ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ 79ನೇ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಮಾಜಿ ಅಧ್ಯಕ್ಷರಾದ ಎ. ಎಸ್ ಕಿರಣ್ ಕುಮಾರ್ ಅವರು ಧ್ವಜಾರೋಹಣವನ್ನು ನೆರವೇರಿಸಿ, ಮಾತನಾಡಿ, ಸ್ವಾತಂತ್ರ್ಯ ಎಂಬುದು ಇಂದು ವಿಜ್ಞಾನದ ಮಾರ್ಗದಲ್ಲಿ ಸ್ವಾಯತ್ತತೆ, ಪ್ರಗತಿ ಮತ್ತು ಜನಕೇಂದ್ರಿತ ಸೇವೆಯ ಸಂಕೇತವಾಗಿದೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಮೂಲಕ ಹೊಸ ಸಾಮರಸ್ಯವನ್ನು ರೂಪಿಸುತ್ತಿದ್ದೇವೆ. ಅಂತರಿಕ್ಷ ಕ್ಷೇತ್ರ, ಅಣುಶಕ್ತಿ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಕೃಷಿ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಹೀಗೆ ಸ್ವತಂತ್ರ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಕಾಶ ಮಟ್ಟದ ಸಾಧನೆಗಳನ್ನು ಕಾಣುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನಲ್ಲಿ ಹೊಸದಾಗಿ ಆರಂಭಗೊಂಡ 6/8 ನೌಕಾ ಉಪವಿಭಾಗ – ಎನ್.ಸಿ.ಸಿ ಉಡುಪಿ ಘಟಕ ಇದರ ಪ್ರಾಯೋಜಕರಾದ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಹಾಗೂ ಸಿಟಿಒ ಮಹೇಶ್ ಆರ್. ಶೆಣೈ. ಕೆ. ಅವರ ನೇತೃತ್ವದಲ್ಲಿ ಎನ್. ಸಿ.ಸಿ ಕೆಡೆಟ್ ಗಳಿಂದ ಕವಾಯತು ನಡೆಯಿತು. ನೌಕಾಪಡೆ ವಿಭಾಗವನ್ನು ಕೆಡೆಟ್ ಕ್ಯಾಪ್ಟನ್ ಗುಂಡಾಲ ಶ್ರೀಗವಿ ಯವರು ನಿರ್ವಹಿಸಿಕೊಟ್ಟರು.
ಪೂರ್ವಾಹ್ನ 11.00 ಗಂಟೆಯಿಂದ ” From Class Room to Cosmos : Science, Youth and Nation Building ” ಎಂಬ ಶೀರ್ಷಿಕೆಯಲ್ಲಿ CEF inspiro ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿ ಭಾಷಣದಲ್ಲಿ ಎ.ಎಸ್ ಕಿರಣ್ ಕುಮಾರ್ ಅವರು ” ವಿಜ್ಞಾನದ ಪಯಣವು ಬಾಹ್ಯಾಕಾಶ ಕೇಂದ್ರದಲ್ಲಿ ಅಲ್ಲ, ತರಗತಿ ಕೊಠಡಿಯಲ್ಲಿ ಆರಂಭವಾಗುತ್ತದೆ. ತರಗತಿಯಲ್ಲಿ ಕಲಿಯುವ ಪ್ರತಿಯೊಂದು ಪಾಠ, ಪ್ರಯೋಗಾಲಯದಲ್ಲಿ ಮಾಡುವ ಪ್ರತಿಯೊಂದು ಪ್ರಯೋಗ, ಕುತೂಹಲದಿಂದ ಕೇಳುವ ಪ್ರತಿಯೊಂದು ಪ್ರಶ್ನೆ – ಇವುಗಳೇ ರಾಷ್ಟ್ರ ನಿರ್ಮಾಣದ ಬೀಜಗಳು. ಈ ಕುತೂಹಲವೇ ಯುವಜನರನ್ನು ಕಾಸ್ಮೋಸ್ ತಲುಪಿಸುವ ಶಕ್ತಿಯಾಗಿ ಪರಿಣಮಿಸುತ್ತದೆ. ವಿಜ್ಞಾನ ಮತ್ತು ಯುವಜನತೆ ರಾಷ್ಟ್ರ ನಿರ್ಮಾಣದ ಇಂಜಿನ್ ಗಳು ಇದ್ದಂತೆ ” ಎಂದು ಹೇಳಿದರು.
ಸಮಾರಂಭದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.
ಕ್ರಿಯೇಟಿವ್ ಸವಿಗಾನ:
ಜೀ ಸರಿಗಮಪ ಮತ್ತು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಖ್ಯಾತಿಯ ಯಶವಂತ ಎಂ.ಜಿ ಹಾಗೂ ತಂಡದವರಿಂದ ದೇಶ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಸಮಾರಂಭದ ಕೊನೆಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅತಿಥಿ ವರೇಣ್ಯರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ, ಕಾಲೇಜಿನ 2,000 ಕ್ಕಿಂತಲೂ ಅಧಿಕ ವಿದ್ಯಾರ್ಥಿ – ವಿದ್ಯಾರ್ಥಿನಿಯರು, ಬೋಧಕ – ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಲ್ಲರಿಗೂ ಸಿಹಿ ಹಂಚಲಾಯಿತು. ಉಪನ್ಯಾಸಕರಾದ ರಾಜೇಶ್ ಶೆಟ್ಟಿ, ವಿನಾಯಕ ಜೋಗ್, ಸ್ಮಿತಾ ರವರು ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು.















