ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಝಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆ ಪಶು ಚಿಕಿತ್ಸಾಲಯದ ಬಳಿ ಸಣ್ಣದೊಂದು ಗೂಡಂಗಡಿಯಲ್ಲಿ ಚಪ್ಪಲಿ ಕೊಡೆ ದುರಸ್ತಿ ಕಾಯಕ ಮಾಡುವ ಮಣಿಕಂಠ ಅವರು ದೆಹಲಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಫಲಾನುಭವಿಯಾಗಿರುವ ಅವರು, ಪಡೆದ ಸಾಲದ ಕಂತನ್ನು ಅವಧಿ ಪೂರ್ವದಲ್ಲಿ ಮರುಪಾವತಿಸಿರುವುದರಿಂದ ಗಣರಾಜ್ಯೋತ್ಸವಕ್ಕೆ ಆಹ್ವಾನ ಬಂದಿದೆ. ಕೌಶಲಾಭಿವೃದ್ಧಿ ಇಲಾಖೆ ಕುಂದಾಪುರ ಪುರಸಭೆ ಮೂಲಕ ಸಿಎಂ ಸ್ವನಿಧಿ ಯೋಜನೆಯಡಿ ಪಡೆದ 10 ಸಾವಿರ ಸಾಲವನ್ನು ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿ ಇಲಾಖೆ ಮೆಚ್ಚುಗೆ ಗಳಿಸಿದ ಮಣಿಕಂಠನಿಗೆ ಇಲಾಖೆ ಮತ್ತೆ 20 ಸಾವಿರ ರೂ. ಸಾಲ ನೀಡಿತು. ಪಡೆದ ಸಾಲದಲ್ಲಿ ಮಳೆ ಗಾಲದಲ್ಲಿ ಬೇಕಾಗುವ ಚಪ್ಪಲಿ, ಕೊಡೆ ಮಾರಾಟ ಮಾಡಿ ಯಶಸ್ವಿ ಆದರು. ಪಡೆದ ಸಾಲ ಐದೇ ತಿಂಗಳಲ್ಲಿ ಮರುಪಾವತಿಸಿದರು.
ಸಾಲಾ ಮನ್ನ ಬಡ್ಡಿರಹಿತ ಸಾಲ ಅಂತ ಉಚಿತ ಸಿಗುತ್ತಾ ಅಂತ ಪಡೆದ ಸಾಲ ಕಟ್ಟಲು ಮೀನಾಮೇಶ ಎಣಿಸುವ ಜನರ ಮಧ್ಯೆ ಮಣಿಕಂಠ ವಿಭಿನ್ನವಾಗಿ ಕಾಣುತ್ತಾರೆ. ಇಲಾಖೆ ಮಣಿಕಂಠ ಪ್ರಾಮಾಣಿಕತೆ ಮತ್ತೆ ಮೂರನೇ ಬಾರಿ 50 ಸಾವಿರ ರೂ. ಸಾಲ ಮಂಜೂರು ಮಾಡಿದೆ.
ಕಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಪಾದರಕ್ಷೆ ರಿಪೇರಿ ಮಾಡುವ ಪೆಟ್ಟಿಗೆ ಅಂಗಡಿ ನಡೆಸುವ ಮಣಿಕಂಠ ಮೂಲ ಭದ್ರಾವತಿ. ಐವತ್ತು ವರ್ಷದ ಹಿಂದೆ ಇಲ್ಲಿಗೆ ಬಂದು ಚಪ್ಪಲಿ ದುರಸ್ತಿ ಅಂಗಡಿ ಆರಂಭಿಸಿದರು. ಚಪ್ಪಲಿ ದುರಸ್ತಿ, ಕೊಡೆ ರಿಪೇರಿ, ಚಪ್ಪಲಿ ಸಿದ್ದತೆಯಲ್ಲಿ ಬಂದ ವರಮಾನದಲ್ಲಿ ಮಣಿಕಂಠ ಪತ್ನಿ ಇಬ್ಬರು ಮಕ್ಕಳು, ತಾಯಿ ತಮ್ಮನ ಜೊತೆ ಜೀವನ ನಡೆಸುತ್ತಿದ್ದು, ಬರುವ ಅಲ್ಪ ಆದಾಯದಲ್ಲಿ ಪಡೆದ ಸಾಲ ಮರುಪಾವತಿ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಪುರಸಭೆಯಿಂದ ಬೀಳ್ಕೊಡುಗೆ
ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಹೊರಟ ಮಣಿಪಂಠ ಹಾಗೂ ಪತ್ನಿ ನಿರ್ಮಲಾ ಅವರ ಪುರಸಭೆಯಿಂದ ಗೌರವಿಸಿ ಶುಭಕೋರಿ ಬೀಳ್ಕೊಡಲಾಯಿತು. ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಆಡಳಿತಾಧಿಕಾರಿ ರಶ್ಮಿ ಎಸ್.ಆರ್.ನಿದೇಶನದಲ್ಲಿ ಗೌರವಿಸಿ ಬೀಳ್ಕೊಡಲಾಯಿತು. ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಆರ್., ಜಿಲ್ಲಾ ಲಿಡ್ಕರ್ ನಿಗಮ ಸಂಯೋಜಕ ತಿಮ್ಮೇ ಸ್ವಾಮಿ, ಸದಸ್ಯರಾದ ಪ್ರಭಾಕರ ವಿ., ದೇವಕಿ ಪಿ. ಸಣ್ಣಯ್ಯ, ಸಮುದಾಯ ಸಂಘಟನಾಧಿಕಾರಿ ಶರತ್ ಎಸ್.ಖಾರ್ವಿ, ಕಂದಾಯ ಅಧಿಕಾರಿ ರಜನಿ ಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ ನಾಯ್ಕ್, ಪ್ರಥಮ ದರ್ಜೆ ಸಹಾಯಕ ಗಣೇಶ್ ಕುಮಾರ್ ಜಪ್ತಿ ಇದ್ದರು.
















