ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ವಿದ್ಯಾರ್ಥಿಗಳಿಗೆ ಸಾಧಿಸುವ ಛಲವಿರಬೇಕು. ಆ ಸಾಧನೆಗೆ ಯಾವುದೇ ವಿಷಯಗಳು ಅಡ್ಡಿಯಾಗಬಾರದು. ಎಂಥದ್ದೇ ಸಂದರ್ಭದಲ್ಲಿಯೂ ಅದನ್ನು ಎದುರಿಸುವ ಸಾಮರ್ಥ್ಯ ಇರಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿ ಪೂರ್ವ ವಿದ್ಯಾರ್ಥಿಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕಾಂಕ್ಷೆಗಳ ಜತೆಗೆ ಕಷ್ಟಗಳನ್ನು ಎದುರಿಸಲು ತಯಾರಿ ಇರಬೇಕು. ವಿದ್ಯಾರ್ಥಿಗಳು ಸೋಲಿಗೆ ನೀಡುವ ಕಾರಣಗಳು ಸಾಧನೆಗಳಿಗೆ ತಡೆಯಾಗಬಾರದು. ಎಲ್ಲ ಬಗೆಯ ಆಕರ್ಷಣೆಗಳು, ಬಂಧನಗಳಿಂದ ಹೊರಬಂದು ತಮ್ಮ ಗುರಿ, ಸಾಧನೆಯತ್ತ ಮನಸ್ಸನ್ನು ಕೇಂದ್ರೀಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಶೆಟ್ಟಿ ಮಾತನಾಡಿ, ಕೊರೊನ ಸೋಂಕಿನ ನಡುವೆ ಸವಾಲಿನ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಇದರ ಮಹತ್ವವನ್ನು ಅರಿತು ಯಾವುದೇ ಗೊಂದಲಕ್ಕೊಳಗಾಗದೆ ಶೈಕ್ಷಣಿಕ ಸಾಧನೆಯತ್ತ ಗಮನ ನೀಡಬೇಕೆಂದರು.
ಪ್ರಸ್ತುತ ಎಲ್ಲ ಕಡೆಯೂ ಕೊರೊನಾತಂಕ ಇದ್ದು ಶಿಕ್ಷಣ ಸಂಸ್ಥೆಗಳು ಭಾರೀ ಸವಾಲನ್ನೆದುರಿಸುತ್ತಿವೆ. ಆದರೂ ವಿದ್ಯಾರ್ಥಿಗಳಿಗಾಗಿ ಎಲ್ಲ ಸಂಸ್ಥೆಗಳು ಕಾರ‍್ಯ ನಿರ್ವಹಿಸುತ್ತಿವೆ, ಶ್ರಮಿಸುತ್ತಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪದವಿ ಪೂರ್ವ ವಿಭಾಗದ ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಎನ್‌ಸಿಸಿ ಹಾಗೂ ಶೈಕ್ಷಣಿಕ ವಿಭಾಗದಲ್ಲಿ ಸಾಧನೆ ಮಾಡಿದ 250 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳು ಉಪಸ್ಥಿತರಿದ್ದರು. ಇಂಗ್ಲೀ ಷ್ ವಿಭಾಗದ ಉಪನ್ಯಾಸಕಿ ಮರಿಯಾ ಲೋಬೊ ಕಾರ್ಯಕ್ರಮ ನಿರೂಪಿಸಿದರು.















