ಕುಂದಾಪುರ: ಛಾಯಾಗ್ರಾಹಕರು ಸಮಾಜದ ಕಣ್ಣಿದ್ದಂತೆ. ಆಗುಹೋಗುಗಳನ್ನು ಕ್ಯಾಮರಾದ ಮೂಲಕ ಕಟ್ಟಿಕೊಡುವ ಅವರ ಕ್ಯಾಮರಾ ಕಣ್ಣನ್ನು ತಪ್ಪಿ ನಡೆಯಲು ಸಾಧ್ಯವಿಲ್ಲ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಷನ್ ಇದರ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಎಸ್.ಕೆ.ಪಿ.ಎ ಕುಂದಾಪುರ ವಲಯದ ವತಿಯಿಂದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ವಿಭಾಗದ ಸಹಯೋಗದೊಂದಿಗೆ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಆಯೋಜಿಸಲಾದ ನೇತ್ರದಾನ ಘೋಷಣಾ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಗರಿಷ್ಠ ರಕ್ತದಾನವನ್ನು ಮಾಡುವ ಮೂಲಕ ರಕ್ತದಾನಿಗಳ ಜಿಲ್ಲೆ ಎಂಬ ಹೆಸರನ್ನು ಪಡೆದಿರುವ ಉಡುಪಿ ಜಿಲ್ಲೆ, ಈಗ ನೇತ್ರದಾನದ ಅರಿವು ಮೂಡಿಸಲು ಮುಂದಾಗಿರುವುದು ಜಿಲ್ಲೆಯ ಜನರಲ್ಲಿನ ಆರೋಗ್ಯ ಜಾಗೃತಿಯನ್ನು ಸೂಚಿಸುತ್ತದೆ ಎಂದವರು ಶ್ಲಾಘಿಸಿದರು. ಎಸ್.ಕೆ.ಪಿ.ಎ ದ.ಕ, ಉಡುಪಿಯ ಅಧ್ಯಕ್ಷ ವಾಸುದೇವ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಖ್ಯಾತ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನೇತ್ರದಾನಕ್ಕೆ ಹೆಸರು ನೊಂದಾಯಿಸಿ ಹಿರಿಯರಾದ ೮೫ ವರ್ಷದ ಬಿ. ಕೆ. ನರಸಿಂಹ ಹಾಗೂ ೧೯ ವರ್ಷದ ವಿದ್ಯಾರ್ಥಿನಿ ರಮ್ಯಾ ಕೆ., ಮೊದಲು ಹೆಸರು ನೊಂದಾಯಿಸಿದ ಅರುಣಕುಮಾರ್ ಶೆಟ್ಟಿ ಹಾಗೂ ದೇಹದಾನಕ್ಕೆ ಹೆಸರು ನೊಂದಾಯಿಸಿರುವ ವಂಡ್ಸೆ ಗೋಪಾಲ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಷನ್ ಕುಂದಾಪುರ ವಲಯದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಪುರಸಭಾ ಅಧ್ಯಕ್ಷೆ ಕಲಾವತಿ, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ| ರೋಹಿಣಿ, ಕುಂದಾಪುರ ಎಜುಕೇಷನ್ ಸೊಸೈಟಿಯ ಬಿ.ಎಂ. ಸುಕುಮಾರ್ ಶೆಟ್ಟಿ, ಮುಂಬೈ ಉದ್ಯಮಿ ಸುರೇಶ್ ಡಿ. ಪಡುಕೋಣೆ, ಉದ್ಯಮಿ ಸುರೇಂದ್ರ ಶೆಟ್ಟಿ, ಉಪಸ್ಥಿತರಿದ್ದರು. ಎಸ್.ಕೆ.ಪಿ.ಎ ಕುಂದಾಪುರದ ಗೌರವಾಧ್ಯಕ್ಷ ರಾಬರ್ಟ್ ಡಿಸೋಜಾ, ಸಲಹಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯಕ್ರಮ ಸಂಚಾಲಕ ಗಿರೀಶ್ ಕೆ, ಪ್ರಧಾನ ಕಾರ್ಯದರ್ಶಿ ರಾಜಾ ಮಠದಬೆಟ್ಟು, ಉಪಾಧ್ಯಕ್ಷರುಗಳಾದ ದೊಟ್ಟಯ್ಯ ಪೂಜಾರಿ ಗೇಶನ್ ಡಯಾಸ್, ಕೋಶಾಧಿಕಾರಿ ರಾಘು ವಿಠಲವಾಡಿ ವೇದಿಕೆಯಲ್ಲಿದ್ದರು.
ಎಸ್.ಕೆ.ಪಿ.ಎ ಕುಂದಾಪುರದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.