಾರ ಸ್ಥಂಭವಾಗಿದ್ದರು. ಭಂಡಾರ್ಕಾರ್ಸ್ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿಯಾಗಿದ್ದ ಸುನಿಲ್ ಕೂಡ ಬಿಡುವಿನ ವೇಳೆ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ ತನ್ನ ತಾಯಿಗೆ ನೆರವಾಗುತ್ತಿದ್ದರು. ಮನೋಜ್ ಹಾಗೂ ಸುನಿಲ್ ಇಬ್ಬರು ಆತ್ಮೀಯರು. ಒಂದು ಸ್ವಂತ ಉದ್ಯಮ ಆರಂಭಿಸುವ ಆಲೋಚನೆಯಲ್ಲಿಯೂ ಇದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಜೊತೆಯಾಗಿಯೇ ಮೃತಪಟ್ಟರು. ತಲ್ಲೂರು ಪರಿಸರದಲ್ಲಿ ಎಲ್ಲರೊಂದಿಗೂ ಬೆರೆತು, ಸಾಮಾಜಿಕ ಸಂಘಟನೆಗಳಲ್ಲಿಯೂ ಸಕ್ರಿಯವಾಗಿದ್ದ ಮನೋಜ್ ಹಾಗೂ ಸುನಿಲ್ ಅವರ ಸಾವು ಊರವರಿಗೆ ಆಘಾತ ತಂದೊಡ್ಡಿದೆ. ►ತಲ್ಲೂರು: ವಿದ್ಯುತ್ ತಗುಲಿ ಇಬ್ಬರು ಯುವಕರ ದುರ್ಮರಣ, ಓರ್ವ ಗಂಭೀರ – http://kundapraa.com/?p=9772

● ಕುಂದಾಪುರ ಪೊಲೀಸರಿಗೆ ಕಳ್ಳರು ಚಳ್ಳೆಹಣ್ಣು ತಿನ್ನಿಸಿದ ವಿಡಿಯೋ
ಹಾಡಹಗಲೇ ಕುಂದಾಪುರ ತಾಲೂಕಿನ ತಲ್ಲೂರು ರಾಷ್ಟ್ರೀಯ ಹೆದ್ದಾರಿಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಸರ ಹರಿದುಕೊಂಡು ಬೈಕಿನಲ್ಲಿ ಪರಾರಿಯಾದ ಚಾಲಾಕಿ ಕಳ್ಳರನ್ನು ಹಿಡಿಯಲು ಕುಂದಾಪುರದ ಶಾಸ್ತ್ರೀವೃತ್ತದಲ್ಲಿ ಪೊಲೀಸರು ವಿಘಲರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ವಿಡಿಯೋ ನೋಡಿದ ಜನ ಕಳ್ಳರನ್ನು ಹಿಡಿಯಲಾಗದ ಬಗ್ಗೆ ಪೊಲೀಸರ ಬಗ್ಗೆ ಅಸಮಾಧಾನವನ್ನು ಹೊರಗೆಡವುತ್ತಿದ್ದರೇ, ಇತ್ತ ಇಲಾಖೆಯ ಬಳಿ ಗೌಪ್ಯವಾಗಿರಬೇಕಿದ್ದ ಈ ವಿಡಿಯೋ ಎಲ್ಲರ ಮೊಬೈಲುಗಳಿಗೆ ಬಂದು ಕುಳಿತಿರುವ ಬಗ್ಗೆ ಪೊಲೀಸರು ತಲೆಕೆಡಿಕೊಂಡಿದ್ದರು.►ಕಳ್ಳರು ತಪ್ಪಿಸಿಕೊಂಡ ವಿಡಿಯೋ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ – http://kundapraa.com/?p=4843

● ರಾಷ್ಟ್ರೀಯ ಹೆದ್ದಾರಿ ಅವಾಂತರ, ಅಪಘಾತ ನಿರಂತರ
ಕುಂದಾಪುರದಿಂದ ಸುರತ್ಕಲ್ ಹಾಗೂ ಕಾರವಾರದ ವರೆಗೆ ನಡೆಯುತ್ತಿರುವ ಚಥುಷ್ಪತ ಕಾಮಗಾರಿ ಸೃಷ್ಠಿಸಿದ ಅವಾಂತರಗಳು ಒಂದೆರಡಲ್ಲ. ಅಪೂರ್ಣ ಕಾಮಗಾರಿಗಳು ಜನರ ಸಂಚಾರಕ್ಕೆ ಸಂಚಾಕಾರವನ್ನು ತಂಡೊಡ್ಡಿದ್ದವು. ಡಿವೈಡರ್ ಮುಂತಾದ ಕಾರಣಗಳಿಂದಾಗಿ, ಮೃತಪಟ್ಟ, ಗಾಯಗೊಂಡ ಜನರ ಸಂಖ್ಯೆ ಎರಡಂಕಿ ದಾಟುತ್ತದೆ. ಆದರೂ ನಿರ್ಲಕ್ಷಿ ಮಾತ್ರ ಹಾಗೆಯೇ ಮುಂದುವರಿದಿದೆ.

