ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊರೋನಾ ಕಾರಣದಿಂದಾಗಿ ಯಕ್ಷಗಾನ ಕಲಾವಿದರ ಬದುಕು ಅತಂತ್ರವಾಗಿದ್ದು, ಕಲೆಯನ್ನೆ ನಂಬಿಕೊಂಡ ಕಲಾವಿದರಿಗೆ ಬದುಕು ಸಾಗಿಸುವುದು ಕಷ್ಟವಾಗುತ್ತಿದೆ. ಕಲಾಸೇವೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಕೊಲ್ಲೂರು ದೇವಳದ ವತಿಯಿಂದ ಹೊಸ ಯಕ್ಷಗಾನ ಮೇಳ ಆರಂಭಿಸುವಂತೆ ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ ಗಾಣಿಗರ ನೇತೃತ್ವದಲ್ಲಿ ಕಲಾವಿದರು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೊಲೂರಿನಲ್ಲಿ ಮನವಿ ಸಲ್ಲಿಸಿದರು.
ದೇಶಕ್ಕೆ ಆವರಿಸಿದ ಮಹಾಮಾರಿ ಕೊರೋನಾದಿಂದ ಮಾರ್ಚ್‌ನಿಂದ ಸ್ಥಗಿತಗೊಂಡ ಯಕ್ಷಗಾನ ಮೇಳಗಳು ಮತ್ತೆ ನವೆಂಬರ್‌ನಿಂದ ತಿರುಗಾಟ ಆರಂಭಿಸುವುದಕ್ಕೆ ಅವಕಾಶ ಕಲ್ಪಿಸಬೇಕು. ಧಾರ್ಮಿಕ ದತ್ತಿಗೆ ಒಳಪಡುವ ಮೇಳಗಳ ಕಲಾವಿದರಿಗೆ ಪೂರ್ಣ ಪ್ರಮಾಣದ ಸಂಭಾವನೆ ಸಿಕ್ಕಿದೆ. ಖಾಸಗಿ ಸಂಚಾಲಕತ್ವದಿಂದ ನಡೆಯುವ ಮೇಳಗಳಿಗೆ ಪರಿಹಾರದ ಸಂಭಾವನೆಯನ್ನು ಸಂಚಾಲಕರರಿಂದಲೂ, ಸರಕಾರದಿಂದಲೂ ಕೊಡಿಸುವುದರೊಂದಿಗೆ ಖಾಸಗಿ ಮೇಳಗಳು ಕೆಲವು ಆರಂಭವಾಗುವ ಸ್ಥಿತಿ ಇಲ್ಲದಿರುವುದರಿಂದ ಕೊಲ್ಲೂರು ದೇವಳದ ವತಿಯಿಂದ ಹೊಸ ಮೇಳವೊಂದನ್ನು ಆರಂಭಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯಕ್ಷಗಾನ ಮೇಳ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ.
















