ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನವದೆಹಲಿ, ವಿಸ್ತರಣಾ ನಿರ್ದೇಶನಾಲಯ ಶಿವಮೊಗ್ಗ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ಉಡುಪಿ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಗಂಗೊಳ್ಳಿ ಸಹಯೋಗದೊಂದಿಗೆ ಪೂರ್ವ ಮುಂಗಾರು ವಿಕಸಿತ ಕೃಷಿ ಸಂಕಲ್ಪ ಅಭಿಯಾನ-2025 ಕಾರ್ಯಕ್ರಮ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದ ಕೀಟಶಾಸ್ತ್ರ ಪ್ರಾಧ್ಯಾಪಕ ಡಾ. ರೇವಣ್ಣ ರೇವಣ್ಣನವರ್, ಕೃಷಿಯಲ್ಲಿ ಅನೇಕ ಸುಧಾರಣೆಗಳು ನಡೆದಿದ್ದರೂ ಕೂಡ ಕೃಷಿ ಕ್ಷೇತ್ರದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ. ಕೃಷಿಕರು ಆಧುನೀಕ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಭತ್ತ, ಅಡಿಕೆ ಹಾಗೂ ತೆಂಗಿನ ಮರಗಳಿಗೆ ಬಾಧಿಸುವ ರೋಗ ಮತ್ತು ಕೀಟ ಬಾದೆಯನ್ನು ನಿಯಂತ್ರಿಸಲು ವೈಜ್ಞಾನಿಕ ಹತೋಟಿ ಕ್ರಮಗಳನ್ನು ಅನುಸರಿಸಬೇಕು. ಕರಾವಳಿ ಭಾಗಗಳಲ್ಲಿ ಮಣ್ಣಿನಲ್ಲಿ ಆಮ್ಲೀಯ ಸತ್ವ ಹೆಚ್ಚಾಗಿದ್ದು, ಮಣ್ಣು ಪರೀಕ್ಷೆ ನಡೆಸಿ ಮರಗಳಿಗೆ ಗೊಬ್ಬರ ಹಾಕಬೇಕು ಎಂದರು.
ವಿಜ್ಞಾನಿಗಳನ್ನೊಳಗೊಂಡ ನಾಲ್ಕು ತಂಡ ಉಡುಪಿ ಜಿಲ್ಲೆಯ 155 ಗ್ರಾಮ ಪಂಚಾಯತ್‌ಗಳಿಗೆ ತೆರಳಿ ಅಲ್ಲಿನ ರೈತರಿಗೆ ಕೃಷಿ ಮತ್ತು ಕೃಷಿಗೆ ಪೂರಕವಾದ ಮಾಹಿತಿ ನೀಡಿ, ರೈತರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿ ಪರಿಹಾರ ಸೂಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಭೂಮಿಕಾ ಎಚ್.ಆರ್.ಹೇಳಿದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ತಬ್ರೇಜ್, ಕೃಷಿ ಇಲಾಖೆಯ ಗಜೇಂದ್ರ, ಕೃಷಿ ಸಖಿ ವಂದನಾ ಶೇರುಗಾರ್ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಪಂ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.















