ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂತಾನ ಸತ್ಸಂಪತ್ತಿನ ಜೊತೆಗೆ ಸಂಮೃದ್ಧಿಯು ನಾಗಮಂಡಲ ಸೇವೆಯಿಂದ ದೊರೆಯುತ್ತದೆ. ನಾಡಿಗೂ ಮಂಗಲವಾಗಲಿದೆ. ಯುವಕರು ನಾಗರಾಧನೆಯಂತಹ ಪುಣ್ಯಕಾರ್ಯದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ದೇವಸೇನಾನಿ ಸ್ವಾಮಿ ಸುಬ್ರಹ್ಮಣ್ಯನಂತೆ ರಾಷ್ಟ್ರಸೇನಾನಿಗಳಾಬೇಕಿದೆ ಎಂದು ಒಡೆಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಹಕ್ಲಾಡಿ ಗ್ರಾಮದ ಬಾಳೆಮನೆ ಕುಟುಂಬಸ್ಥರ ಮೂಲನಾಗಬನದಲ್ಲಿ ಜರುಗಿದ ಚತುಃಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನವಿತ್ತರು. ಧರ್ಮವೆಂಬುದು ನಮ್ಮ ಬದುಕಿನ ಸಂವಿಧಾನದಂತೆ. ಧರ್ಮ ಮತ್ತು ಸಂಸ್ಕೃತಿ, ನಡೆ ಮತ್ತು ನುಡಿ ಒಂದು ಧರ್ಮದ ಎರಡು ಮುಖವಿದ್ದಂತೆ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ದೇಶದ ಸಂವಿಧಾನವನ್ನು ಪಾಲಿಸಿದಂತೆ ಧರ್ಮವೆಂಬ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಪಾಲಿಸಿದಾಗ ಬದುಕು ಪರಿಪೂರ್ಣವಾಗುತ್ತದೆ ಎಂದರು.
ಕೃಷಿ ಹಾಗೂ ನಾಗದೇವರಿಗೂ ಹತ್ತಿರದ ಸಂಬಂಧವಿದೆ. ನಾಗ ಕೃಷಿಸ್ನೇಹಿ. ಕೃಷಿ ಕಾರ್ಯವನ್ನು ಹೆಚ್ಚಿಸುವುದರಿಂದ ನಾಗದೇವರ ಕೃಪೆಗೆ ಪಾತ್ರರಾಗುತ್ತೇವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೃಷಿ ಸಂಸ್ಕೃತಿಯನ್ನು ಬೆಳೆಸಬೇಕಿದೆ. ದೇಶ ಬಲಿಷ್ಠವಾಗಲು ಕೃಷಿ ಮತ್ತು ಋಷಿ ಇಬ್ಬರೂ ಬೇಕು. ಕೃಷಿಯಿಂದ ಹಸಿವು ನೀಗಿದರೇ, ಋಷಿಯಿಂದ ಉತ್ತಮ ವಿಚಾರಗಳು ದೊರೆಯುವಂತಾಗುತ್ತದೆ ಎಂದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೃಷ್ಣಮೂರ್ತಿ ಮಂಜ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಸಬ್ಲಾಡಿ ಮಂಜಯ್ಯ ಶೆಟ್ಟಿ, ಶಂಕರ ಹೆಗ್ಡೆ ಹೊಳ್ಮಗೆ, ಮೃದಂಗ ವಿದ್ವಾನ್ ಬಾಬು ರೈ, ಕುಟುಂಬಿಕರಾದ ನರಸಿಂಹ ಶೆಟ್ಟಿ ಹಕ್ಲಾಡಿ ದಂಪತಿಗಳು ಉಪಸ್ಥಿತರಿದ್ದರು.
ನಾಗಮಂಡಲ ಸೇವೆಗಾಗಿ ಶ್ರಮಿಸಿದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರನ್ನು ಗೌರವಿಸಲಾಯಿತು. ನ್ಯಾಯವಾದಿ ಟಿ.ಬಿ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂತೋಷ್‌ಕುಮಾರ್ ಶೆಟ್ಟಿ ಹಕ್ಲಾಡಿ ಧನ್ಯವಾದಗೈದರು. ಪತ್ರಕರ್ತ ಕೆ.ಸಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.