ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆಯ ಸೇವಾ ಸೇತು ಯೋಜನೆಯಡಿಯಲ್ಲಿ ಸೇವಾ ಭಾರತಿ ರಿ. ಕನ್ಯಾಡಿ ಇವರ ಸಹಯೋಗದೊಂದಿಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನೂತನ ಪುನಶ್ಚೇತನ ಕೇಂದ್ರ ಸೇವಾಧಾಮ ಇದರ ಭೂಮಿ ಪೂಜೆ ಕಾರ್ಯಕ್ರಮವು ಇಲ್ಲಿನ ಪಡುವರಿ ಗ್ರಾಮದ ಹೇನಬೇರ್ ನಲ್ಲಿ ಜರುಗಿತು.
ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು.
ಸೇವಾ ಭಾರತಿ ರಿ. ಕನ್ಯಾಡಿ ಇದರ ಸಂಸ್ಥಾಪಕರಾದ ವಿನಾಯಕ ರಾವ್ ಕನ್ಯಾಡಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಬೈಂದೂರಿನಲ್ಲಿ ಆರಂಭಗೊಳ್ಳಲಿರುವ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರ ಪಾಲಿಗೆ ಆಶಾಕಿರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಬೈಂದೂರಿನಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರಿಗೆ ನೂತನ ಪುನಶ್ಚೇತನ ಕೇಂದ್ರ ಕಾರ್ಯ ಆರಂಭಗೊಳ್ಳಲಿದ್ದು, ಸಹೃದಯಿ ದಾನಿಗಳ ನೆರವಿನಿಂದ ಆದಷ್ಟು ಶೀಘ್ರ ಉದ್ಘಾಟನೆಯಾಗುವಂತೆ ಆಶಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಿ.ಎಸ್. ಸುರೇಶ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಬಟವಾಡಿ, ಶಿರೂರು ಹಿರಿಯ ವೈದ್ಯ ಡಾ. ಕೆ.ಪಿ. ನಂಬಿಯಾರ್, ಆರೋಗ್ಯ ಭಾರತಿ ಉಪಾಧ್ಯಕ್ಷ ಡಾ. ಎ. ಎಸ್. ಉಡುಪ, ಸೇವಾ ಭಾರತಿ ರಿ. ಕನ್ಯಾಡಿ ಕಾರ್ಯದರ್ಶಿ ಬಾಲಕೃಷ್ಣ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪಿ. ಸುಧಾಕರ್ ನಿರೂಪಿಸಿ, ಬೈಂದೂರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಗಜೇಂದ್ರ ಬೇಲೆಮನೆ ಸ್ವಾಗತಿಸಿದರು.















