ಚಂದ್ರಲೇಖಾ ರಾಕೇಶ್ | ಕುಂದಾಪ್ರ ಡಾಟ್ ಕಾಂ ಲೇಖನ
ಪ್ರತಿ ವರ್ಷದಂತೆ ಪರಿಸರ ಕಾಳಜಿ ಬಗೆಗಿನ ಉದ್ದುದ್ದ ವಾಕ್ಯಗಳು. ಗಿಡ ನೆಡುವ ಸಡಗರ. ಪರಿಸರ ಸಂರಕ್ಷಣೆಯ ಅಣಿಮುತ್ತುಗಳು. ಎಲ್ಲಡೆ ಹಸಿರಿನಿಂದ ಕಂಗೊಳಿಸುವ ಬಣ್ಣ… ಮರು ವರ್ಷದ ಪರಿಸರ ದಿನಾಚರಣೆಯ ಹೊತ್ತಿಗೆ ನಗರವನ್ನು ಹಸಿರು ಕಾನನ ಮಾಡಿಬಿಡುತ್ತೇವೆಂಬ ಧಾವಂತ. ಹಾಗೆ ದಿನಗಳೆದಂತೆ ಆಡಿದ ಮಾತು, ಪರಿಸರದ ಬಗೆಗಿನ ಕಾಳಜಿಯನ್ನೇ ನೆನಪಿಸದ ಜಾಣ ಮರೆವು. ಇದು ನಾವು ಆಚರಿಸುತ್ತಿರುವ ಪರಿಸರ ದಿನಾಚರಣೆ!
ಪರಿಸರ, ಪಕೃತಿ ನಮಗೆ ಯಾವುದನ್ನು ನೀಡಲ್ಲ ಹೇಳಿ. ಎಲ್ಲವನ್ನೂ ನೀಡುತ್ತದೆ. ಅಗಣಿತವಾದ ಅಮೂಲ್ಯ ಕೊಡುಗೆಗಳನ್ನು ನೀಡಿದೆ. ಪ್ರತಿಯೊಂದು ಜೀವ ಸಂಕುಲಕ್ಕೂ ಪ್ರಕೃತಿ ಅಗತ್ಯ, ಅನಿವಾರ್ಯ. ಆದರೆ ನಾವಿಂದು ಪರಿಸರಕ್ಕಾಗಿ, ಏನನ್ನು ಕೊಡುತ್ತಿದೇವೆ ಎಂಬುದನ್ನು ಪ್ರತಿಯೊಬ್ಬರೂ ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆ. ಉತ್ತರ ಮಾತ್ರ ನಗಣ್ಯ. ಕೊನೆ ಪಕ್ಷ ಇರುವ ಪರಿಸರವನ್ನು ರಕ್ಷಿಸಿಕೊಳ್ಳುವ ಬಗ್ಗೆ ಕಿಂಚಿತ್ತೂ ಯೋಚಿಸಲೂ ಆಗದಷ್ಟು ನಿಷ್ಕಾಳಜಿ.
ಹಸಿರನ್ನು ಉಳಿಸಲು ಇದೆಯೆ ನಮಗೆ ಇಚ್ಚಾ ಶಕ್ತಿ?
ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚುತ್ತಿದೆ. ಕಣ್ಣೆತ್ತಿ ನೋಡಿದರೆ ಪರ್ವತದಂತೆ ಎದ್ದು ನಿಂತ, ನಿಲ್ಲುತ್ತಿರುವ ಕಟ್ಟಡಗಳ ಸಮುಚ್ಛಯ, ರಸ್ತೆಯಲ್ಲಿ ತುಂಬಿದ ತ್ಯಾಜ್ಯ, ಗಾಳಿಯಲ್ಲಿ ಮಾಲಿನ್ಯದ ದಟ್ಟ ಹೊಗೆ, ಚರಂಡಿಗಳ ಅವ್ಯವಸ್ಥೆಯಿಂದ ಕೊಳಚೆ ನೀರಿನ ಪ್ರವಾಹ, ವಾಹನಗಳ ಭರಾಟೆ, ಕಿವಿಗಡಚಿಕ್ಕುವ ಶಬ್ದ. ಇವುಗಳಿಂದ ಕಲ್ಮಷವಾದ ದೂಳಿನ ಕಣಗಳ ನಿರಂತರ ಸೇವನೆಯಿಂದ ಒಂದಿಲ್ಲೊಂದು ಕಾಯಿಲೆಗೆ ತುತ್ತಾಗುತ್ತಿರುವ ಮನುಷ್ಯ. ಕಲುಷಿತಗೊಂಡ ನೀರು, ಗಾಳಿ, ಆಹಾರದ ಸೇವನೆಗೆ ನಮ್ಮನ್ನೇ ನಾವು ಒಗ್ಗೂಡಿಸಿಕೊಂಡು ನಡೆಯುತ್ತಿರುವ ಸ್ಥಿತಿ.
