ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಅತ್ಯುನ್ನತ ಸೌಕರ್ಯ ಒದಗಿಸಲಾಗುತ್ತಿದೆ ಹಾಗೂ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲಾಗಿದೆ. ಇದರ ಹೊರತಾಗಿಯೂ ಕೆಲವು ವಿದ್ಯಾರ್ಥಿಗಳು ಅಶಿಸ್ತಿನಿಂದ ವರ್ತಿಸಿರುವ ಘಟನೆಗಳು ನಡೆದಿವೆ. ಇದರಿಂದ ಇತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಹಾಗೂ ಕಲಿಕಾ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಇಂತಹ ಯಾವುದೇ ರೀತಿಯ ಅಶಿಸ್ತಿನ ನಡವಳಿಕೆಗೆ ವಾರ್ಡನ್ ಗಳು ಅವಕಾಶ ನೀಡಬಾರದು. ಅಶಿಸ್ತಿನ ವರ್ತನೆಯ ಘಟನೆಗಳು ಘಟಿಸಿದಾಗ ಅಥವಾ ಅಂತಹ ಸನ್ನಿವೇಶ ಘಟಿಸುವ ಸೂಚನೆ ಸಿಕ್ಕಿದ್ದಲ್ಲಿ ಕೂಡಲೇ ಸಮಿತಿಯ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ ನೀಡಿದರು.

ಅವರು ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 2025-26 ನೇ ಸಾಲಿನಲ್ಲಿ ಹೊಸ ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಹಾಸ್ಟೆಲ್ ನಿರ್ವಹಣೆ ಮತ್ತು ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದದರು.
ಕಳೆದ ಎರಡು ವರ್ಷಗಳಿಂದ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ಗಳಲ್ಲಿ ವಿಪರೀತ ಬೇಡಿಕೆ ಇದ್ದು ಪ್ರತಿ ವರ್ಷ ಸರಾಸರಿ 150 ರಿಂದ 200 ವಿದ್ಯಾರ್ಥಿಗಳು ಅರ್ಜಿ ಹಾಕಿಯೂ ಹಾಸ್ಟೆಲ್ ವಂಚಿತರಾಗಿರುವ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ ಹಿನ್ನಲೆಯಲ್ಲಿ ಕುಂದಾಪುರ ಶಾಸಕರಾ ಕಿರಣ್ ಕುಮಾರ್ ಕೊಡ್ಗಿಯವರ ಜೊತೆಗೂಡಿ ಈ ಬಗ್ಗೆ ಕಳೆದ ಹಲವು ಅಧಿವೇಶನಗಳಲ್ಲಿ ಸರಕಾರದ ಗಮನ ಸೆಳೆಯಲಾಗಿದೆ. ಹಾಸ್ಟೆಲ್ ಸೀಟು ಕೊರತೆ ಬಗ್ಗೆ ಕಳೆದ 5 ವರ್ಷಗಳ ದತ್ತಾಂಶವನ್ನು ಒದಗಿಸಿ ಅದರ ಆಧಾರದ ಮೇಲೆ ಕುಂದಾಪುರ ಭಾಗದಲ್ಲಿ ಹೊಸ ಹಾಸ್ಟೆಲ್ ಮಂಜೂರಾತಿಗೆ ಸಚಿವರಿಗೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದರು.
ಸಭೆಯಲ್ಲಿ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ರವಿ ಕುಮಾರ್ ಹುಕ್ಕೇರಿ, ಬೈಂದೂರು ತಾಲೂಕು ಪಂಚಾಯತ್ ಇಓ ರಾಜ್ ಕುಮಾರ್, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ಅಧಿಕಾರಿ ಶಶಿಕಲಾ ಹಾಗೂ ವಿವಿಧ ಹಾಸ್ಟೆಲ್ ಗಳ ವಾರ್ಡನ್ ಗಳು ಉಪಸ್ಥಿತರಿದ್ದರು.










