ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ತಂತ್ರಜ್ಞಾನಾಧಾರಿತ ಬೋಧನೆಯನ್ನು ಆರಂಭಿಸಿದ್ದು, ಲೀಡ್ ಸಂಸ್ಥೆಯಿಂದ ಓರಿಯೆಂಟೇಶನ್ ಕಾರ್ಯಕ್ರಮವನ್ನು ಇತ್ತೀಚಿಗೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗದ ಪಾಲಕ-ಪೋಷಕರಿಗಾಗಿ ನಡೆಸಲಾಯಿತು.
ಲೀಡ್ ಸಂಸ್ಥೆಯ ಶಾಲಾ ಸಲಹೆಗಾರರಾದ ಸತೀಶ್ ಅವರು ತಮ್ಮ ಮಾತುಗಳಲ್ಲಿ, ನಗರ ಪ್ರದೇಶಗಳಲ್ಲಿ ತಂತ್ರಜ್ಞಾನವನ್ನು ಈಗಾಗಲೇ ಶಿಕ್ಷಣದಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಶಾಲೆಯು ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಾಡಿದ ನಿರ್ಧಾರ ಹಾಗೂ ಅದರಿಂದಾಗಿ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳ ಮೇಲೆ ಬೆಳಕು ಚೆಲ್ಲಿದರು.
ಲೀಡ್ ಸಂಸ್ಥೆಯ ದಕ್ಷಿಣ ವಲಯದ ಸಿಇಒಆಗಿರುವ ಶಶಿಕಾಂತ ಅವರು ಪೋಷಕರೊಡನೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲ್ಯ ಎಷ್ಟು ಮುಖ್ಯವಾದದ್ದು ಹಾಗೂ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿವಿಧ ಪರೀಕ್ಷೆಗಳನ್ನು ಬರೆಯಲು ಮತ್ತು ಸಂದರ್ಶನಗಳಲ್ಲಿ ಆತ್ಮವಿಶ್ವಾಸದಿಂದ ಉತ್ತರಿಸಲು ತಂತ್ರಜ್ಞಾನಾಧಾರಿತ ಶಿಕ್ಷಣವು ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಹೇಳಿದರು.
ಈ ಸಂದರ್ಭ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಅವರು ಮಾತನಾಡಿ, ತಂತ್ರಜ್ಞಾನವು ನಮ್ಮೆಲ್ಲರ ಜೀವನದಲ್ಲಿ ಹೇಗೆ ಅನಿವಾರ್ಯವಾಗಿದೆ ಹಾಗೂ ಅದರಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಹೇಗೆ ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗಬಹುದು ಎಂಬುದರ ಕುರಿತು ತಿಳಿಸಿದರು ಹಾಗೂ ಪೋಷಕರಾಗಿ ಮಕ್ಕಳು ಮೊಬೈಲ್ ಫೋನ್ ಗಳ ದುರ್ಬಳಕೆ ಮಾಡದಂತೆ ಹೇಗೆ ಜಾಗ್ರತರಾಗಿರಬೇಕು ಎಂಬುದರ ಬಗ್ಗೆ ಕಿವಿಮಾತು ಹೇಳಿದರು.
ತಂತ್ರಜ್ಞಾನವು ಎಲ್ಲಾ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡುತ್ತಿರುವ ಈ ಕಾಲಘಟ್ಟದಲ್ಲಿ, ಶೈಕ್ಷಣಿಕ ಕ್ಷೇತ್ರವು ಅದನ್ನು ಪರಿಣಾಮಕಾರಿ ಬೋಧನೆಗಾಗಿ ಬಳಸಿಕೊಳ್ಳುವುದು ಅತ್ಯಗತ್ಯವಾಗಿದೆ. ಕೇಳಿ, ನೋಡಿ ಮತ್ತು ಮಾಡಿ ಕಲಿತರೆ ಅದು ಮಕ್ಕಳ ನೆನಪಿನಲ್ಲಿ ದೀರ್ಘಕಾಲ ಉಳಿಯುತ್ತದೆ. ಈ ನಿಟ್ಟಿನಲ್ಲಿ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲಾಗುತ್ತದೆ, ಮೂರು ದಿನವೂ ಕಾರ್ಯಕ್ರಮದ ಕೊನೆಯಲ್ಲಿ ಪಾಲಕರು ತಮಗೆ ಬೇಕಾದ ವಿವರಗಳನ್ನು ಕೇಳಿ ಪಡೆದು, ಮನದಲ್ಲಿ ಮೂಡಿದ ಸಂಶಯಗಳನ್ನು ನಿವಾರಿಸಿಕೊಂಡರು. ಮಕ್ಕಳ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಶಾಲೆ ತೆಗೆದುಕೊಂಡ ನಿರ್ಧಾರಕ್ಕೆ ಪಾಲಕ ಪೋಷಕರು ಬೆಂಬಲವನ್ನು ತಿಳಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿಯಾದ ವೀಣಾ ರಶ್ಮಿ ಎಂ., ಲೀಡ್ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥರಾದ ಸಮಿವುಲ್ಲಾ ಉಪಸ್ಥಿತರಿದ್ದರು.
ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಸುಜಾತಾ ಸದಾರಾಮ್ ಅವರು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯರಾದ ಶ್ರುತಿ, ಗೀತಾ ಹಾಗೂ ಸ್ವಾತಿ ನಿರ್ವಹಿಸಿದ್ದರು.















