ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಆಂಪಾರು ಗ್ರಾಮದ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ರಿ. ಅಂಪಾರು ಹಾಗೂ ರೋಟರಿ ಕ್ಲಬ್ ಕುಂದಾಪುರ ಇವರ ಸಹಯೋಗದಲ್ಲಿ ಚಿಗುರು ಮಿಡ್ ಬ್ರೈನ್ ಆಕ್ಟಿವೇಶನ್ ಅಕಾಡೆಮಿ ವತಿಯಿಂದ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಗಾಂಧಾರಿ ವಿದ್ಯೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಶನಿವಾರದಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕರಾದ ಕೋಟೆಬೆಟ್ಟು ಸುರೇಂದ್ರ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಟ್ರಸ್ಟ್‌ನ ಖಜಾಂಚಿ ಹಾಗೂ ಶಾಲಾ ಶೈಕ್ಷಣಿಕ ಸಂಚಾಲಕರು, ರೋಟರಿ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಕೊಡ್ಲಾಡಿ, ಶಾಲಾ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಹಾಗೂ ಚಿಗುರು ಮಿಡ್ ಬ್ರೈನ್ ಆಕ್ಟಿವೇಶನ್ ಅಕಾಡೆಮಿಯ ಸಂಸ್ಥಾಪಕರಾದ ಮಹೇಶ್ ಮತ್ತು ದಿವ್ಯಶ್ರೀ ಮಹೇಶ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಧನ್ವಿ ಹಾಗೂ ಪ್ರಣಮ್ಯ ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು. ಶಾಲಾ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಸಭಿಕರನ್ನು ಸ್ವಾಗತಿಸಿ, ಗ್ರಾಮೀಣ ಭಾಗದ ಮಕ್ಕಳಿಗಾಗಿ ಇಂತಹ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಪೋಷಕರನ್ನು ಅಭಿನಂದಿಸಿದರು. ಸರೋಜಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೀಡಿದ ಗಾಂಧಾರಿ ವಿದ್ಯೆಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪುಟ್ಟ ಮಕ್ಕಳು ಕಣ್ಣುಮುಚ್ಚಿ ನೀಡಿದ ಅದ್ಭುತ ಪ್ರದರ್ಶನವನ್ನು ಕಂಡು ಪೋಷಕರು ಹಾಗೂ ಸಭಿಕರು ಆಶ್ಚರ್ಯ ವ್ಯಕ್ತಪಡಿಸಿದರು. ಮಕ್ಕಳ ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ಪ್ರತಿಭೆಯನ್ನು ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು ಗಾಂಧಾರಿ ವಿದ್ಯೆಯು ಮಕ್ಕಳ ಏಕಾಗ್ರತೆ, ಸ್ಮರಣಶಕ್ತಿ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸುವ ವಿಶಿಷ್ಟ ಭಾರತೀಯ ಪರಂಪರೆಯ ಶಿಕ್ಷಣವಾಗಿದ್ದು, ಇಂತಹ ತರಬೇತಿಗಳು ಗ್ರಾಮೀಣ ಭಾಗದ ಮಕ್ಕಳಿಗೆ ಬಹಳ ಉಪಯುಕ್ತವೆಂದು ಅಭಿಪ್ರಾಯಪಟ್ಟರು.
ಕುಂದಾಪುರ ತಾಲೂಕಿನಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಸಾಂಪ್ರದಾಯಿಕ ಭಾರತೀಯ ಶಿಕ್ಷಣ ಪದ್ಧತಿಯನ್ನು ಪರಿಚಯಿಸಿರುವ ಹೆಗ್ಗಳಿಕೆಗೆ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ (Sanjay Gandhi English Medium School ) ಪಾತ್ರವಾಗಿದ್ದು, ಕಾರ್ಯಕ್ರಮವು ಯಶಸ್ವಿಯಾಗಿ ಹಾಗೂ ಮನಮೋಹಕವಾಗಿ ನೆರವೇರಿತು.
















