ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯ ಭಗತ್ ಸಿಂಗ್ ರಸ್ತೆಯಲ್ಲಿನ ಮಠದ ಬೆಟ್ಟುವಿನಲ್ಲಿ ಶುಕ್ರವಾರ ನಸುಕಿನ ಜಾವ ಸುರಿದ ಭಾರೀ ಗಾಳಿ-ಮಳೆಗೆ ಬೃಹತ್ ಅರಳಿ ಮರ ಮನೆಯೊಂದರ ಮೇಲೆ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಇಲ್ಲಿನ ನಿವಾಸಿ ವಸಂತಿ ದೇವಾಡಿಗ ಮನೆ ಮೇಲೆ ಮರ ಬಿದ್ದಿದ್ದು, ಮನೆಯ ಸ್ಲ್ಯಾಬ್ ಗೆ ಹಾನಿಯಾಗಿದೆ. ಪಕ್ಕದಲ್ಲೇ ಯಕ್ಷೇಶ್ವರಿ ದೇವಸ್ಥಾನವಿದ್ದು, ದೇವಸ್ಥಾನಕ್ಕೆ ತಾಗಿಕೊಂಡೆ ಮರ ಬಿದ್ದಿದೆ.

ಟೇರಿಸ್ ಮನೆಯಾಗಿದ್ದರಿಂದ ಮಲಗಿದ್ದವರಿಗೆ ಯಾವುದೇ ಅಪಾಯ ಆಗಿಲ್ಲ. ಆದರೆ ಮನೆ ಎದುರು ಅಳವಡಿಸಲಾಗಿದ್ದ ಶೀಟ್ ನ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದ್ದು, ಅದರ ಅಡಿ ನಿಲ್ಲಿಸಿದ್ದ ಎರಡು ಬೈಕ್‌ಗಳು ಹಾಗೂ ಕಾರಿಗೆ ಹಾನಿಯಾಗಿದೆ. ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಮೂರ್ನಾಲ್ಕು ವಿದ್ಯುತ್ ಕಂಬಗಳು ತುಂಡಾಗಿ ಧರೆಗುರುಳಿವೆ. ಮನೆ ಹಾನಿಯಿಂದಾಗಿ ಅಂದಾಜು 2,00,000 ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕುಂದಾಪುರ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಮರ ತೆರವುಗೊಳಿಸಲು ಸಹಕರಿಸಿದ್ದಾರೆ.
ವಿವಿದಡೆ ಹಾನಿ:
ಕೋಟೇಶ್ವರ ಗ್ರಾಮದ ಸುಶೀಲಾ ಎಂಬುವರ ಮನೆಯ ಮೇಲೆ ಮರಬಿದ್ದು ಭಾಗಶಃ 10,000 ಅಂದಾಜು ನಷ್ಟ ಸಂಭವಿಸಿದೆ. ತ್ರಾಸಿ ಗ್ರಾಮದ ಪದ್ದು ಪೂಜಾರಿ ಅವರ ಮನೆಯ ಗೋಡೆ ಕುಸಿದು ಭಾಗಶಃ 20,000 ಅಂದಾಜು ನಷ್ಟ ಸಂಭವಿಸಿದೆ. ತಲ್ಲೂರು ಗ್ರಾಮದ ಚಂದು ದೇವಾಡಿಗ ಕೋಂ ಮಂಜ ಅವರ ಮನೆಯ ಮೇಲೆ ಮರಬಿದ್ದು ಭಾಗಶಃ 40,000 ಅಂದಾಜು ನಷ್ಟ ಸಂಭವಿಸಿದೆ.
ಉಡುಪಿ ಜಿಲ್ಲೆಯಲ್ಲಿ ಸರಾಸರಿ 99.6 ಮೀ.ಮೀ ಮಳೆಯಾಗಿದ್ದು, ಈ ಪೈಕಿ ಕುಂದಾಪುರ ತಾಲೂಕಿನಲ್ಲಿ 102.2, ಉಡುಪಿ ತಾಲೂಕಿನಲ್ಲಿ 114.4, ಬೈಂದೂರು ತಾಲೂಕಿನಲ್ಲಿ 144.4, ಮಿ.ಮೀ ಮಳೆಯಾಗಿದೆ.















