ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2023ರ ಶೈಕ್ಷಣಿಕ ವರ್ಷದ ‘ಯುವಿಕಾ’ ಕಾರ್ಯಕ್ರಮಕ್ಕೆ ಉಡುಪಿ ಕೇಂದ್ರೀಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ಶೌರ್ಯ ಎಸ್. ಕಾಡಿಂತಾರ್ ಅವರನ್ನು ಇಸ್ರೋ ಸಂಸ್ಥೆ ಯುವ ವಿಜ್ಞಾನಿಯಾಗಿ ಆಯ್ಕೆ ಮಾಡಿದೆ.
ದೇಶದಾದ್ಯಂತ ಇಸ್ರೋ ಪ್ರಸಕ್ತ ವರ್ಷ ಆಯ್ಕೆ ಮಾಡಿದ 350 ವಿದ್ಯಾರ್ಥಿಗಳಲ್ಲಿ ಶೌರ್ಯ. ಎಸ್. ಕಾಡಿಂತಾರ್ ಓರ್ವರಾಗಿದ್ದಾರೆ.
ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳಿಗಾಗಿ ಯುವಿಕಾ (ಯುವ ವಿಜ್ಞಾನಿ ಕಾಠ್ಯಕ್ರಮ ) ಎಂಬ ವಿಶೇಷ ಕಾಠ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ. ಇದು ಯುವ ವಿದ್ಯಾರ್ಥಿಗಳಿಗೆ ಬಾಹ್ಯಕಾಶ ವಿಜ್ಞಾನ, ತಂತ್ರಜ್ಞಾನ ಹಾಗೂ ಬಾಹ್ಯಕಾಶ ಅಪ್ಲಿಕೇಶನ್ಗಳ ಕುರಿತು ಮೂಲಭೂತ ಜ್ಞಾನವನ್ನು ನೀಡುತ್ತದೆ. ಈ ಕಾಠ್ಯಕ್ರಮವನ್ನು ಕ್ಯಾಚ್ ದೆಮ್ ಯಂಗ್ ಎಂಬ ಶೀರ್ಷಿಕೆ ಅಡಿಯಲ್ಲಿ ಇಸ್ರೋ ರೂಪಿಸಿದ್ದು 2023 ರ ಮೇ 15ರಿಂದ ಮೇ 26 ರವರೆಗೆ ನಡೆಯಲಿದೆ.
ಶೌರ್ಯ ಪ್ರಸ್ತುತ ಬ್ರಹ್ಮಾವರ ತಾಲೂಕಿನ ಯಡ್ತಾಡಿ ನಿವಾಸಿ, ಉಡುಪಿ ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ್ ಪೂಜಾರಿ ಹಾಗೂ ಬ್ರಹ್ಮಾವರ ವಲಯದ ಸಗ್ರಿನೋಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜ್ಯೋತಿ ದಂಪತಿಯ ಪುತ್ರ.










