ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾವುಂದ ಹಾಗೂ ನಾಡಾ ಗ್ರಾಮಪಂಚಾಯತ್ ವ್ಯಾಪ್ತಿಯ ನದಿಪಾತ್ರದಲ್ಲಿ ನೆರೆ ನೀರು ಹೆಚ್ಚಿದ್ದು, ನೆರೆ ಪೀಡಿತ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಭಾನುವಾರ ಭೇಟಿ ನೀಡಿದರು.

ಈ ಸಂದರ್ಭ ಅವರು ಮಾತನಾಡಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಕುದ್ರು ಪ್ರದೇಶಗಳಲ್ಲಿ ನೆರೆ ಹೆಚ್ಚಿದ್ದು ಅಲ್ಲಿನ ಜನರ ಓಡಾಟಕ್ಕೆ ಅನುಕೂಲವಾಗುವಂತೆ ಸರಕಾರದಿಂದ ಒಂದು ಬೋಟ್ ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳ ತುರ್ತು ಪರಿಹಾರನಿಧಿ ಖಾತೆಯಲ್ಲಿ ಸುಮಾರು 5 ಕೋಟಿ ಹಣವಿದೆ. ಮನೆ ಹಾನಿ, ಪ್ರಾಣಹಾನಿ ಹಾಗೂ ಜಾನುವಾರು ನಷ್ಟಕ್ಕೆ ತಕ್ಷಣ ಪರಿಹಾರ ನೀಡಲು ಸರಕಾರ ಆದೇಶ ನೀಡಿದ್ದು ಅದರಂತೆಯೇ ಜಿಲ್ಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಪ್ರವಾಹ ಸ್ಥಿತಿ ಎದುರಿಸಿ ಜನರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಉಡುಪಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ, ಆತಂಕ ಬೇಡ ಎಂದರು.


ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಿಳಂಬದಿಂದಾಗಿ ಕೃತಕ ನೆರೆ ಸೃಷ್ಟಿಯಾಗುತ್ತಿರುವ ಕುಂದಾಪುರ ಬಸ್ರೂರು ಭಾಗದಲ್ಲಿ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್, ಉಪವಿಭಾಗಾಧಿಕಾರಿ ಕೆ. ರಾಜು, ಬೈಂದೂರು ತಹಶಿಲ್ದಾರ್ ಬಸಪ್ಪ ಪೂಜಾರಿ, ವೃತ್ತ ನಿರೀಕ್ಷಕ ಸುರೇಶ್ ನಾಯಕ್, ಕಂದಾಯ ನಿರೀಕ್ಷಕ ಇ. ಕುಮಾರ್, ಗ್ರಾಪಂ ನಾವುಂದ ಕಾರ್ಯದರ್ಶಿ ಗಣೇಶ್ ದೇವಾಡಿಗ, ನಾವುಂದ ಗ್ರಾಮಕರಣಿಕ ಹನುಮಂತ ಹಾಗೂ ಇತರರು ಈ ಸಂದರ್ಭ ಇದ್ದರು.
ಇದನ್ನೂ ಓದಿ:
► ಕುಂದಾಪುರದಲ್ಲಿ ನಿರಂತರ ಮಳೆ: ಉಕ್ಕಿ ಹರಿಯುತ್ತಿರುವ ನದಿಗಳು – https://kundapraa.com/?p=40139 .
► ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಭಾನುವಾರ 282 ಪಾಸಿಟಿವ್, ಒಟ್ಟು 6,201 ಪ್ರಕರಣ – https://kundapraa.com/?p=40144 .















