ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು, ವಿಶೇಷವಾಗಿ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿಯುವುದು ಮುಖ್ಯ. ದೌರ್ಜನ್ಯ, ವಂಚನೆಗಳ ಸಮಯದಲ್ಲಿ ಮಹಿಳೆಯರು ಕಾನೂನಾತ್ಮಕ ಸಲಹೆ ಪಡೆಯಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳ ಮಂಗಳೂರು ವಿಭಾಗದ ಹಿರಿಯ ಕಾನೂನು ಅಧಿಕಾರಿ ಹಾಗೂ ಸರಕಾರಿ ಪ್ರಾಸಿಕ್ಯೂಟರ್ ಜುಡಿತಾ ಒ. ಎಮ್ ಕ್ರಾಸ್ತ ಹೇಳಿದರು.
ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿಯ ಎಂಬಿಎ ವಿಭಾಗದ ವತಿಯಿಂದ ಮಿಜಾರಿನಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಹಿಳಾ ಕಾನೂನುಗಳು, ದೌರ್ಜನ್ಯ ತಡೆ ಕಾನೂನುಗಳ ಬಗ್ಗೆ ಎಲ್ಲರಿಗೂ ಮಾಹಿತಿ ಇರಬೇಕು. ಆದರೆ ಎಷ್ಟೋ ಸಂದರ್ಭಗಳಲ್ಲಿ ಮಾಹಿತಿಯ ಅಭಾವದಿಂದಾಗಿ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಪೋಕ್ಸೊ ಕಾಯ್ದೆ, ವರದಕ್ಷಿಣೆ ತಡೆ ಕಾಯ್ದೆ, ಕೌಟುಂಬಿಕ ದೌರ್ಜನ್ಯ ಕಾಯ್ದೆ ೨೦೦೫, ಐಟಿ ಕಾಯ್ದೆಯಂತಹ ಎಷ್ಟೋ ಕಾನೂನುಗಳಿದ್ದು ದೌರ್ಜನ್ಯದ ಸಮಯದಲ್ಲಿ ಮಹಿಳೆಯರು ದೂರು ದಾಖಲಿಸಲು ಮುಂದೆ ಬರುವಂತಾಗಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಬ್ಯಾಂಕ್‌ನ ಮಂಗಳೂರು ವಿಭಾಗದ ಡೆಪ್ಯೂಟಿ ಜನರಲ್ ಸಾಂಡ್ರಾ ಲೊರೆನಾ, ‘ಸಾಧನೆ ಮಾಡಲು ನಿರ್ದಿಷ್ಟ ಯೋಜನೆ, ಆಪಾಯಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಇರಬೇಕು. ಸವಾಲುಗಳನ್ನು ಅವಕಾಶಗಳನ್ನಾಗಿಸಬೇಕು. ನಮ್ಮ ಮೇಲಿನ ನಂಬಿಕೆ ಹಾಗೂ ನಿರಂತರ ಕಲಿಕೆ ಯಶಸ್ಸಿನ ಗುಟ್ಟು. ನಮ್ಮ ಮೌಲ್ಯ ಹಾಗೂ ನೈತಿಕತೆ ಜೊತೆಗೆ ರಾಜಿಯಾಗದೆ, ನಮ್ಮ ವೃತ್ತಿಯಲ್ಲಿ ಪ್ರಾಮಾಣಿಕರಾಗಿರಬೇಕು’ ಎಂದು ಹೇಳಿದರು.
ಅವಕಾಶಗಳನ್ನು ಸದುಪಯೋಗಗೊಳಿಸಿಕೊಳ್ಳುವ ಬಗ್ಗೆ ಮಾತನಾಡಿದ ಮಂಗಳೂರಿನ ಯುವ ಮಹಿಳಾ ಉದ್ಯಮಿ ಹಾಗೂ ಕೆಸಿಸಿಐನ ನಿರ್ದೇಶಕಿ ಆತ್ಮಿಕಾ ಅಮಿನ್ ಮಾತನಾಡಿ, ‘ನಮ್ಮ ಕಂಫರ್ಟ್ ಜೋನ್‌ಗಳಿಂದ ಹೊರಬಂದಾಗ ಮಾತ್ರ ನಮ್ಮ ಬೆಳವಣಿಗೆ ಸಾಧ್ಯ. ತಮ್ಮದೇ ಕೆಲಸಗಳಲ್ಲಿ ಮಗ್ನರಾಗದೇ ಸಹೋದ್ಯೋಗಿಗಳೊಡನೆ ವೃತ್ತಿಪರ ಸ್ನೇಹವನ್ನು ಹೊಂದುವುದು ಅವಶ್ಯ. ಅದು ನಮ್ಮನ್ನು ಬೆಳೆಯಲು ಸಹಾಯ ಮಾಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ವೃತ್ತಿಪರ ಜೀವನದಲ್ಲಿ ಅಭಿವೃದ್ಧಿ ಹೊಂದಬಹುದು’ ಎಂದು ಅಭಿಪ್ರಾಯಪಟ್ಟರು.
ಪುಂಜಾಲಕಟ್ಟೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸೌಮ್ಯ ಹಾಗೂ ಗಂಜಿಮಠದ ರಾಜ್ ಎಜುಕೇಶನ್ ಟ್ರಸ್ಟ್‌ನ ಮಮತಾ ಶೆಟ್ಟಿ ಮಹಿಳೆಯರಿಗೆ ಇರುವ ಅವಕಾಶಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಸ್ನಾತಕೋತ್ತರ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಎಂಬಿಎ ವಿಭಾಗದ ಡೀನ್ ಕ್ಲಾರೆಟ್ ಮೆಂಡೋನ್ಸಾ ಉಪಸ್ಥಿತರಿದ್ದರು. ಪ್ರಥಮ ಎಂಬಿಎ ವಿಭಾಗದ ವಿದ್ಯಾರ್ಥಿ ಅಂಕಿತ ಮತ್ತು ಸಂಗೀತ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಗುರುಪ್ರಸಾದ್ ವಂದಿಸಿದರು.















