ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಸ್ತು, ನಿಷ್ಠೆ, ಪ್ರಾಮಾಣೆಕತೆಯ ಹಾದಿಯಲ್ಲಿ ಸಾಗಿದಾಗ ಮಹತ್ತರವಾದ ಸಾಧನೆಯನ್ನು ಮಾಡಲು ಸಾಧ್ಯ ಎಂಬುವುದಕ್ಕೆ ವಿದ್ಯಾರಂಗ ಮಿತ್ರ ಮಂಡಳಿಯು ಸಾಕ್ಷಿಯಾಗಿದ್ದು, ಸಮಾಜದಲ್ಲಿ ಪರಿವರ್ತನೆ ತರುವ ಹಾಗೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಕಾಣುವ ಆಶಯದ ಹೆಜ್ಜೆಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಪ್ರಶಂಸನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಅವರು ಕುಂದಾಪುರ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಕುಂದಾಪುರದ ವಿದ್ಯಾರಂಗ ಮಿತ್ರ ಮಂಡಳಿ (ರಿ.) ಸುವರ್ಣ ಮಹೋತ್ಸವ ಸಮಿತಿಯ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮುಖ್ಯ ಅತಿಥಿ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ ಮಾತನಾಡಿ ಸಮಾಜದ ಒಟ್ಟಾರೆ ಬೆಳವಣಿಗೆಗೆ ಪ್ರತಿಯೊಬ್ಬರ ಕೊಡುಗೆ ಅವಶ್ಯಕ. ಸಮಾಜದ ಬೆಳಕಾಗಿ ಉತ್ತಮ ಕಾರ್ಯ ಮಾಡುತ್ತಿರುವ ಸಂಸ್ಥೆಗೆ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕುಂದಾಪುರ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಜಯಾನಂದ ಖಾರ್ವಿ ೨೦೧೭-೧೯ನೇ ಸಾಲಿನ ದಿನಕರ ಪಟೇಲ್ ನೇತೃತ್ವದ ತಂಡಕ್ಕೆ ಪದಪ್ರದಾನ ನೆರವೇರಿಸಿ ಶುಭ ಹಾರೈಸಿದರು. ವಿದ್ಯಾರಂಗ ಮಿತ್ರಮಂಡಳಿಯ ನಿರ್ಗಮನ ಅಧ್ಯಕ್ಷ ಅರುಣ್ ಖಾರ್ವಿ ನಿರ್ಗಮನ ಕಾರ್ಯದರ್ಶಿ ಸುನಿಲ್ ಖಾರ್ವಿ ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ದಿನಕರ ಪಟೇಲ್ ಅಧಿಕಾರ ಸ್ವೀಕರಿಸಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪದಾಧಿಕಾರಿಗಳು, ಸದಸ್ಯರ ಹಾಗೂ ಸಮಾಜದ ಸಹಕಾರವನ್ನು ಕೋರಿದರು.
ವಿದ್ಯಾನಿಧಿ ಯೋಜನೆಯ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ್ ಸ್ವಾಗತಿಸಿದರು. ವಿದ್ಯಾರಂಗ ಮಿತ್ರಮಂಡಳಿಯ ಸ್ಥಾಪಕಾಧ್ಯಕ್ಷ ಶೀನ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅರ್ಪಿತಾ ಖಾರ್ವಿ ಕಾರ್ಯಕ್ರಮ ನಿರ್ವಹಿಸಿ, ನೂತನ ಪ್ರಧಾನ ಕಾರ್ಯದರ್ಶಿ ಎಚ್.ಎನ್.ಚಂದ್ರಶೇಖರ್ ಖಾರ್ವಿ ವಂದಿಸಿದರು.














