ಕುಂದಾಪ್ರ ಡಾಟ್ ಕಾಂ ಸುದ್ದಿ.
ಭಟ್ಕಳ: ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು ಭಟ್ಕಳ ಮಾರ್ಗದಲ್ಲಿ ಹೊಸತಾಗಿ ಆರಂಭಿಸಿದ ವೋಲ್ವೋ ಬಸ್ ಸೇವೆಗೆ ಕೆಎಸ್ಆರ್ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಭಟ್ಕಳ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಕೊನೆಗೂ ಸಾಕಾರಗೊಂಡಿದೆ. ಜನರ ಬೇಡಿಕೆಗನುಗುಣವಾಗಿ 9 ವೋಲ್ವೋ ಬಸ್ ನೀಡಿದ್ದು, ಮೊದಲಿಗೆ 6 ಬಸ್ಸುಗಳು ಸಂಚರಿಸಲಿದೆ. ಖಾಸಗಿಯವರ ಲಾಭಿಗೆ ಮಣಿಯದೇ ನೂತನ ವೋಲ್ವೋ ಬಸ್ಸುಗಳನ್ನು ಆರಂಭಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡಾಗ ಮಾತ್ರ ಇದರ ಯಶಸ್ಸು ಸಾಧ್ಯವಿದೆ ಎಂದರು. ರಾಜ್ಯದಲ್ಲಿ 3,600 ಬಸ್ಸುಗಳಿಗೆ ಟೆಂಡರ್ ಕರೆಯಲಾಗಿದ್ದು ಹೊಸ ಮಾರ್ಗಗಳಿಗೂ ಬಸ್ ಸಂಚರಿಸುವಂತೆ ಮಾಡಿ ಸಂಪರ್ಕ ವ್ಯವಸ್ಥೆಯನ್ನು ಸದೃಢಗೊಳಿಸಲು ಬದ್ಧರಾಗಿದ್ದೇವೆ ಎಂದರು.
ಭಟ್ಕಳ ಶಾಸಕ ಮಾಂಕಾಳ ವೈದ್ಯ, ಕುಂದಾಪುರ ತಾ.ಪಂ ಸದಸ್ಯ ರಾಜು ದೇವಾಡಿಗ, ಉಡುಪಿ ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ, ಕೆಎಸ್ಆರ್ಟಿಸಿ ಜಿಲ್ಲಾ ಸಂಚಾರಿ ಅಧಿಕಾರಿ ಜೈಶಾಂತ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ನೂತನ ಬಸ್ಸುಗಳಿಗೆ ಚಾಲನೆ ನೀಡಿದ ಶಾಸಕರು ಬಳಿಕ ಭಟ್ಕಳದಿಂದ ಬೈಂದೂರಿನ ತನಕ ಅದೇ ಬಸ್ಸಿನಲ್ಲಿ ಪ್ರಯಾಣಿಸಿದರು.
ಬೆಳಿಗ್ಗೆ 6:45ಕ್ಕೆ ಮಂಗಳೂರಿನಿಂದ ಹೊರಟು 9:45ಕ್ಕೆ ಭಟ್ಕಳ ತಲುಪಲಿದೆ. ಇದರಂತೆ ಬೆಳಿಗ್ಗೆ 7:15, 7:45, 10:00, 10:30, 11:00 ಅಪರಾಹ್ನ 2:45, 3:15, 3:45ಕ್ಕೆ ಮಂಗಳೂರಿನಿಂದ ಭಟ್ಕಳಕ್ಕೆ ಹೊರಡಲಿದೆ. ಭಟ್ಕಳದಿಂದ ಬೆಳಿಗ್ಗೆ 6:30, 7:00, 10:45, 11:15, 11:45, ಅಪರಾಹ್ನ 2:00, 20, 3:00ಕ್ಕೆ ಹೊರಡಲಿದೆ. ಶಿರೂರು, ಬೈಂದೂರು, ಯಡ್ತರೆ, ಉಪ್ಪುಂದ, ತ್ರಾಸಿ, ಕುಂದಾಪುರ, ಕೋಟೇಶ್ವರ, ಬ್ರಹ್ಮಾವರ, ಉಡುಪಿ, ಮೂಲ್ಕಿ, ಸುರತ್ಕಲ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಬಸ್ ನಿಲುಗಡೆ ಇರಲಿದೆ.