● ಮರೆಯಾದರೂ ನೆನಪಲ್ಲಿ ಉಳಿದವರು

ಪುಂಡಲೀಕ ನಾಯಕ್
ಭಾರತೀಯ ಜನತಾ ಪಕ್ಷದ ಹಿರಿಯ ಕಟ್ಟಾಳು, ಮಾಜಿ ಪುರಸಭಾ ಸದಸ್ಯ, ಪುಂಡಲೀಕ ನಾಯಕ್ (75) ಹೃದಯಾಘಾತದಿಂದ ನಿಧನರಾದರು. ಮೃದು ಸ್ವಭಾವದ, ಮಿತಭಾಷಿಕರೂ ಆಗಿದ್ದ ನಾಯಕರು ಬದುಕಿನ ಸಂಧ್ಯಾ ಕಾಲದವರೆಗೂ ಬ್ರಹ್ಮಚರ್ಯವನ್ನು ಆಚರಿಸಿದ್ದರು. ಹೋಟೆಲ್ ಉದ್ಯಮ, ಪಕ್ಷ, ಸಂಘಟನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಕ್ರೀಯ ಸದಸ್ಯರಾಗಿದ್ದ ನಾಯಕರು ಕುಂದಾಪುರದಲ್ಲಿ ಸಂಘವನ್ನು ಬಲಪಡಿಸಿದವರಲ್ಲಿ ಓರ್ವರು. ►ಪುಂಡಲೀಕ ನಾಯಕ್ ನಿಧನ – http://kundapraa.com/?p=7214

ರತ್ನಾಕರ ಶೇರುಗಾರ್‌
ಹಿರಿಯ ಕಾಂಗ್ರೆಸಿಗ ಹಾಗೂ ಪುರಸಭೆಯ ಮಾಜಿ ಸದಸ್ಯ, ಕುಂದಾಪುರದಲ್ಲಿ ತನ್ನದೇ ಹೆಸರು ಗಳಿಸಿದ್ದ ರತ್ನಾಕರ ಶೇರುಗಾರ್ ಅಚಾನಕ್ ಆಗಿ ಛಾವಣಿಯಿಂದ ಬಿದ್ದು ಮೃತಪಟ್ಟಿದ್ದರು. ►ಪುರಸಭಾ ಮಾಜಿ ಸದಸ್ಯ ರತ್ನಾಕರ ಶೇರುಗಾರ್ ಸಾವು –http://kundapraa.com/?p=3422

ಕುಂದೇಶ್ವರ ರಾಜ
ಕುಂದಾಪುರದ ವಿದ್ಯಾರ್ಥಿಗಳಿಗೆ ಪ್ರೀಯನಾಗಿ ಕಳೆದ ಕೆಲವು ದಶಕಗಳಿಂದ ಕುಂದೇಶ್ವರ ಪರಿಸರದಲ್ಲೇ ತಂಗಿದ್ದ ಕುಂದೇಶ್ವರ ರಾಜ ರಿಕ್ಷಾ ಅಪಘಾತದಲ್ಲಿ ಮೃತಪಟ್ಟಿದ್ದರು. ಆತನ ಶವ ಸಂಸ್ಕಾರ ಮಾಡಲು ಬಂಧುಗಳ ಸುಳಿವಿರದ ಕಾರಣ ಕುಂದೇಶ್ವರ ಪರಿಸರದ ಜನಗಳೇ ಶವಯಾತ್ರೆಯನ್ನು ನಡೆಸಿ ಶವಸಂಸ್ಕಾರ ಮಾಡಿದರು. ತಮ್ಮ ಮನೆಯ ಒಬ್ಬ ಬಂಧುವನ್ನು ಕಳೆದುಕೊಂಡಂತೆ ಸಂಕಟ ಪಟ್ಟಿದ್ದರು. ಕುಂದೇಶ್ವರ ಪರಿಸರದ ಶಾಲೆಯಲ್ಲಿ ಆತನ ಸಾವಿನ ಸುದ್ದಿಯನ್ನು ನೋಟಿಸ್ ಬೋರ್ಡಿನಲ್ಲಿ ಪ್ರಕಟಿಸಿ ಗೌರವ ಸಲ್ಲಿಸಿದ್ದರು. ಗೊತ್ತು ಗುರಿ ಇಲ್ಲದ, ಅರೆ ಮಾತಿನ ರಾಜ, ಎಲ್ಲರಿಗೂ ಪ್ರೀಯನಾಗಿ ಬದುಕಿದ್ದ. ರಾಜನಾಗಿಯೇ ಹೊರಟು ಹೋದ. ►ರಾಜನಿಲ್ಲದ ಕುಂದೇಶ್ವರ, ವಿದ್ಯಾರ್ಥಿಗಳಿಗೆ ಬೇಸರ – http://kundapraa.com/?p=2491

