ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣ ಜ್ಞಾನ ಪತ್ರಿಕೆ ಬೆಂಗಳೂರು ಇವರು ಪ್ರತೀ ವರ್ಷ ಕೊಡಮಾಡುವ ಪ್ರಾಥಮಿಕ ಶಾಲಾ ವಿಭಾಗದ ರಾಜ್ಯ ಮಟ್ಟದ ʼಜ್ಞಾನಜ್ಯೋತಿ ಪ್ರಶಸ್ತಿ-2025ʼ ಕ್ಕೆ ತಾಲೂಕಿನ ಮೊಳಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶೋಭಾ ಸಿ. ಶೆಟ್ಟಿ ಆಯ್ಕೆಯಾಗಿದ್ದಾರೆ.
1997ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಯ್ಕನಕಟ್ಟೆಯಲ್ಲಿ ಐದುವರೆ ವರ್ಷಗಳ ಸೇವೆ ಸಲ್ಲಿಸಿ ಉತ್ತಮ ಶಿಕ್ಷಕಿ ಎನಿಸಿಕೊಂಡರು. 2002ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಳಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಸದಾಕಾಲ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಾ, ಶಿಕ್ಷಕರ ಟಿ.ಎಲ್.ಎ೦ ಮೇಳದಲ್ಲಿ ಪ್ರಶಸ್ತಿ ಪಡೆದಿದ್ದು, 2001-2002 ರಲ್ಲಿ ಬೆಂಗಳೂರಿನ ಚಂದನ ವಾಹಿನಿಯಲ್ಲಿ ಬರುವ ಥಟ್ ಅ೦ಥ ಹೇಳಿ’ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲೆಯಿಂದ ಭಾಗವಹಿಸಿದ ಏಕೈಕ ಪ್ರಾಥಮಿಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಅದರಲ್ಲಿ ವಿದ್ಯಾರ್ಥಿಗಳು ಪ್ರಶಸ್ತಿ ಪಡೆಯಲು ಶ್ರಮ ವಹಿಸಿದ್ದಾರೆ.
ಈವರೆಗೆ ಐದು ಬಾರಿ ಪ್ರಭಾರ ಮುಖ್ಯೋಪಾಧ್ಯಾಯರ ಕರ್ತವ್ಯ ನಿರ್ವಹಿಸಿರುವ ಅವರು 2017-18ರಲ್ಲಿ ಶಾಲಾ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಶಾಲಾ ವಾಹನ ವ್ಯವಸ್ಥೆ, ಸುಸಜ್ಜಿತ ಆಂಗ್ಲ ತರಗತಿ ಆರಂಭ, ಪ್ರತಿ ಬಾರಿ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ, ಜನಪದ ನೃತ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆಯಲು ಶ್ರಮಿಸಿದ್ದಾರೆ.
ಅವರ ಸೇವೆಗೆ ಈಗಾಗಲೇ ಕಾಯಕ ಯೋಗಿ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಜಾಣ ಕನ್ನಡಿಗ ಪ್ರಶಸ್ತಿ ಲಭಿಸಿದೆ.
ಶಾಲಾ ಚಟುವಟಿಕೆಗಳಲ್ಲಿ ಉತ್ಸುಕರಾಗಿರುವರನ್ನು ಪ್ರತಿಷ್ಠಿತ ಶಿಕ್ಷಣ ಜ್ಞಾನ ಪತ್ರಿಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದ್ದು ಡಿ.21ರಂದು ಹಾಸನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.















