ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ದೇವಲ್ಕುಂದ ಗ್ರಾಮದ ಎನ್.ಟಿ.ಎಸ್. ಸಾಗರ ಪ್ಯಾಲೇಸ್‌ನಲ್ಲಿ ಭಾನುವಾರ ನಡೆದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಪ್ರದಾನ ಮತ್ತು ಕಾರ್ಯಕರ್ತರ ಸಮಾವೇಶವನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡುರಾವ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಐದು ವರ್ಷ ಪೂರೈಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ನೀಡಿದ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಚುನಾವಣೆ ಬಂದೊಡನೆ ಹಿಂದುತ್ವ ಮತ್ತು ರಾಮಮಂದಿರ ನಿರ್ಮಾಣದ ವಿಚಾರವನ್ನು ಎತ್ತಿಕೊಂಡು ಜನರ ಭಾವನೆಗಳನ್ನು ಕೆರಳಿಸಿ ಇನ್ನೊಮ್ಮೆ ಅಧಿಕಾರ ಹಿಡಿಯುವ ಹುನ್ನಾರ ನಡೆಸಿದೆ. ದೇಶದ ಮತದಾರರನ್ನು ಅವರು ಸೃಷ್ಟಿಸಿರುವ ಭ್ರಮಾಲೋಕದಿಂದ ಹೊರತರು ಸವಾಲು ಕಾಂಗ್ರೆಸ್ ಪಕ್ಷದ ಮುಂದಿದೆ ಎಂದು ಹೇಳಿದರು.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ಹಲವು ಪ್ರಗತಿಪರ ಮತ್ತು ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ನೀಡಿತ್ತು. ಹಗರಣಮುಕ್ತ ಆಡಳಿತ ನೀಡಿತ್ತು. ಉಡುಪಿ ಜಿಲ್ಲೆಯ ಪಕ್ಷದ ಎಲ್ಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭೂತಪೂರ್ವ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಿಸಿದರು. ಹಾಗಿದ್ದರೂ ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಕೈಹಿಡಿಯಲಿಲ್ಲ. ಆದರೆ ಈಗ ಚಿತ್ರ ಬದಲಾಗಿದೆ. ಮೋದಿ ಸರ್ಕಾರದ ಬಗ್ಗೆ ಅವರಿಗೆ ಭ್ರಮನಿರಸನವಾಗಿದೆ. ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತ ಪ್ರಜಾತಂತ್ರದ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಕೇಂದ್ರದ ಮಹತ್ವದ ಅಂಗಗಳಾದ ಸಿಬಿಐ, ರಿಸರ್ವ್ ಬ್ಯಾಂಕ್, ನ್ಯಾಯಾಂಗದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಜ್ಯಾರಿಗೆ ತಂದ ಲೋಕಪಾಲ ಕಾಯಿದೆಯನ್ನು ಅನುಷ್ಠಾನಿಸದೆ ಭ್ರಷ್ಟಾಚಾರ ಮುಕ್ತ ಆಡಳಿತದ ಮಾತನಾಡುತ್ತಿದ್ದಾರೆ. ಉದ್ಯಮಿಗಳು ಬ್ಯಾಂಕ್‌ಗಳಿಗೆ ಮೋಸ ಮಾಡಿ ವಿದೇಶಕ್ಕೆ ಹೋಗಿ ನೆಲಸುತ್ತಿದ್ದಾರೆ. ಪಾಕಿಸ್ತಾನದ ವಿಚಾರದಲ್ಲಿ ದೃಢ ನಿಲುವು ತಳೆಯದೆ ದ್ವಂದ್ವ ನೀತಿ ಅನುಸರಿಸುತ್ತಿರುವುದರ ಫಲವಾಗಿ ಯೋಧರು ಬಲಿಯಾಗುತ್ತಿದ್ದಾರೆ. ಉಗ್ರರ ಉಪಟಳ ಹೆಚ್ಚುತ್ತಿದೆ ಎಂದು ಅವರು ಆರೋಪಿಸಿದರು. ರಾಜ್ಯದಲ್ಲಿ ಶಾಸನಬದ್ಧವಾಗಿ ಅಧಿಕಾರಕ್ಕೆ ಬಂದ ಸರ್ಕಾರವನ್ನು ಉರುಳಿಸಲು ಆಡಳಿತ ಪಕ್ಷದ ಶಾಸಕರ ಖರೀದಿಗೆ ಕೋಟಿಗಟ್ಟಲೆ ಹಣದ ಕೊಡಗುಗೆ ಮುಂದಿಡಲಾಗಿದೆ. ಇದಕ್ಕೆ ಬೇಕಾಗಿರುವ ಹಣ ಅವರಿಗೆ ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.
ಮಾಜಿ ಶಾಸಕ ವಿನಯಕುಮಾರ ಸೊರಕೆ ಮಾತನಾಡಿ ಮೋದಿ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಅವರ ಪಕ್ಷದ ನಿತಿನ್ ಗಡ್ಕರಿ ಅವರೇ ಆರೋಪಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಶ್ರದ್ಧೆಯಿಂದ ಕೆಲಸ ಮಾಡಿ ಹಿಂದಿನ ಸೋಲಿನ ಮುಯ್ಯಿ ತೀರಿಸಿಕೊಳ್ಳಬೇಕು ಎಂದರು.

ವಂಡ್ಸೆ ಬ್ಲಾಕ್‌ನ ನಿರ್ಗಮನ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ ನೂತನ ಅಧ್ಯಕ್ಷ ಕೆ. ಪ್ರದೀಪಕುಮಾರ ಶೆಟ್ಟಿ ಗುಡಿಬೆಟ್ಟು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಎಲ್ಲನೂತನ ಪದಾಧಿಕಾರಿಗಳು ಹುದ್ದೆ ಸ್ವೀಕರಿಸಿದರು. ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಪ್ರಶಾಂತ ಪೂಜಾರಿ ಅಧಿಕಾರಿ ಸ್ವೀಕರಿಸಿದರು. ಶರತ್‌ಕುಮಾರ ಶೆಟ್ಟಿ ವಂದಿಸಿದರು. ಪ್ರಸನ್ನಕುಮಾರ ಶೆಟ್ಟಿ ನಿರೂಪಿಸಿದರು. ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ. ಎ. ಬಾವಾ, ಕಾರ್ಯದರ್ಶಿ ಎಂ. ಎಸ್. ಮಹಮದ್, ಎಂ. ಎ. ಗಫೂರ್, ನವೀನ್ ಡಿ’ಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕೊಡವೂರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಕುಂದಾಪುರ ಬ್ಲಾಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಬೈಂದೂರು ಅಧ್ಯಕ್ಷ ಎಸ್. ಮದನ್‌ಕುಮಾರ್, ಪಕ್ಷದ ಪ್ರಮುಖರಾದ ಎಸ್. ರಾಜು ಪೂಜಾರಿ, ರಘುರಾಮ ಶೆಟ್ಟಿ, ಮುರಳಿ ಶೆಟ್ಟಿ, ಮಂಜಯ್ಯ ಶೆಟ್ಟಿ, ಬಿ. ಹಿರಿಯಣ್ಣ ಇತರರು ಇದ್ದರು.

