● ಕುಂದಾಪುರ ಕಂಡ ಈ ಬನ್ನಂಜೆ ರಾಜ
33 ವರ್ಷಗಳ ಕೆಳಗೆ ಅಮಾಯಕ ವಿದ್ಯಾರ್ಥಿಯಾಗಿ, ಕುಂದಾಪುರದಲ್ಲಿಯೇ ಶಾಲೆಗೆ ಹೋಗಿ ಹೊತ್ತಲ್ಲದ ಹೊತ್ತಿನಲ್ಲಿ ಕುಂದಾಪುರದ ಅಂಗಳವನ್ನು ದಾಟಿದ ಬಾಲಕನೋರ್ವ ಕಾಲನ ಬರ್ಬರ ಹಿತ್ತಲಿನಲ್ಲಿ ಹೆಜ್ಜೆಯಿಕ್ಕಿ ರಕ್ತ ರಂಜಿತ ಭೂಗತ ಲೋಕದ ಅನಭಿಷಿಕ್ತ ರಾಜನಾಗಿ ಎರಡೂ ಕೈಗಳಿಗೆ ಪಾತಕ ಪ್ರಪಂಚದ ನೆತ್ತರನ್ನು ಅಂಟಿಸಿ ಕೊಂಡು ಇದೀಗ ಪೋಲಿಸರ ಬಂಧಿಯಾಗಿ ಗುರುತು ಸಿಗದಂತೇ ಬದಲಾಗಿ ಹೋಗಿದ್ದಾನೆ. ಒಂದು ಕಾಲದ ಅಮಾಯಕ ಬಾಲಕ, ನಂತರದ ಸುಂದರ ಸುರದ್ರೂಪಿ ಯುವಕ ಇವನೇನಾ ಅಂತಾ ಕುಂದಾಪುರ ಮಾತನಾಡಿಕೊಳ್ಳುತ್ತಿದೆ. ಮೊರಕ್ಕೋದಲ್ಲಿ ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಬೆಳಗಾವಿಗೆ ಕರೆತಂದಾಗ ರಾಜನ ಕುಂದಾಪುರದ ನಂಟಿನ ಬಗ್ಗೆ ಮಾತುಗಳು ಆರಂಭಗೊಂಡಿದ್ದರು. ►ಹೇಗಿದ್ದವ ಹೇಗಾದ ಕುಂದಾಪುರ ಕಂಡ ಈ ರಾಜ..! http://kundapraa.com/?p=4562

● ನಿದ್ದೆಗೆಡಿಸಿದ ಕಸ್ತೂರಿ ರಂಗನ್ ವರದಿ
ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಜಾರಿಗೊಳಿಸ ಹೊರಟಿರುವ ಕಸ್ತೂರಿರಂಗನ್ ವರದಿ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದ ಜನರ ನಿದ್ದೆಗೆಡಿಸಿತ್ತು. ವರದಿ ಅನುಷ್ಠಾನ ಸಮ್ಮತವೇ ಆದರೂ ಅನುಷ್ಠಾನಕ್ಕೂ ಮೊದಲು ನಡೆದ ಸರ್ವೆ ಕಾರ್ಯ ಅವೈಜ್ಞಾನಿಕವಾಗಿತ್ತು. ಗ್ರಾಮಸ್ಥರ ಹೋರಾಟ ಬಳಿಕ ವರದಿ ಮರುಸಲ್ಲಿಕೆಗೆ ಅವಕಾಶ ನೀಡಲಾಯಿತಾದರೂ ಅಲ್ಲಿಯೂ ಕೆಲವು ಗ್ರಾಮಗಳು ಮತ್ತೆ ಸೇರ್ಪಡೆಗೊಂಡಿದ್ದವು. ಜನರ ಅಹವಾಲು ಕೇಳಬೇಕಿದ್ದ ಜಿಲ್ಲಾಧಿಕಾರಿಗಳು ಒಂದು ದಿನವೂ ಗ್ರಾಮದತ್ತ ಮುಖಮಾಡಲಿಲ್ಲ. ► http://kundapraa.com/?p=7433

● ಕೊನೆಗೂ ಒಂದೇ ವಾರ ಕಾಲುವೆಯಲ್ಲಿ ಹರಿಯಿತು ವಾರಾಹಿ ನೀರು
1979ರಲ್ಲಿ ಸುಮಾರು 15,702 ಹೆಕ್ಟೆರ್‌ ಪ್ರದೇಶಕ್ಕೆ ನೀರುಣಿಸುವ ಉದ್ದೇಶದಿಂದ ಕೈಗೆತ್ತಿಕೊಂಡ ಮಹತ್ವಾಕಾಂಕ್ಷೆಯ ಯೋಜನೆ ವಾರಾಹಿ ನೀರಾವರಿ. ಹೊಸಂಗಡಿ ಗ್ರಾಮದ ಹೊಳೆ ಶಂಕರನಾರಾಯಣದ ಮೂಲಕ ಹರಿಯುವ ವಾರಾಹಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ರೈತರ ಜಮೀನಿಗೆ ವಾರಾಹಿ ನದಿಯ ಎರಡೂ ದಿಕ್ಕಿನಲ್ಲಿ 0.42 ಕಿಮೀ ಉದ್ದದ ಬಲದಂಡೆ ಹಾಗೂ 0.36 ಕಿಮೀ ಉದ್ದದ ಎಡದಂಡೆ ನಿರ್ಮಿಸಿ ಆ ಮೂಲಕ ರೈತರ ಭೂಮಿಗೆ ನೀರು ಹಾಯಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಆದರೆ ನಾನಾ ಕಾರಣಗಳಿಂದಾಗಿ ಮುಂದೂಡುತ್ತಲೇ ಬಂದ 9 ಕೋಟಿ ರೂ. ವೆಚ್ಚದ ಈ ಯೋಜನೆಗೆ 36 ವರ್ಷಗಳಲ್ಲಿ 589 ಕೋಟಿ ರೂ. ವ್ಯಯಿಸಲಾಗಿತ್ತು. 2015ರಲ್ಲಿ ರೈತಸಂಘದ ಹೋರಾಟದಿಂದ ಅರೆಬರೆ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದ್ದರು. ಒಂದು ವಾರವಷ್ಟೇ ಕಾಲುವೆಯಲ್ಲಿ ನೀರು ಹರಿದಿತ್ತು. ಮತ್ತೆ ನೀರು ಬರಲೇ ಇಲ್ಲ! ► http://kundapraa.com/?p=1482

