ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪುಸ್ತಕ ಓದುವ ಹವ್ಯಾಸ ಇರುವವರಲ್ಲಿ ಜ್ಞಾನ ವೃದ್ಧಿಯಾಗುತ್ತದೆ, ಅಲ್ಲದೇ ಸಾಧಕರ ಬದುಕಿನ ಹೆಜ್ಜೆಗಳು ಪುಸ್ತಕಗಳಿಂದ ತಿಳಿದು ನಮ್ಮ ಬದುಕನ್ನು ರೂಪಿಸಿಕೊಳ್ಳಲು ಒಂದು ದಾರಿದೀಪವಾಗುತ್ತದೆ, ಆದಷ್ಟು ಪುಸ್ತಕವನ್ನು ಓದುವ ಹವ್ಯಾಸ ನಾವು ಇಟ್ಟುಕೊಳ್ಳೋಣ ಎಂದು ಕೋಟತಟ್ಟು ಪಂಚಾಯತ್ ನ ಅಧ್ಯಕ್ಷೆ ಅಶ್ವಿನಿ ದಿನೇಶ್ ಹೇಳಿದರು
ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ನಡೆದ ಪದ್ಮಶ್ರೀ ಡಾ.ಎಸ್.ಆರ್ ರಂಗನಾಥನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಗ್ರಂಥಪಾಲಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕ ಸಂಗ್ರಹವಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕಾಗಿ ಈ ಸಂದರ್ಭದಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಪಿ.ಡಿಓ ಶೈಲಾ ಎಸ್ ಪೂಜಾರಿ, ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ , ಪಂಚಾಯತ್ ಸಿಬ್ಬಂದಿ ಮಮತಾ, ಸುಜಾತ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗ್ರಂಥಾಲಯ ಮೇಲ್ವಿಚಾರಕಿ ಶೈಲಜಾ ಕೆ.ಎನ್ ನಿರೂಪಿಸಿ, ಪ್ರಸ್ತಾಪಿಸಿದರು.















