ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆನ್ನಾಬೈಲ್ ಈದ್ಗಾ ಮೈದಾನದಲ್ಲಿ ಈದ್ ಉಲ್ ಫಿತ್ರ್ ಪ್ರಾರ್ಥನೆಯು ಧರ್ಮಗುರು ಮೌಲಾನಾ ಅಬ್ದುಲ್ ಹಫೀಜ್ ರಜ್ವಿ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು “ರಂಜಾನ್ ತಿಂಗಳ ಉಪವಾಸ, ದಾನ, ಆರಾಧನೆಗಳೆಲ್ಲವೂ ಆರಾಧಕನನ್ನು ಆರಾಧ್ಯನ ಸಂಪರ್ಕಕ್ಕೆ ತಂದು ಸಂತುಷ್ಟಗೊಳಿಸುವ ಪ್ರಕ್ರಿಯೆಗಳು. ಆಧ್ಯಾತ್ಮದಲ್ಲಿ ದೇವನ ಸಂತೋಷ- ಸಂಪ್ರೀತಿಗಳು, ಆತನು ಸೃಷ್ಟಿಸಿದ ಸೃಷ್ಟಿಗೆ ನಾವು ಹೇಗೆ ಸ್ಪಂದಿಸುತ್ತೇವೆ ಮತ್ತು ಸೃಷ್ಟಿಯ ಭಾಗವಾಗಿ ನಮ್ಮನ್ನು ಸೃಷ್ಟಿಸಿ ಸಲಹಿದ್ದಕ್ಕಾಗಿ ಕೃತಜ್ಞತೆಯನ್ನು ಹೇಗೆ ಅರ್ಪಿಸುತ್ತೇವೆ ಎಂಬುದರ ಮೇಲಿದೆ. ದೇವನೊಂದಿಗಿನ ಅನುಸಂಧಾನವು ಅನುಸರಣೆಯ ಪಕ್ವತೆಯನ್ನು ಅವಲಂಬಿಸಿದೆ. ದಾನದಿಂದ ಸಂಪತ್ತು ಬರಿದಾಗುವುದಿಲ್ಲ, ಅದು ಅವಘಡಗಳಿಂದಲೂ ಮನುಷ್ಯನನ್ನು ರಕ್ಷಿಸುತ್ತದೆ ಎನ್ನುವುದು ದೇವವಾಣಿ. ದಾನವನ್ನು ಇಸ್ಲಾಮ್ ಧರ್ಮ ಬೋಧಿಸಿದ ರೀತಿಯಲ್ಲಿ ಗಂಭೀರವಾಗಿ ಪರಿಗಣಿಸಿ ನೀಡಿದರೆ ಅದರ ಪ್ರತಿಫಲ ಪ್ರತ್ಯಕ್ಷವಾಗಿ ಕಾಣಬಹುದು.
ದೇವನ ಅಸ್ತಿತ್ವ ಮತ್ತು ಪ್ರಭಾವವನ್ನು ಪ್ರಾಯೋಗಿಕವಾಗಿ ಅರಿಯಬೇಕಿದ್ದರೆ, ದೇವ ನಿಯಮಗಳನ್ನು ಸುಸೂತ್ರವಾಗಿ ಪಾಲಿಸುವುದು ಅಗತ್ಯವಾಗಿರುತ್ತದೆ. ಉಪವಾಸ ಕೇವಲ ದೇಹದ ಬಳಲಿಕೆಗೆ ಇರುವುದಲ್ಲ ಅದು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ ದೇವನ ನೀತಿಗಳನ್ನು ಪಾಲಿಸಲು ಬೇಕಾದ ಪ್ರೇರಣೆಗೆ ಪೂರಕತೆಯನ್ನು ಒದಗಿಸುವ ಒಂದು ಪ್ರಾಯೋಗಿಕ ಪರಿಕ್ರಮ. ಹೀಗಿನ ಜೀವಪರ ಸಿದ್ಧಾಂತವನ್ನು ಹೊಂದಿರುವ ಧರ್ಮವು ಮನುಷ್ಯ ಬದುಕನ್ನು ಸುಸೂತ್ರವಾಗಿಸುವ ಮಾರ್ಗದರ್ಶಿ ಸೂತ್ರ. ಅದರಲ್ಲಿ ಕಾಠಿಣ್ಯವನ್ನು ಸೃಷ್ಟಿಸಿಕೊಳ್ಳುವುದು, ಕರ್ಮಠರಾಗುವುದು ಮತ್ತು ಭೇದ ಮಾಡುವುದು ಅಧರ್ಮವಾಗುತ್ತದೆ.
