ಉದ್ಯಮದೊಂದಿಗೆ ಸಾಮಾಜಿಕ ಕಳಕಳಿ ಇದ್ದರೆ ಯಶಸ್ಸು ಸಾಧ್ಯ: ಪೇಜಾವರ ಶ್ರೀ
ಕುಂದಾಪುರ: ನಾವು ಪ್ರಾಮಾಣಿಕವಾಗಿ ಮಾಡುವ ಸ್ವಾರ್ಥರಹಿತ ಕೆಲಸದಿಂದ ಲೋಕ ಕಲ್ಯಾಣವಾಗುವುದು. ನಮ್ಮ ಪ್ರತಿ ಉದ್ಯಮವೂ ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆದಾಗ ಅದರಲ್ಲಿ ಯಶಸ್ಸು ಸಾಧ್ಯ. ದೇವರು ಮತ್ತು ಸಮಾಜದ ಹಿತ ಕಾಪಾಡಿದರೇ ಉತ್ತಮ ಸಮಾಜದ ಸಾಕಾರಗೊಳ್ಳಲಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು
ಅಂಕದಕಟ್ಟೆ ಸಹನಾ ಎಸ್ಟೇಟ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಸಹನಾ ಗ್ರೂಫ್ ಅವರ ಸಹನಾ ಕನ್ವೆನ್ಷನ್ ಸೆಂಟರ್ ಹಾಗೂ ಸಹನಾ ಆರ್ಕಿಡ್ ಹೋಟೆಲ್ ಲೋಕಾರ್ಪಣೆಗೊಳಿಸಿ ಅವರು ಆಶಿರ್ವಚನವಿತ್ತರು. ಬದುಕಿನಲ್ಲಿ ಹಣ ಬೇಕು. ಹಣ ಇದ್ದರೇ ಸಾಲದು ಅದು ಹರಿವ ನೀರಾದಾಗ ಮಾತ್ರ ಬದುಕು ಸಾರ್ಥಕ್ಯವನ್ನು ಪಡೆಯುತ್ತದೆ ಎಂದವರು ಹೇಳಿದರು.
ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಮಾಜೀ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪ್ರತಿಯೊಬ್ಬರೂ ಒಂದೊಂದು ಗುರಿ ಇಟ್ಟು ಮುನ್ನಡೆದಾಗ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ಪ್ರತಿ ಸಾಧನೆಯ ಮುಂದೆ ಸವಾಲುಗಳಿವೆ. ಆದರೆ ಸವಾಲುಗಳನ್ನು ಮೀರಿ ಮುನ್ನಡೆಯುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು. ನಮ್ಮ ದೇಶವಾಗಲಿ, ಸಮಾಜವಾಗಲೀ ಬಂಜೆಯಲ್ಲ. ಬಂಗಾರದ ಬೆಳೆ ತೆಗೆಯಲು ಬಂಗಾರದ ಮನಸ್ಸು ಇರಬೇಕು. ಇರುವ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಬದ್ಧತೆ ಇರಬೇಕು. ನಮ್ಮ ಭದ್ರತೆ ಸರಿಯಾಗಿದ್ದರೆ ಮುಂದಿನ ಮೂವತ್ತು ವರ್ಷಗಳಲ್ಲಿ ದೇಶ ನಂಬರ್ ವನ್ ಆಗಲಿದೆ. ಧರ್ಮ ಎನ್ನುವುದು ಒಂದು ಕರ್ತವ್ಯ. ಅದನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ದಾಗ ಸಮಾಜ ಸುಭದ್ರವಾಗಲಿದೆ. ಎಂದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಗೋಪಾಲ ಭಂಡಾರಿ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಬಿಲ್ಲವ, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಮೋಹನ್ ಆಳ್ವ, ದುರ್ಗಾ ಕನ್‌ಸ್ಟ್ರಕ್ಷ್ಷನ್ ದಾಂಡೇಲಿ ಇದರ ಎಸ್. ಪ್ರಕಾಶ ಶೆಟ್ಟಿ, ಕಾರ್ಪೊರೇಶನ್ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಡಾ.ವಿ.ರಾಜೇಂದ್ರ ಪ್ರಸಾದ್, ಗೆಳೆಯರ ಬಳಗ ಸಂಸ್ಥೆಯ ಸ್ಥಾಪಕಾಧ್ಯಕ್ಷ ಬಾಬು ಶೆಟ್ಟಿ, ಸುರೇಂದ್ರ ಶೆಟ್ಟಿ ಅವರ ಪತ್ನಿ ಸಹನಾ ಸುರೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಹನಾ ಡೆವೆಲಪ್ಪರ್ಸ್ ಮಾಲಕ ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.