ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿಂದೆಲ್ಲಾ ಸಿದ್ದಾಂತವನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದರು. ದೇಶದ ಉನ್ನತಿಯ ಕೆಲಸ ನಡೆಯುತ್ತಿತ್ತು. ಆದರೆ ಇಂದು ಸ್ವಂತಕ್ಕಾಗಿ ರಾಜಕೀಯ ನಡೆಯುತ್ತಿದೆ. ಪಕ್ಷದ ತತ್ವ ಸಿದ್ಧಾಂತಗಳನ್ನೂ ಮೀರಿ, ಆದರ್ಶವನ್ನು ಮರೆತು ಪಕ್ಷಕ್ಕಿಂತ ಅಭ್ಯರ್ಥಿಗೆ ಪ್ರಾಮುಖ್ಯತೆ ನೀಡುವ ದಿನಗಳು ಬಂದಿವೆ. ಬದಲಾಗುತ್ತಿರುವ ಚುನಾವಣಾ ವ್ಯವಸ್ಥೆಯಲ್ಲಿ ರಾಜಕಾರಣ ಮತ್ತಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಾಮಾಜಿಕ ಹೋರಾಟಗಾರ ಎಂ. ಜಿ. ಹೆಗ್ಡೆ ಹೇಳಿದರು.
ಅವರು ಕಲಾಕ್ಷೇತ್ರ ಕುಂದಾಪುರದ ಆಶ್ರಯದಲ್ಲಿ ಪದವಿಪೂರ್ವ ಕಾಲೇಜು ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆದ ರಾಜಕಾರಣ ಮತ್ತು ಪತ್ರಿಕೋದ್ಯಮ ಅಂದು, ಇಂದು ವಿಚಾರ ಸಂಕಿರಣದಲ್ಲಿ ಮಾತನಾಡಿ, ಹಿಂದೆ ರಾಜಕಾರಣಿಗಳಲ್ಲಿ ಮನಸ್ಸು, ಹೃದಯವಿತ್ತು. ಹಾಗಾಗಿಯೇ ರಾಜಕೀಯ ನಾಯಕರ ಭಾಷಣಗಳನ್ನು ಕೇಳಲು ಸ್ವಯಂಪ್ರೇರಿತರಾಗಿ ಜನ ಬರುತ್ತಿದ್ದರು. ಇಂದಿನ ರಾಜಕಾರಣಿಗಳಲ್ಲಿ ನಾಲಿಗೆ ಮಾತ್ರವಿದೆ. ರಾಜಕೀಯ ಭಾಷಣಗಳು ಆರೋಪ ಪತ್ಯಾರೋಪಗಳ ವೇದಿಕೆಯಾಗಿದೆ. ಜನರನ್ನು ಹಣ ನೀಡಿ ಕರೆತರುವ ಸ್ಥಿತಿ ಬಂದೊದಗಿದೆ ಎಂದು ಲೇವಡಿ ಮಾಡಿದರು.
ಸ್ವಾತಂತ್ರತ್ಯೋತ್ತರದ ರಾಜಕೀಯ ಪಕ್ಷಗಳು ಹಾಗೂ ಜನ ಪ್ರತಿನಿಧಿಗಳಲ್ಲಿ ಸ್ವತಂತ್ರ ಹೋರಾಟದ ಪ್ರಭಾವ ಇದ್ದಿದ್ದರಿಂದ ನಿಷ್ಠೆ, ದೇಶಪ್ರೇಮ ಇದ್ದು, ರಾಷ್ಟ್ರದ ಉನ್ನತಿಗೆ ರಾಜಕಾರಣ ಮಾಡುತ್ತಿದ್ದರು. ಇಂದು ಸ್ವಂತೋದ್ಧಾರಕ್ಕೆ ರಾಜಕಾರಣ ಎಂಬಂತಾಗಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜಕೀಯ ಪಕ್ಷ ಹಾಗೂ ಅಧಿಕಾರ ರಾಜಕಾರಣದ ನಡುವಿನ ರೇಖೆ ತುಂಡಾಗಿದೆ. ಪಕ್ಷದ ಸಿದ್ದಾಂತದ ನೆಲೆಯಲ್ಲಿ ರಾಜಕಾರಣ ನಡೆಯದೆ, ಸ್ವಾರ್ಥದ ಉನ್ನತಿಗೆ ರಾಜಕೀಯ ಬಳಸಿಕೊಳ್ಳಲಾಗುತ್ತಿದೆ. ಪಕ್ಷದ ಕಾರ‍್ಯಕರ್ತರು ಪಕ್ಷದ ಹಿಂದೆ ಹೋಗದೇ ಜನಪ್ರತಿನಿಧಿಗಳನ್ನು ಹಿಂಬಾಲಿಸುತ್ತಿರುವುದು, ಬದಲಾದ ರಾಜಕೀಯ ಸ್ಥಿತ್ಯಂತರ, ಚುವಾವಣೆ ವ್ಯವಸ್ಥೆ, ಜಾತಿ ಲೆಕ್ಕಾಚಾರ, ಹಿಂದೆ ಹೋಗುತ್ತಿದ್ದು, ಮತದಾರ ಕೂಡಾ ದುಡ್ಡಿನ ಆಮಿಷಕ್ಕೆ ಒಳಗಾಗುತ್ತಿರುವುದು ಪ್ರಜಾಪ್ರಭುತ್ವ ಮೌಲ್ಯ ಕುಸಿತಕ್ಕೆ ಕಾರಣ ಎಂದರು.