● ಕೊಟ್ಪಾ ಯಶಸ್ವಿ ಅನುಷ್ಠಾನಕ್ಕೆ ಚಿಂತನೆ. ವಾರದಲ್ಲಿ ಠುಸ್
ಉಡುಪಿ ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಕೊಟ್ಪಾ (ಸಿಗರೇಟ್ ಮತ್ತು ಇನ್ನಿತರ ತಂಬಾಕು ಉತ್ಪನ್ನ ಕಾಯ್ದೆ) ಕಾಯ್ದೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಆ ಬಳಿಕ ಅಂಗಡಿಗಳಿಗೆ ರೈಡ್ ಮಾಡಿ ತಂಬಾಕು ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಒಂದು ವಾರವಷ್ಟೇ ಇದರ ಬಿಸಿ ಇತ್ತು. ಮತ್ತೆ ಎಗ್ಗಿಲ್ಲದೇ ಗುಟ್ಕಾ, ಸಿಗರೇಟು ಮಾರಾಟ ಆರಂಭಗೊಂಡಿತು. ►http://kundapraa.com/?p=1271

● ಹಾಲಾಡಿ ಶ್ರೀನಿವಾಸ ಶೆಟ್ರಿಗೆ, ರವಿ ಪೂಜಾರಿಯಿಂದ ಬೆದರಿಕೆ ಕರೆ
ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಹಣದ ಬೇಡಿಕೆ ಇಟ್ಟ ಬೆದರಿಕೆ ಕರೆ ಬಂದಿತ್ತು. ಶಾಸಕರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಮೊಬೈಲಿಗೆ ಆಸ್ಟ್ರೇಲಿಯಾದ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ ತಮ್ಮ ಬಳಿ ಸಾಕಷ್ಟು ಭೂಮಿ ಇರುವುದರಿಂದ ತನಗೆ ಮೂರು ದಿನದಲ್ಲಿ 10ಕೋಟಿ ರೂ. ಹಣ ನೀಡಬೇಕು ಎಂದು ಶಾಸಕರ ಬಳಿ ಬೇಡಿಕೆಯಿಟ್ಟಿದ್ದ. ಆದರೆ ಮೂರನೇ ದಿನ ಕರೆಮಾಡಿ ಹಣ ಬೇಡವೆಂದು ಕ್ಷಮೆ ಕೇಳಿದ್ದ! ► ಹಾಲಾಡಿ ಶ್ರೀನಿವಾಸ ಶೆಟ್ರಿಗೆ, ರವಿ ಪೂಜಾರಿಯಿಂದ ಬೆದರಿಕೆ ಕರೆ – http://kundapraa.com/?p=3000

● ರಸ್ತೆ ಒತ್ತುವರಿ ತೆರವು
ಕುಂದಾಪುರ ನಗರ ಭಾಗದಲ್ಲಿ ಸುಗಮ ಸಂಚಾರ ಹಾಗೂ ಪಾರ್ಕಿಂಗ್ ಗೆ ಅನುವುಮಾಡಿಕೊಡುವ ನಿಟ್ಟಿನಲ್ಲಿ ಇಲ್ಲಿನ ಪುರಸಭೆಯು ಕುಂದಾಪುರ ಮುಖ್ಯರಸ್ತೆಯ ಇಕ್ಕೆಲದ ಸರಕಾರಿ ಜಾಗದಲ್ಲಿ ಅತಿಕ್ರಮಿತ ಕಟ್ಟಡದ ಛಾವಣಿಯನ್ನು, ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿತ್ತು. ಸ್ವತಃ ಪುರಸಭೆಯ ಕಂಪೌಂಡನ್ನು ತೆರವುಗೊಳಿಸಲಾಗುತ್ತು.

● ಪುರಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಹೊರನಡೆದರು. ಉಪಾಧ್ಯಕ್ಷ ಕುರ್ಚಿತ್ಯಾಗ ಮಾಡಿದದರು
ಅಂದು ಪುರಸಭೆ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯು ಸಂಬಂಧಿತ ವಿಚಾರ ಕೇಂದ್ರಿತವಾಗಿರದೇ ಅಧ್ಯಕ್ಷರ ಪ್ರತಿಷ್ಠೆ, ಸದಸ್ಯರ ಆರೋಪ ಪ್ರತ್ಯಾರೋಪಗಳಿಗೆ ತುತ್ತಾಗಿತ್ತು. ಅಕ್ರಮ ಗೂಡಂಗಡಿ ತೆರವು ಪ್ರಕರಣವು ಸಭೆಯ ಕೊನೆಯವರೆಗೂ ಪ್ರತಿಧ್ವನಿಸಿದ್ದಲ್ಲದೇ ಆಡಳಿತ ಪಕ್ಷದ 13 ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರ ಮಾತಿನಿಂದ ಆಕ್ರೋಶಗೊಂಡು ಸಭೆಯಿಂದ ಹೊರನಡೆದ ಪ್ರಕರಣ ಇತಿಹಾಸದಲ್ಲೇ ಮೊದಲ ಭಾರಿಗೆಂಬಂತೆ ನಡೆದಿತ್ತು. ► http://kundapraa.com/?p=1674

