ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆದಾಯಕ್ಕಿಂತ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕೊಲ್ಲೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯ ಅವರ ನಿವಾಸ, ಕಛೇರಿ ಹಾಗೂ ಅವರಿಗೆ ಸಂಬಂಧಿಸಿದ 5 ಕಡೆಯಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕೋಟ್ಯಾಂತರ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿಯನ್ನು ಪತ್ತೆ ಹಚ್ಚಿ ತನಿಕೆ ನಡೆಸುತ್ತಿದ್ದಾರೆ.
ಎಸಿಬಿ ಎಸ್‌ಪಿ ಚೆನ್ನಬಸವಣ್ಣ ಎಸ್. ಎಲ್ ನೇತೃತ್ವದಲ್ಲಿ ಎಕಕಾಲದಲ್ಲಿ ಎಸಿಬಿ ಅಧಿಕಾರಿಗಳು ಕೊಲ್ಲೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯನ ಕೊಲ್ಲೂರಿನಲ್ಲಿರುವ ಕಚೇರಿ ಹಾಗೂ ವಸತಿಗೃಹ, ಕಂಬದಕೋಣೆಯಲ್ಲಿರುವ ಬಂಗ್ಲೆ, ಆಜ್ರಿಯ ಹುಟ್ಟಿದ ಮನೆ, ಕಿರಿಮಂಜೇಶ್ವರದ ಪತ್ನಿ ಮನೆ ದಾಳಿ ನಡೆಸಿ 10ಲಕ್ಷ 8 ಸಾವಿರ ಮೌಲ್ಯದ ಚಿನ್ನಾಭರಣ, 8ಲಕ್ಷ 63 ಸಾವಿರ ರೂ. ನಗದು, ಒಂದು ಮಾರುತಿ ಸ್ವಿಪ್ಟ್ ಕಾರು, ಒಂದು ಮಾರುತಿ 800 ಕಾರು, ಕಂಬದಕೋಣೆಯಲ್ಲಿ ಸುಮಾರು 70ಲಕ್ಷ ರೂ, ಮೌಲ್ಯದ ಬಂಗ್ಲೆ, ನಾಗೂರಿನಲ್ಲಿ 10ಸೆಂಟ್ಸ್ ನಿವೇಶನ, ಆಜ್ರಿಯಲ್ಲಿ 27 ಗುಂಟೆ ನಿವೇಶನ, ಆಜ್ರಿಯಲ್ಲಿ 2 ಕಾಂಪ್ಲೆಕ್ಸ್ ಹಾಗೂ 10 ಬ್ಯಾಂಕ್ ಅಕೌಂಟ್‌ಗಳನ್ನು ಪತ್ತೆ ಹಚ್ಚಿದ್ದಾರೆ.
ಅವರಿಗೆ ಸೇರಿದ 10 ಬ್ಯಾಂಕ್ ಖಾತೆಗಳ ಬಗ್ಗೆ ಪರಿಶೀಲಿಸಬೇಕಾಗಿದೆ, ಅವರ ವೇತನ ಹಾಗೂ ಅವರ ಪತ್ನಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿರುವುದರಿಂದ ಅವರ ವೇತನ ಹೊರತುಪಡಿಸಿದರೆ, ಅನ್ಯ ಆದಾಯವಿಲ್ಲ, ಈ ಬಗ್ಗೆ ಕೂಲಂಕುಷ ತನಿಖೆ ನಡೆಯುತ್ತಿದ್ದು, ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಕಂಡು ಬಂದಲ್ಲಿ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಸಿಬಿ ಎಸ್‌ಪಿ ಚೆನ್ನಬಸವಣ್ಣ ಎಸ್. ಎಲ್ ತಿಳಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಇಬ್ಬರು ಡಿವೈಎಸ್‌ಪಿಗಳಾದ ಅರುಣ ಕುಮಾರ ಕೋಳೂರು, ಸುಧೀರ ಹೆಗ್ಡೆ, ಇನ್ಸ್‌ಪೆಕ್ಟರ್‌ಗಳಾದ ಸತೀಶ ಎಸ್., ರಂಗನಾಥ, ನೀಲಮ್ಮನವರ್, ದಿನಕರ ಶೆಟ್ಟಿ, ಯೋಗೇಶ್ವರ ಕುಮಾರ, ಬ್ರಿಜೇಶ್ ಮ್ಯಾಥ್ಯೂ, ಕೃಷ್ಣಮೂರ್ತಿ, ರಮೇಶ, ರಾಘವೇಂದ್ರ ಹಾಜರಿದ್ದಾರೆ.