ಬಿಜೆಪಿ ವಕ್ತಾರ ಡಾ. ವಾಮನ ಆಚಾರ್ಯ ಉದ್ಘಾಟಿಸಿ ಮಾತನಾಡಿ ಹಸಿವು, ದಲಿತ, ರೈತ, ಕಾರ್ಮಿಕ, ಜಾತಿ ಮುಂತಾದ ವಿಷಯಗಳ ಮುಂದಿಟ್ಟುಕೊಂಡು ರಾಜಕಾರಣ ಸಾಗಿಬಂದರೂ ಯಾವ ಅಜೆಂಡಾಗಳೂ ಉತ್ತಮ ಆಡಳಿತ ಕೊಡಲು ಸಾಧ್ಯವಾಗಿಲ್ಲ. ದಲಿತರಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ. ರೈತರು ಆರ್ಥಿಕ ಸ್ಥಿತಿ ಸುಧಾರಿಸಿಲ್ಲ. ಕಾರ್ಮಿಕರು ನೆಮ್ಮದಿಯಾಗಿಲ್ಲ. ಎಲ್ಲರ ಬದುಕು ಸುಧಾರಿಸುವ ಅಭಿವೃದ್ಧಿ ರಾಜಕಾರಣ ನಡೆಯಬೇಕು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತಹದ್ದೊಂದು ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಮಾತನಾಡಿ ಪತ್ರಿಕೋದ್ಯಮ ಹಿಂದೆ ಇದ್ದಿದ್ದಕ್ಕೂ ಈಗ ಇರುವ ಸ್ವರೂಪಕ್ಕೂ ಸಾಕಷ್ಟು ಬದಲಾವಣೆಯಾಗಿದೆ. ಜಾಹೀರಾತಿನ ಅನಿವಾರ್ಯತೆಯ ಮಾಧ್ಯಮಗಳಿಗಿದೆ. ಜಾಹಿರಾತುಗಳಿಲ್ಲದೆ ಪತ್ರಿಕೆ ನಡೆಯುವುದಿಲ್ಲ ಎನ್ನುವುದು ಒಪ್ಪಿಕೊಳ್ಳಬೇಕಿದ್ದು, ಪತ್ರಿಕೆಗಳು ವ್ಯಾಪರೀಕರಣ ಆಗದಂತೆ ನೋಡಿಕೊಳ್ಳಬೇಕಿದೆ. ಮಾಧಮಗಳು ತಪ್ಪು ಮಾಡಿದರೆ ತಿದ್ದುವ ಜವಾಬ್ದಾರಿ ವೀಕ್ಷಕ ಹಾಗೂ ಓದುಗರದ್ದಾಗಿದೆ. ಸಮಾಜಕ್ಕೆ ಪೂರಕವಾದ ಸುದ್ದಿ ನೀಡಲಿಲ್ಲವಾದರೆ ಅಂತಹ ಪತ್ರಿಕೆಯನ್ನು ಓದದಿರುವ, ಅಂತಹ ವಾಹಿನಿಯನ್ನು ನೋಡದಿರುವ ನಿರ್ಣಯವನ್ನು ಓದುಗ ಹಾಗೂ ನೋಡುಗರೇ ಮಾಡಿದಾಗ ಮಾಧ್ಯಮ ಸರಿದಾರಿಯಲ್ಲಿ ನಡೆಯುತ್ತದೆ ಎಂದರು.
ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಗೌಡ ಮಾತನಾಡಿ ಸಜ್ಜನರುರಾಜಕೀಯ ಪ್ರವೇಶದಿಂದದೂರು ಉಳಿಯುತ್ತಿದ್ದು, ಅವರನ್ನುರಾಜಕೀಯಕ್ಕೆತರುವುದುಕಷ್ಟವಾಗಿದ್ದರಿಂದ ಪ್ರಸಕ್ತ ತೋಳು ಹಾಗೂ ಹಣ ಬಲದ ರಾಜಕೀಯ ಆಗುತ್ತಿದೆ. ಬದಲಾವಣೆ ಮತದಾರರ ಕೈಯಲ್ಲಿದೆ. ಅದನ್ನು ಕಳೆದ ಲೋಕಸಭಾಚುವಾವಣೆಯಲ್ಲಿ ಮತದಾರರು ಮಾಡಿ ತೋಸಿದ್ದಾರೆ. ಸಜ್ಜನ ಪ್ರಾಮಾಣಿಕರ ಆರಿಸಿ ಕಳಿಸುವ ಮೂಲಕ ಶುಭ್ರ ರಾಜಕೀಯ ವ್ಯವಸ್ಥೆಗೆ ನಾಂದಿಯಾಗಬೇಕು ಎಂದರು.
ಕಲಾ ಕ್ಷೇತ್ರ ಕುಂದಾಪುರ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ವಿಶ್ವನಾಥ ಕರಬ ನಿರೂಪಿಸಿದರು. ಸಂವಾದ ಕಾರ್ಯಕ್ರಮದ ಬಳಿಕ ಸಾಗರ ಚೆನ್ನಪ್ಪ ಬಳಗದವರಿಂದ ಸುಗಮ ಸಂಗೀತ ಹಾಗೂ ರಾಜಗೋಪಾಲ ಮಂಗಳೂರು ಮತ್ತು ತಂಡದವರಿಂದ ಆಯ್ದ ಹಳೆಯ ಮಧುರ ಚಿತ್ರಗೀತೆ ವಾದ್ಯ ಸಂಗೀತ ವೈಭವ ನಡೆಯಿತು.