ನಾಮನಿರ್ದೇಶಿತ ಸದಸ್ಯೆಯೊಬ್ಬರು ತನಗೆ ಸಭೆಯಲ್ಲಿ ಅಗೌರವ ತೋರಿ ಮಾತನಾಡಿದ್ದಾರೆ. ಅವರು ಬಂದು ಕ್ಷಮೆ ಕೇಳುವವರೆಗೂ ತಾನು ಉಪಾಧ್ಯಕ್ಷರ ಕುರ್ಚಿಯಲ್ಲಿ ಕೂರುವುದಿಲ್ಲ ಎಂದು ಪುರಸಭೆ ಉಪಾಧ್ಯಕ್ಷ ನಾಗರಾಜ ಕಾಮಧೇನು ಪಟ್ಟು ಹಿಡಿದದ್ದು ಈಗ ಇತಿಹಾಸ. ► ಉಪಾಧ್ಯಕ್ಷ ಕುರ್ಚಿ ತ್ಯಜಿಸಿದ ಕಾಮಧೇನು – http://kundapraa.com/?p=6004

● ಜಿಲ್ಲಾಧಿಕಾರಿ ಹಾಗೂ ತಾ.ಪಂ ನಡುವಿನ ಸಮರ
ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಪಂಚಾಯತ್ ಸಾಮಾನ್ಯ ಸಭೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್  ಹೇಳಿದ್ದು ತಾಲೂಕು ಪಂಚಾಯತ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು. ವಾರಾಹಿ ನೀರಾವರಿ ವಿಚಾರದಲ್ಲಿ ಎದ್ದ ಈ ಗೊಂದಲ, 2 ಸಾಮಾನ್ಯ ಸಭೆಗಳನ್ನು ಮುಂದೂಡುವಂತೆ ಮಾಡಿತ್ತು. ಹಠ ಸಾಧಿಸಿದ ಜಿಲ್ಲಾಧಿಕಾರಿ, ಪಟ್ಟು ಬಿಡದ ಜನಪ್ರತಿನಿಧಿಗಳು. ಇವರುಗಳ ತಿಕ್ಕಾಟದಿಂದಾಗಿ ತಾಲೂಕು ಆಡಳಿತ ಯಂತ್ರ ಮಂದಗತಿಯಲ್ಲಿ ಸಾಗಿತ್ತು.

● ಆನ್ಲೈನ್ ಕಳ್ಳರನ್ನು ಹಿಡಿದ ಕುಂದಾಪುರ ಪೊಲೀಸರು
ಹೂಡಿಕೆ ಮಾಡುವ ಹಣವನ್ನು ದುಪ್ಪಟ್ಟು ಮಾಡಿ ಹಿಂತಿರುಗಿಸುವುದಾಗಿ ಆನ್ಲೈನ್ ನಲ್ಲಿ ಜಾಹೀರಾತು ನೀಡಿ ಗ್ರಾಹಕರಿಗೆ ಲಕ್ಷಾಂತರ ರೂ. ವಂಚಿಸುತ್ತಿದ್ದ ಉತ್ತರಪ್ರದೇಶದ ಅಲಹಾಬಾದಿನ ಮೋಸದ ಜಾಲವೊಂದನ್ನು ಜಂಟಿ ಕಾರ್ಯಾಚರಣೆ ನಡೆಸಿದ ಕುಂದಾಪುರ ಹಾಗೂ ಅಲಹಾಬಾದಿನ ಪೊಲೀಸರು ಭೇದಿಸಿದ್ದು, ವಿಚಾರಣೆಗಾಗಿ ಆರೋಪಿಗಳನ್ನು ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸೈಬರ್ ಕ್ರೈನಂತಹ ಅತ್ಯಂತ ಜಟಿಲವಾದ ಅಪರಾಧ ಪ್ರಕರಣದ ಬೆನ್ನಟ್ಟಿದ ಕುಂದಾಪುರದ ಪೊಲೀಸರು ಕೊನೆಗೂ ಮೊಸದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ► ಆನ್ಲೈನ್ ಹಣ ಹೂಡಿಕೆಯ ಮೋಸದ ಜಾಲ ಪೊಲೀಸರ ಬಲೆಗೆ – http://kundapraa.com/?p=3608

