ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಸ್ತೆ ಸಂಚಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬ ಚಾಲಕನ ಕರ್ತವ್ಯ. ಅದರಲ್ಲಿಯೂ ಶಾಲಾ ವಾಹನ ಚಲಾಯಿಸುವವರಿಗೆ ಕಾನೂನು ಪಾಲಿಸುವ ಜೊತೆಗೆ ಮಕ್ಕಳ ಜವಾಬ್ದಾರಿ ಇರುತ್ತದೆ. ಪ್ರತಿ ಮಗುವಿನ ಜೀವವೂ ಅಮೂಲ್ಯವಾದದ್ದು ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಕಛೇರಿಯ ಸಿನಿಯರ್ ಮೋಟರ್ ವೆಹಿಕಲ್ ಇನ್ಸಪೆಕ್ಷರ್ ಸಂತೋಷ್ ಶೆಟ್ಟಿ ಹೇಳಿದರು.

ಅವರು ರೋಟರಿ ಕ್ಲಬ್ ಬೈಂದೂರು, ಪ್ರಾದೇಶಿಕ ಸಾರಿಗೆ ಕಛೇರಿ ಉಡುಪಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಸಂಯುಕ್ತಾಶ್ರಯದಲ್ಲಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಶನಿವಾರ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಶಾಲಾ ವಾಹನ ಚಾಲಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ಮಕ್ಕಳ ಸುರಕ್ಷತೆಯ ಬಗೆಗಿನ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.

ವಾಹನ ಚಾಲನೆ ಮಾಡುವುದಷ್ಟೇ ಅಲ್ಲದೇ ಅದರ ಅಗತ್ಯ ದಾಖಲೆಗಳನ್ನು ವಾಹನದಲ್ಲಿ ಇರಿಸಿಕೊಳ್ಳುವುದು, ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಶಾಲಾ ವಾಹನಗಳಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾದುದು ಎಂದರು. ಎಲ್ಲಾ ಶಾಲಾ ಮುಖ್ಯಸ್ಥರು ವಾಹನದ ದಾಖಲೆಯನ್ನು ಸರಿಯಾದ ಕಾಲಕ್ಕೆ ನವೀಕರಣ ಮಾಡುವುದು, ಚಾಲಕರ ಬಗ್ಗೆ ಸರಿಯಾದ ಮಾಹಿತಿ ಇಟ್ಟುಕೊಳ್ಳುವುದು ಅಗತ್ಯ ಎಂದರು.

ಬೈಂದೂರು ರೋಟರಿ ಪೂರ್ವಾಧ್ಯಕ್ಷ ಹೆಚ್. ವಸಂತ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಪೊಲೀಸ್ ಠಾಣೆ ಉಪನಿರೀಕ್ಷಕರುಗಾದ ತಿಮೇಶ್ ಬಿ.ಎನ್., ನವೀನ್ ಬೋರ್ಕರ್, ಉದ್ಯಮಿ ಸುರೇಶ್ ಹೋಬಳಿದಾರ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಕೆ. ಅತಿಥಿಗಳಾಗಿದ್ದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ರೋಟರಿ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ ಸ್ವಾಗತಿಸಿ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ವಂದಿಸಿದರು. ಪತ್ರಕರ್ತ ಸುನಿಲ್ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.