ಪ್ರತಿದಿನ ದೊಡ್ಡ ದೊಡ್ಡ ನಗರಿಯನ್ನು ಸೇರುತ್ತಿರುವ ಜನ, ಏರುತ್ತಿರುವ ತ್ಯಾಜ್ಯ, ಇದ್ದಬದ್ದ ಮರಗಳನ್ನು ಕಡಿದು ಕಟ್ಟುತ್ತಿರುವ ವಾಣಿಜ್ಯ ಕಟ್ಟಡಗಳು. ದಿನಂಪ್ರತಿ 1300ದಷ್ಟು ಸೇರಿಕೊಳ್ಳುವ ವಾಹನಗಳು. ಇದು ಹೀಗೆ ಮುಂದುವರಿದರೆ ಮುಂದೊಂದುದಿನ ಮುಂದಿನ ಪೀಳಿಗೆಗಳಿಗೆ ‘ಪರಿಸರ’. ‘ಹಸಿರು’ ಎಂದರೇನು ಎಂಬುದೇ ಗೊತ್ತಾಗದ ಸ್ಥಿತಿ ತಲುಪುವ ಕಾಲ ದೂರವಿಲ್ಲ. ಅಷ್ಟೊತ್ತಿಗೆ ಉಸಿರಾಟಕ್ಕೂ ನಿರ್ಮಲವಾದ ಗಾಳಿ ಇಲ್ಲದೇ ಮನುಷ್ಯ ಪರದಾಡುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ.
ಕಾಂಕ್ರೀಟ್ ಕಾಡಲ್ಲಿ ಹಸಿರಿಗೆಲ್ಲಿ ಉಳಿವು?
ಪ್ರತಿಯೊಬ್ಬ ವ್ಯಕ್ತಿ ಪರಿಸರದ ಅಗತ್ಯತೆ, ಕಾಳಜಿ, ಅರಿವನ್ನು ಹೊಂದಿರುವುದರ ಜೊತೆಗೆ ಪರಿಸರಕ್ಕೆ ತಾನು ನೀಡುತ್ತಿರುವ ಕೊಡುಗೆಯಾದರೂ ಏನು ಎಂಬುದನ್ನು ಮನವರಿಕೆ ಮಾಡಿಕೊಂಡು ಅದರ ಉಳಿವಿಗಾಗಿ ಜಾಗೃತನಾಗಬೇಕಿದೆ. ನಮಗಿರುವ ಒಂದೇ ಒಂದು ಭೂಮಿಯನ್ನು, ಭೂಗ್ರಹವನ್ನು ಉಳಿಸಿಕೊಳ್ಳಲು ಹಿಂದೆಂದೂ ಇಲ್ಲದ ಕಾಳಜಿ ಈಗ ಬಾಯಲ್ಲಿ ಮಾತ್ರ ಪಠಣ ಮಾಡಿದರೆ ಸಾಲದು.
ಇನ್ನಾದರೂ ಮನುಷ್ಯ ಜಾಗೃತನಾಗಿ ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡು ಹಸಿರು ಕ್ರಾಂತಿ ಮಾಡಬೇಕಿದೆ. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅದು ನಿತ್ಯ ನಿರಂತರವಾಗಿರವಾಗಬೇಕಿದೆ. ಹಾಗಾದಾಗ ಮಾತ್ರ ಪರಿಸರ ದಿನಾಚರಣೆಗೊಂದು ಅರ್ಥ ಬರಲಿದೆ. ಪರಿಸರವನ್ನು ಉಳಿಸುವ ಮೂಲಕ ನಾವು ಬದುಕಿ ಬಾಳಿದಂತಾಗುತ್ತದೆ.
[quote font_size=”16″ color=”#085e0c” bgcolor=”#ffffff” bcolor=”#50af01″ arrow=”yes”]ವಿಶ್ವ ಪರಿಸರ ದಿನ
1972ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕು ಎಂದು ನಿರ್ಧರಿಸಲಾಯಿತು. 1973ರಿಂದ ಪರಿಸರ ದಿನಾಚರಣೆ ಪ್ರಾರಂಭವಾಯಿತು. ಅಂತೆಯೇ ಜೂನ್ 5 ವಿಶ್ವ ಪರಿಸರ ದಿನಾಚರಣೆ. ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮ. ಪ್ರತಿ ವರ್ಷ ನಿರ್ಧಿಷ್ಟ ವಸ್ತು ವಿಷಯವನ್ನಾಧರಿಸಿ ಆಚರಿಸಲಾಗುತ್ತದೆ. ಅಂತಯೇ ‘ವನ್ಯಜೀವಿಗಳ ಅಕ್ರಮ ವ್ಯಾಪಾರದ ವಿರುದ್ದ ಹೋರಾಡಿ’ ಎಂಬ ಸಿದ್ಧಾಂತದ ಮೇಲೆ ಈ ಬಾರಿ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.[/quote]