● ಕುಂದಾಪುರಿಗರನ್ನು ಗೊಂದಲಕ್ಕೆ ನೂಕಿದ ವಾಟ್ಸ್ಆ್ಯಪ್ ಕಿಡಿಗೇಡಿಗಳು ಹರಿಬಿಟ್ಟ ಸುಳ್ಳಿನ ಕಂತೆ!
ಅಗಸ್ಟ ತಿಂಗಳ ಸುಮಾರಿಗೆ ಕುಂದಾಪುರದ ಹಲವು ಮಂದಿಯ ವಾಟ್ಸ್ಆ್ಯಪ್ ನಲ್ಲಿ ಆಘಾತಕಾರಿಯಾದ ಸುದ್ದಿಗಳು ಹರಿದಾಡುತ್ತಿದ್ದರು. ಘಟನೆ ನಡೆದದ್ದು ಯಾವಾಗ, ಯಾವ ಏರಿಯಾದಲ್ಲಿ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದರೂ ಅದಕ್ಕೊಂದು ಉತ್ತರ ಕಂಡುಕೊಳ್ಳುವ ಮೊದಲೇ ಆ ಸಂದೇಶ ಮತ್ತೊಬ್ಬರಿಗೆ ರವಾನಿಯಾಗುತ್ತಿತ್ತು. ಆದರೆ ಯಾರೋಬ್ಬರಿಗೂ ಆ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಪೋಟೋ ನೋಡಿದವರು ಒಂದು ಕ್ಷಣವೂ ಯೋಚಿಸದೆ ಪತ್ರಕರ್ತರು, ಪೊಲೀಸರುಗಳಿಗೆ ಪೋನಾಯಿಸುತ್ತಿದ್ದರು. ಅತ್ಯಾಚಾರ, ಕೊಲೆ, ಬೆಂಕಿ ಅವಘಡ ಇನ್ನಿತರ ಪ್ರಕರಣಗಳು ಕುಂದಾಪುರದಲ್ಲೇ ನಡೆಯಿತು ಎಂದು ಕಥೆ ಕಟ್ಟಲಾಗಿತ್ತು. ► ವಾಟ್ಸ್ಆ್ಯಪ್ ಕಿಡಿಗೇಡಿಗಳು ಹರಿಬಿಟ್ಟ ಸುಳ್ಳಿನ ಕಂತೆ!- http://kundapraa.com/?p=2961

● ಕುಂದಾಪುರಕ್ಕೆ ನೂತನ ಎಸಿ, ಡಿಎಸ್ಪಿ
ಕುಂದಾಪುರ ಡಿಎಸ್ಪಿಯಾಗಿ ಮಂಜುನಾಥ ಶೆಟ್ಟಿ ಅಧಿಕಾರ ಸ್ವೀಕಾರ. ಅಸಿಸ್ಟೆಂಟ್ ಕಮೀಷನರ್ ಚಾರುಲತಾ ನಿರ್ಗಮನ, ಅಶ್ವಥಿ ಅಧಿಕಾರ ಸ್ವೀಕಾರ ► http://kundapraa.com/?p=9259

● ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್
ಕುಂದಾಪುರದ ಗಾಂಧಿ ಮೈದಾನದಲ್ಲಿ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಡಿ.24ರಿಂದ ನಾಲ್ಕು ದಿನಗಳ ಕಾಲ ಜರುಗಿದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಜರುಗಿತ್ತು. ಪಂದ್ಯಾಕೂಟದ ರೂವಾರಿ ಶ್ರೀಪಾದ ಉಪಾಧ್ಯ, ಸತೀಶ್ ಕೋಟ್ಯಾನ್ ಇನ್ನಿತರ ಚಕ್ರವರ್ತಿ ಬಳಗದ ಸದಸ್ಯರ ಪರಿಶ್ರಮದ ಫಲ ಕರಾವಳಿ ಭಾಗದಲ್ಲ್ಚಿ ಅಂತರಾಷ್ರೀಯ ಮಾದರಿಯಲ್ಲಿ ಪ್ರಥಮ ಭಾರಿಗೆ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಹತ್ತಾರು ವಿಶೇಷತೆಗಳಿಂದ ಕೂಡಿರಲು ಸಾಧ್ಯವಾಯಿತು. ಪಂದ್ಯಾಟದ ನೇರಪ್ರಸಾರ, ಲೈವ್ ಸ್ಕೋರ್ ವ್ಯವಸ್ಥೆ, ಥರ್ಡ್ ಅಂಪೈರ್, ಆಟಗಾರರಿಗೆ ತಂಪು ಪಾನಿಯ ನೀಡುವ ಡೈನೋಸರ್, ಡಿಜೆ ಸಂಗೀತ, ಎಲ್.ಸಿ.ಡಿ ಸ್ಕ್ರೀನ್ ಮೂಲಕ ಪಂದ್ಯಾಟ ವೀಕ್ಷಣೆ, ಸಿಡಿಮದ್ದುಗಳ ಪ್ರದರ್ಶನ ಮುಂತಾದವು ಕ್ರಿಕೆಟ್ ಪ್ರಿಯರಿಗೆ ಅಂತರಾಷ್ಟ್ರೀಯ ಮಾದರಿಯ ಕ್ರಿಕೆಟ್ ಪಂದ್ಯಾಟದ ಅನುಭವ ನೀಡಿದರೇ, ಚಿತ್ರರಂಗ ದಂಡು ಆಗಮಿಸಿದ್ದು ಕಾರ್ಯಕ್ರಮದ ಮೆರಗು ಹೆಚ್ಚಿಸಿತ್ತು. ನ್ಯಾಶ್ ಬೆಂಗಳೂರು ತಂಡ ಚಕ್ರವರ್ತಿ ಟ್ರೋಫಿಯನ್ನು ಮುಡಿಗೇರಿಸಿಕೊಂಡರೇ. ಬಿಬಿಸಿ ಅಗ್ರಾಹರ ರನ್ನರ್ ಆಗಿ ಮೂಡಿಬಂದಿತು. ► http://kundapraa.com/?p=9695

