ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಈ ದೇಶ, ಸಂಸ್ಕೃತಿ, ಧರ್ಮ ಹಾಗೂ ಸಮಾಜಕ್ಕಾಗಿ ತಮ್ಮ ಜೀವನವನ್ನು ಯಾರು ಮುಡಿಪಾಗಿಸಿಡುತ್ತಾರೋ, ಅವರು ಶ್ರೇಷ್ಠ ಸಾಧಕರಾಗಲು ಸಾಧ್ಯ. ದೇಶದ ಗಡಿ ಕಾಯುವ ಸೈನಿಕರು ದೇಶ ರಕ್ಷಣೆಗಾಗಿ ದಿನದ ೨೪ ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ, ಅವರು ನಮ್ಮಿಂದ ಅಪೇಕ್ಷಿಸುವುದು ಕೇವಲ ಅಭಿಮಾನ ಮಾತ್ರ, ದೇಶ ರಕ್ಷಣೆಗಾಗಿ ನಿಂತ ಸೈನಿಕರನ್ನು ನಿತ್ಯ ನೆನೆಯುವ ಕೆಲಸವಾಗಬೇಕು ಎಂದು ಮಾನವ ಹಕ್ಕು ಜಾಗೃತಿ ಸಮಿತಿಯ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಹೇಳಿದರು.
ಬಿಜೂರು ಕಂಚಿಕಾನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಯೋಧ ಕುಟುಂಬಗಳಿಗೆ ಸನ್ಮಾನ ಹಾಗೂ ಯೋಧರಿಗೆ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ರಾಷ್ಟ್ರವನ್ನು ತಾಯಿ ಎಂದು ಪೂಜಿಸುವ ದೇಶ ಎಂದರೆ ಭಾರತವಾಗಿದೆ. ಇಲ್ಲಿ ದೇಶ, ಪ್ರಕೃತಿ, ಗೋವು ಎಲ್ಲರದಲ್ಲೂ ತಾಯಿಯನ್ನು ಕಾಣುವ ಉದಾತ್ತ ಸಂಸ್ಕೃತಿಯಿಂದ ಕೂಡಿದೆ. ಈ ರಾಷ್ಟ್ರ ಉಳಿಯಬೇಕಾದರೇ ಹೋರಾಡುವ ವ್ಯಕ್ತಿ ಅಗತ್ಯವಾಗಿದೆ. ಸೈನಿಕರು ಕ್ಷಣಕ್ಷಣಕ್ಕೂ ಜಾಗೃತರಾಗಿ ದೇಶ ಉಳಿವಿಗಾಗಿ ಹೋರಾಟ ನಡೆಸಿದರೇ, ಮಾತ್ರ ದೇಶವಾಸಿಗಳು ನಿಶ್ಚಿಂತೆಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಇತ್ತೀಚೆಗೆ ದೇಶದಲ್ಲಿ ಸಂಸ್ಕೃತಿ ಹಾಳಾಗುತ್ತಿದೆ, ಮಕ್ಕಳಿಗೆ ಏಳವೆಯಲ್ಲಿಯೇ ಸಂಸ್ಕೃತಿ, ಸಂಸ್ಕಾರ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದ ಅವರು ನಾವು ಕತ್ತರಿಯ ಆರಾಧಕರಾಗದೇ, ಸೂಜಿಯ ಆರಾಧಕರಾಗಿ ಸಮಾಜ ಜೋಡಿಸುವ ಕೆಲಸಮಾಡಬೇಕು ಎಂದರು.
ಹಳೇ ವಿದ್ಯಾರ್ಥಿ ಸಂಘದ ಮಾಜಿ ಕಾರ್ಯದರ್ಶಿ ಪುಂಡಲೀಕ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವೀರಯೋಧ ನರಸಿಂಹ ಶೆಟ್ಟಿ ಬವಳಾಡಿ ಅವರ ಪತ್ನಿ ಸುಮಿತ್ರಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ದಿ. ಆರ್. ಕೆ. ಸಂಜೀವ ರಾವ್ ಅವರ ಪುತ್ರಿ ಪ್ರಮಿಳಾ ಕುಂದಾಪುರ, ಕೋಟ ಗ್ರಾಮ ಕರಣಿಕ ಮಾಧವ ಕೊಠಾರಿ, ಬಿಜೂರು ಗ್ರಾಮ ಕರಣಿಕ ಮಂಜುನಾಥ ಪಾಟೀಲ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿವೃತ್ತ ಇಒ ಸದಾಶಿವ ಉಡುಪ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಜಿ. ಮಂಜುನಾಥ ಶೆಟ್ಟಿ, ಶಾಲಾ ಎಸ್‌ಡಿಎಂಸಿ ಮಾಜಿ ಸದಸ್ಯ ಸತೀಶ ಶೆಟ್ಟಿ, ಉದ್ಯಮಿಗಳಾದ ಶಂಕರ ಭಂಡಾರಕರ್, ರಾಮ ದೇವಾಡಿಗ, ಚಿತ್ತರಂಜನ್ ಉಬ್ಜೇರಿ, ರಾಘವೇಂದ್ರ ಮಲಗದ್ದೆಮನೆ, ವಿದ್ಯಾರ್ಥಿ ನಾಯಕ ಶಿವಪ್ರಸಾದ್, ಪ್ರಶಾಂತ ಆಚಾರ್ಯ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ರವೀಂದ್ರ ಕಿಣಿ ಸ್ವಾಗತಿಸಿ, ಪ್ರಕಾಶ್ ಆಚಾರ್ಯ ಉಪ್ಪುಂದ ಶುಭ ಹಾರೈಸಿದರು. ತಾಪಂ ಸದಸ್ಯ ಜಗದೀಶ ದೇವಾಡಿಗ ನಿರೂಪಿಸಿದರು.