ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಪಾನಿನ ಪ್ರೊಫೆಸರ್ ಸುಮಿಯೋ ಮೊರಿಜಿರಿಯವರು ದಂಪತಿ ಸಮೇತರಾಗಿ ಇತ್ತೀಚೆಗೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಭೇಟಿ ನೀಡಿದರು. ಅವರು ಗೊಂಬೆಯಾಟದ ಬಗ್ಗೆ ಹಲವು ವಿಷಯಗಳನ್ನು ಭಾಸ್ಕರ್ ಕೊಗ್ಗ ಕಾಮತ್ ರವರ ಜೊತೆ ಚರ್ಚಿಸಿದರು.
ಸರಕಾರ ಹಾಗೂ ಇತರ ಯಾವುದೇ ಅಕಾಡೆಮಿಗಳ ಧನ ಸಹಾಯ ಪಡೆಯದೆ ಗೊಂಬೆಯಾಟ ಅಕಾಡೆಮಿಯಲ್ಲಿ ನಿರಂತರ ನಡೆಯುತ್ತಿರುವ ತರಬೇತಿ, ತಿಂಗಳ ಕಾರ್ಯಕ್ರಮ, ಗೊಂಬೆ ಮ್ಯೂಜಿಯಂ, ಗೊಂಬೆಯಾಟ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳ ವೀಡಿಯೋ ವೀಕ್ಷಿಸಿದ್ದಲ್ಲದೆ ಸದಾ ಚಟುವಟಿಕೆಯಲ್ಲಿರುವುದನ್ನು ಕಂಡು ಖುಷಿಗೊಂಡರು. ಉಪ್ಪಿನಕುದ್ರು ಗೊಂಬೆಯಾಟ ತಂಡದ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ಜಪಾನಿನಲ್ಲಿ ನೋಡಿರುವ ನೆನಪನ್ನು ಮೆಲುಕು ಹಾಕಿಕೊಂಡು ಸಂತೋಷ ಪಟ್ಟರು. ಮೊರಿಜಿರಿಯವರು ಗೊಂಬೆಯಾಟ ಅಕಾಡೆಮಿಯ ಕಾಮಗಾರಿ ನಡೆಯುತ್ತಿದ್ದ ವೇಳೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಭವಿಷ್ಯತ್ತಿನಲ್ಲಿ ಗೊಂಬೆಯಾಟ ಅಕಾಡೆಮಿಯೊಂದಿಗೆ ಜಪಾನ್ ನ ಸಹಯೋಗ ನೀಡುವುದರ ಬಗ್ಗೆ ಮಾತುಕತೆ ನಡೆಸಿದರು.