ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸದಸ್ಯರು ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡು ಶಾಲೆಗಳಲ್ಲಿ ಶಾಲಾ ಕೊಠಡಿ ಹಾಗೂ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಮತ್ತು ಶಾಲಾ ವಠಾರವನ್ನು ಶ್ರಮದಾನದ ಮೂಲಕ ಸ್ವಯಂಪ್ರೇರಿತರಾಗಿ ಸ್ವಚ್ಛಗೊಳಿಸಿದರು. ಶಾಲಾರಂಭಕ್ಕೂ ಮುನ್ನ ಶಾಲೆಯ ಕೊಠಡಿಗಳ ಸ್ವಚ್ಛತೆಯಲ್ಲಿ ಶಾಲೆಯ ಸಿಬ್ಬಂದಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರೊಂದಿಗೆ ಕೈಜೋಡಿಸಿದ ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸದಸ್ಯರು, ಶಾಲೆಯ ಪರಿಸರದಲ್ಲಿ ಬಾಗಿ ನಿಂತ ಮರದ ಕೊಂಬೆಗಳನ್ನು ಕಡಿದು ಪರಿಸರವನ್ನು ಸ್ವಚ್ಛಗೊಳಿಸಿದರು.
ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸದಸ್ಯರ ನಿಸ್ವಾರ್ಥ ಸೇವೆಯನ್ನು ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಮತ್ತು ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಯಶೊಧಾ ಶ್ಲಾಘಿಸಿದ್ದಾರೆ.










