ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಂಚಿಕಾನು ಸ.ಹಿ.ಪ್ರಾ.ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಅತಿಥಿಗಳು ಪುಪ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ನ್ಯಾಯಾಂಗ ಸದಸ್ಯರಾಗಿ ಆಯ್ಕೆಯಾದ ಕರ್ನಾಟಕದ ಪ್ರಥಮ ನ್ಯಾಯವಾದಿ ಉಪ್ಪುಂದದ ಯೋಗೇಶ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಈ ವರ್ಷ ಖೋಖೋ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾದ, ಪ್ರತಿಭಾ ಕಾರಂಜಿ ಹಾಗೂ ಆಟೋಟಗಳಲ್ಲಿ ವಿಜಯಿಯಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬೈಂದೂರು ಸಬ್ ಇನ್ಸ್ಪೆಕ್ಟರ್ ನಿರಂಜನ್, ಹಿರಿಯ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪ್ರಭಾಕರ ದೇವಾಡಿಗ, ಉದ್ಯಮಿ ಪ್ರಕಾಶ್ ಪೂಜಾರಿ, ಉಪ್ಪುಂದ ಜೇಸಿಐ ಅಧ್ಯಕ್ಷ ನಾಗರಾಜ್, ಗ್ರಾಮ ಪಂಚಾಯತ್ ಸದಸ್ಯೆ ಮೂಕಾಂಬು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿತ್ತರಂಜನ್ ಮತ್ತು ಎಸ್.ಡಿ.ಎಮ್.ಸಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಯಮಿ ಎನ್.ಎ. ಪೂಜಾರಿಯವರ ಪ್ರಾಯೋಜಕತ್ವದಲ್ಲಿ ವಿಜೃಂಭಣೆಯಿಂದ ಜರಗಿತು. ಶಾಲಾ ಮುಖ್ಯ ಶಿಕ್ಷಕರಾದ ತಿಮ್ಮಪ್ಪ ಗಾಣಿಗ ಸ್ವಾಗತಿಸಿದರು. ಸಹಶಿಕ್ಷಕಿ ಸಾವಿತ್ರಿ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಗೀತಾ ವಂದಿಸಿ, ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಯಶೋಧಾ, ಜ್ಯೋತಿ, ಶಶಿಕಲಾ ಮತ್ತು ಅತಿಥಿ ಶಿಕ್ಷಕಿಯರು ಕಾರ್ಯಕ್ರಮಕ್ಕೆ ಸಹಕರಿಸಿದ್ದರು.