● ಮೊದಲ ನೇತ್ರದಾನ ಘೋಷಣಾ ಕಾರ್ಯಕ್ರಮ
ಕುಂದಾಪುರ ತಾಲೂಕಿನಲ್ಲಿಯೇ ಮೊದಲ ಭಾರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಸಾರಥ್ಯದಲ್ಲಿ ನೇತ್ರದಾನ ಘೋಷಣಾ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆದಿತ್ತು. ► http://kundapraa.com/?p=5778

● ಕನ್ನಡ ಡಿಂಡಿಮ
ಕನ್ನಡ ಮಾಸ ನವೆಂಬರ್ ತಿಂಗಳು ಪೂರ್ತಿ ಕನ್ನಡಿಗರ ಕರತಾಡನದ ಸದ್ದು ಕುಂದಾಪುರವೆಂಬ ಕಡುಕನ್ನಡದ ಪಟ್ಟಣದಲ್ಲಿ ಸ್ಥಾಯಿಯಾಗಿ ಉಳಿಯುವಂತೆ ಮಾಡಲು ಕುಂದಾಪುರದ ಕನ್ನಡ ವೇದಿಕೆ `ಡಿಂಡಿಮ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ನವೆಂಬರ್ ತಿಂಗಳ ಎಲ್ಲ ಐದು ಭಾನುವಾರಗಳಲ್ಲೂ ಕುಂದಾಪುರದ ಹೃದಯದಲ್ಲಿರುವ ಕಲಾಮಂದಿರದಲ್ಲಿ ಡಿಂಡಿಮದ ಸದ್ದು ಕೇಳಿದರೇ, ಉಳಿದ ದಿನ ಕುಂದಾಪುರ ಸುತ್ತಲಿನ 22 ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ► http://kundapraa.com/tag/Kannada-Vedike-Kundapura/

● ಮೊದಲ ಭಾರಿಗೆ ಆರೋಗ್ಯಕ್ಕಾಗಿ ಓಟ
ವಿಶ್ವ ಹೃದಯ ದಿನದ ಅಂಗವಾಗಿ ಆರೋಗ್ಯ ಅರಿವು ಮೂಡಿಸಲು ಕುಂದಾಪುರದಲ್ಲಿ ಪ್ರಪ್ರಥಮ ಭಾರಿಗೆ ರೋಟರಿ ಕುಂದಾಪುರ ಹಾಗೂ ನ್ಯೂ ಮೆಡಿಕಲ್ ಸೆಂಟರ್ ಜಂಟೊಯಾಗಿ ಆರೋಗ್ಯಕ್ಕಾಗಿ ಓಟ ಹಮ್ಮಿಕೊಂಡಿತ್ತು. ► http://kundapraa.com/?p=5829

● ಕುಸುಮಾಂಜಲಿ
ಕಲೆ, ಸಾಹಿತ್ಯ, ಸಂಗೀತ ಪ್ರೀಯರಿಗಾಗಿ ಒಂದಿಷ್ಟು ಹೊತ್ತು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ, ಸಂಗೀತ್ಯಾಸಕ್ತ ಮಕ್ಕಳಿಗೊಂದು ವೇದಿಕೆ ಒದಗಿಸುವ, ಸಮಾಜಕ್ಕಾಗಿ ಬದುಕಿದ ಹಿರಿಯ ಜೀವವನ್ನು ಗುರುತಿಸಿ ಗೌರವಿಸುವ ಒಂದು ವಿನೂತನ ಪ್ರಯತ್ನಕ್ಕೆ ’ಕುಸುಮಾಂಜಲಿ 2015’ ಸಾಕ್ಷಿಯಾಯಿತು. ಸುಂದರ ಸಂಜೆಯನ್ನು ಮತ್ತಷ್ಟು ರಂಗಾಗಿಸುವ ಸಮಾರಂಭ ನಾಗೂರಿನ ಕುಸುಮಾ ಗ್ರೂಪ್ ಆವರಣದಲ್ಲಿ ಅದ್ದೂರಿಯಾಗಿ ನಡೆದಿತ್ತು. ► ಸುಂದರ ಸಂಜೆಗೆ ಸಾಂಸ್ಕೃತಿಕ ರಂಗು ತುಂಬಿದ ಕುಸುಮಾಂಜಲಿ 2015 – http://kundapraa.com/?p=9654

● ಕುಂದಾಪುರ ರಾಮಕ್ಷತ್ರೀಯ ಗಣೇಶೋತ್ಸವ ಸುವರ್ಣ ಮಹೋತ್ಸವ
ಕುಂದಾಪುರ ರಾಮಕ್ಷತ್ರಿಯ ಯುವಕ ಮಂಡಲದ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಾರಂಭ ಏಳು ದಿನಗಳು ಕಾಲ ವಿಜೃಂಭಣೆಯಿಂದ ಜರುಗಿ ವೈಭವಪೂರಿತ ಮೆರವಣಿಗೆಯೊಂದಿಗೆ ಸಮಾಪನಗೊಂಡಿತು. ಗಣೇಶೋತ್ಸದ ಅಂಗವಾಗಿ ಯುವಕ ಮಂಡಳಿ ವಿವಿಧ ಕಾರ್ಯಕ್ರಮಗಳು, ರಾಜ್ಯ ಮಟ್ಟದ ಕ್ರೀಡಾಕೂಟ ಮುಂತಾದವುಗಳ ಮೂಲಕ ಸಮಾಜ ಬಂಧುಗಳನ್ನು ಸಂಘಟಿಸಿತ್ತು. ► http://kundapraa.com/tag/ramakshatriyayuvaka-mandali