ಎಲ್ಲರನ್ನೂ ಒಳಗೊಳ್ಳದ ಧರ್ಮ ಧರ್ಮವೇ ಅಲ್ಲ. ಧರ್ಮದ ಅರಿವು ಒಂದು ಯೋಗ್ಯತೆ. ಅದೆಷ್ಟೋ ಜನರಿಗೆ ಆ ಯೋಗವೇ ಇರುವುದಿಲ್ಲ. ಬದುಕಿನ ಧಾವಂತ- ಭ್ರಮೆಗಳಲ್ಲಿ ಹುಟ್ಟಿಗೊಂದು ಉದ್ದೇಶ ಮತ್ತು ಸಾವಿದೆ ಎಂಬ ಸತ್ಯದ ಗಾಢತೆ ಅರಿಯಬೇಕಿದ್ದರೆ ಉಪವಾಸ, ಪಾರಾಯಣ, ದಾನ-ಧರ್ಮಗಳ ಮೂಲಕ ದೇವನ ಸನ್ನಿಧಾನಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಇಲ್ಲದಿದ್ದರೆ ಸುಮ್ಮನೆ ಹುಟ್ಟಿಕೊಂಡು ಬಿಟ್ಟಿದ್ದೇವೆ ಎಂಬ ಅಜ್ಞಾನದಲ್ಲೇ ಬದುಕೊಂದು ನಿರರ್ಥಕ ವರ್ಷಗಳನ್ನು ಸವೆಸಿ ಸುಮ್ಮನೆ ಸತ್ತು ಹೋಗುತ್ತದೆ. ರಂಜಾನ್ ತಿಂಗಳ ಸಮಸ್ತ ಧಾರ್ಮಿಕ ಪ್ರಕ್ರಿಯೆಗಳ ಹಿಂದೆ ಒಂದು ದೊಡ್ಡ ಉದ್ದೇಶ ಮತ್ತು ಅರ್ಥ ಇದೆ. ಇದನ್ನು ಅರಿತು ಇತರರಿಗೆ ಅರಿಯಿಸುವ ದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ” ಎಂದು ಹೇಳಿದರು.
ಸಭೆಯಲ್ಲಿ ಅಲಿಯಬ್ಬಾ ತೋಟದಮನೆ, ಸೈಯದ್ ಅಬ್ಬಾಸ್, ಹಸನ್ ಸಾಹೇಬ್, ಸೈಯದ್ ರಫೀಖ್, ಹಯಾತ್ ಭಾಷಾ, ಇಕ್ಬಾಲ್ ಬಾಪು, ಆದಮ್ ಸಾಹೇಬ್, ಇಬ್ರಾಹಿಮ್ ಸೈಯದ್, ಅಷ್ಪಾಕ್ ಸಾಬ್ಜನ್, ಅಮಾನ್ ಜಮಾಲ್, ಖಲೀಲ್ ತವಕ್ಕಲ್, ಸೈಯದ್ ಆರೀಫ್, ಮುಹಮ್ಮದ್ ರಫೀಕ್, ಶಬೀರ್ ಸಾಹೇಬ್, ಯೂಸುಫ್ ಸಾಹೇಬ್, ಅಲ್ತಾಫ್ ಆಲಿ, ನಜೀರ್ ಸಯ್ಯದ್, ಗುಡ್ಡೆ ಅಬ್ದುಲ್ ಹಮೀದ್ ಮುಂತಾದವರು ಉಪಸ್ಥಿತರಿದ್ದರು.
















