ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಗುಜ್ಜಾಡಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತಮ್ಮಯ್ಯ ದೇವಾಡಿಗ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು.
ಗುಜ್ಜಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನೂತನ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಅವರನ್ನು ಅಭಿನಂದಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ಅನಂತ ಮೊವಾಡಿ, ಬಿಜೆಪಿ ಬೆಂಬಲಿತ ಸದಸ್ಯರ ಬಹುಮತ ಇರುವ ಗುಜ್ಜಾಡಿ ಗ್ರಾಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ. ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ಸಮಪರ್ಕವಾಗಿ ತಲುಪಿಸಿ ಉತ್ತಮ ಆಡಳಿತ ನೀಡುವಲ್ಲಿ ನೂತನ ಅಧ್ಯಕ್ಷರು ಗಮನ ಹರಿಸಬೇಕು. ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಕ್ಕೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.
ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಹೊಸಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಶುಭ ಹಾರೈಸಿದರು. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.