● ಕುಂದಾಪ್ರ ಡಾಟ್ ಕಾಂ ಕಾಲುಸಂಕ, ಸರ್ಕಾರಿ ಶಾಲೆ ವರದಿಯ ಸರಣಿ
►ಹೊಳೆಯಾಚೆಗಿನ ಹೊಸೇರಿಗೆ ಕಿಲೋಮೀಟರ್ ಸುತ್ತಿ ಬರಬೇಕು! – http://kundapraa.com/?p=4263
►ಬೈಂದೂರು-ಕಲ್ಲಣ್ಕಿ ಜನರಿಗಿಲ್ಲ ಮರದ ಸೇತುವೆಯಿಂದ ಮುಕ್ತಿ – http://kundapraa.com/?p=4056
►ದೇವರ ದರ್ಶನಕ್ಕಾಗಿ ಮರದ ಸೇತುವೆ ಮೇಲೆ ಸರ್ಕಸ್! – http://kundapraa.com/?p=4176
►ನೈಕಂಬ್ಳಿಯ ಕಾಲುಸಂಕ – ಶಾಲೆ ಎರಡೂ ಸುರಕ್ಷಿತವಲ್ಲ! – http://kundapraa.com/?p=3898
►ಅಮ್ಮನವರ ತೊಪ್ಲು ಶಾಲೆ ಬಿದ್ದು ಹೋದರೂ ಕೇಳುವವರೇ ಇಲ್ಲ! – http://kundapraa.com/?p=9809
►ಇಲ್ಲಗಳ ನಡುವೆಯೇ ಇದೆ ಕಪ್ಪಾಡಿ ಸರ್ಕಾರಿ ಶಾಲೆ – http://kundapraa.com/?p=3545
►ಕುಸಿಯುವ ಭೀತಿಯಲ್ಲಿ ಕೊಡೇರಿ ಶಾಲೆ ಕಟ್ಟಡ – http://kundapraa.com/?p=3401

● ಕುಂದಾಪ್ರ ಡಾಟ್ ಕಾಂ ಮೊಬೈಲ್ App ಬಿಡುಗಡೆ
ಉಡುಪಿ ಜಿಲ್ಲೆಯ ಅಂತರ್ಜಾಲ ಸುದ್ದಿತಾಣಗಳ ಪೈಕಿ ಮೊದಲ ಭಾರಿಗೆ ಮೊಬೈಲ್ App ತಯಾರಿಸಿದ್ದು ಕುಂದಾಪ್ರ ಡಾಟ್ ಕಾಂ. Android ಮೊಬೈಲ್ ಬಳಕೆದಾರರಿಗಾಗಿ ಇದನ್ನು ಅಭಿವೃದ್ಧಿಪಡಿಸಲಾಗುತ್ತು. ಬಿಡುಗಡೆಗೊಂಡ ವಾರದೊಳಗೆ ಅದು ಆಗಿರುವ ಡೌನ್ಲೋಡ್ಸ್ ಕುಂದಾಪ್ರ ಡಾಟ್ ಕಾಂ ಜನಪ್ರಿಯತೆಯನ್ನು ಸಾಕ್ಷಿಕರಿಸಿತ್ತು. ಅಂದಹಾಗಿ ಸಾಮಾಜಿಕ ತಾಣಗಳ ಚಿರಪರಿಚಿತ ಧ್ವನಿ ಮನು ಹಂದಡಿ App ಬಿಡುಗಡೆಗೊಳಿಸಿದ್ದರು. ►http://kundapraa.com/?p=8608

● ಕುಂದಾಪುರಕ್ಕೆ ಒಂದು ಐಶಾರಾಮಿ ಹೋಟೆಲ್, ಹಾಲ್ ಲೋಕಾರ್ಪಣೆ
►ಕೋಟೇಶ್ವರದಲ್ಲಿ ಯುವ ಮೆರಿಡಿಯನ್ ಬೇ ರಿಸಾರ್ಟ್ ಎಂಡ್ ಸ್ಪಾ ಲೋಕಾರ್ಪಣೆ –http://kundapraa.com/?p=4660
►ಅಂಕದಕಟ್ಟೆ ಸಹನಾ ಎಸ್ಟೇಟ್ ನಲ್ಲಿ ಸಹನಾ ಕನ್ವೆನ್ಷನ್ ಸೆಂಟರ್ ಹಾಗೂ ಸಹನಾ ಆರ್ಕಿಡ್ ಹೋಟೆಲ್ ಲೋಕಾರ್ಪಣೆ – http://kundapraa.com/?p=7564

Download Kundapra.com mobile app Click on linkhttps://play.google.com/store/apps/details?id=com.kundapra.news . Or Search Kundapra.com on Play Store

[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]


Exit mobile version