ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:15ದಿನಗಳೊಳಗಾಗಿ ಅಪೂರ್ಣ ಯುಜಿಡಿ ಕಾಮಗಾರಿಗಳನ್ನು ಪೂರ್ಣಮಾಡಿ. ಮಳೆಗಾಲ ಸಮೀಪಿಸಿರುವುದರಿಂದ ನಗರದ ವಿವಿದೆಡೆ ಕಟ್ಟಿಂಗ್ ಮಾಡಲಾಗಿರುವ ರಸ್ತೆಗಳನ್ನು ಯಥಾ ಸ್ಥಿತಿಗೆ ತನ್ನಿ. ಮಳೆಗಾಲ ಮುಗಿಯುವವರೆಗೆ ಯಾವ ಸಿಮೆಂಟ್ ರಸ್ತೆಗಳನ್ನು ಕಟ್ಟಿಂಗ್ ಮಾಡಕೂಡದು.
ಕುಂದಾಪುರ ಪುರಸಭೆ ಡಾ. ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಯುಜಿಡಿ ಕಾಮಗಾರಿ ಬಗೆಗೆ ನಡೆದ ಚರ್ಚೆಯಲ್ಲಿ ಪಕ್ಷಭೇದ ಮರೆದು ಸದಸ್ಯರು ಯುಜಿಡಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ವಿವಿಧೆಡೆ ಯುಜಿಡಿ ಕಾಮಗಾರಿಗಳು ಅಪೂರ್ಣಗೊಂಡಿದ್ದು ನಾಗರಿಕರು ತೀವ್ರ ತೊಂದರೆ ಉಂಟಾಗುತ್ತಿದೆ. ಶ್ರೀಘ್ರವೇ ಅಪೂರ್ಣ ಕಾಮಗಾರಿಗಳನ್ನು ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದರು. ರಿಂಗ್ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಸಾಧ್ಯವಿಲ್ಲ ಎನ್ನುತ್ತಿರಿ ಆದರೆ ಖಾಸಗಿ ಜಾಗದಲ್ಲಿ ನಿರ್ಮಾಣಗೊಂಡ ಸಮುಚ್ಚಯದ ಜಾಗದಲ್ಲಿ ಕಾಮಗಾರಿ ನಡೆದಿದೆ ಎಂದು ಆಕ್ಷೇಪಿಸಿದ ಸದಸ್ಯರು, ರಿಂಗ್‌ರೋಡಿನಲ್ಲಿಯೂ ಕಾಮಗಾರಿ ಮಾಡುವಂತೆ ಆಗ್ರಹಿಸಿದರು.
ಸಂಗಮ್ ಪರಿಸರದಲ್ಲಿ ವೆಟ್‌ವೆಲ್ ನಿರ್ಮಾಣಕ್ಕೆ ನದಿ ಪಾತ್ರದ ಸರಕಾರಿ ಸ್ಥಳ ಗುರುತಿಸಿ ಅಂತಿಮಗೊಳಿಸಿದ್ದು, ಯುಜಿಡಿಗೆ ಬಿಟ್ಟುಕೊಡಲಾಗುವುದು ಎಂದರು. ವೆಟ್‌ವೆಲ್ ಹಾಗೂ ಎಸ್‌ಟಿಪಿಗೆ ಖಾಸಗಿ ಜಾಗ ಪಡೆದುಕೊಳ್ಳಲು ಈಗಾಗಲೇ ಹಣ ಮೀಸಲಿಟ್ಟಿದ್ದು ಅನುಮತಿ ದೊರೆತ ಕೂಡಲೇ ಹಣ ವರ್ಗಾವಣೆ ಮಾಡಲಾಗುವುದು ಎಂದರು.
ಒಳಚರಂಡಿ ಇಲಾಖೆ ಸಹಾಯಕ ಅಭಿಯಂತರರು ರಕ್ಷಿತ್ ಪ್ರತಿಕ್ರಿಯಿಸಿ ರಸ್ತೆ ಕಟ್ಟಿಂಗ್, ಪೈಪ್ ಅಳವಡಿಕೆ ಕಾಮಗಾರಿ 29 ಕಿ.ಮೀ ಯಲ್ಲಿ 5 ಕಿ.ಮೀ ಮಾತ್ರ ಬಾಕಿ ಇದೆ. ಕಟ್ಟಿಂಗ್ ಆಗಿರುವ ರಸ್ತೆಗಳನ್ನು ಮಳೆಗಾಲದೊಳಗೆ ಇಂಟರ್‌ಲಾಕ್ ಮತ್ತು ಸಿಮೆಂಟ್ ಬಳಸಿ ಪೂರ್ಣಗೊಳಿಸಲಾಗುವುದು. ಮಳೆಗಾಲದ ಸಂದರ್ಭದಲ್ಲಿ ಯಾವ ರಸ್ತೆಗಳನ್ನು ಕಟ್ಟಿಂಗ್ ಮಾಡಲಾಗುವುದಿಲ್ಲ. ಸಮಸ್ಯೆ ಇದ್ದಲ್ಲಿ ಸದಸ್ಯರು ಗಮನಕ್ಕೆ ತಂದರೆ ಅದನ್ನು ಸರಿಪಡಿಸಲಾಗುವುದು ಎಂದರು.
ಮಳೆಗಾಲದ ತಯಾರಿ, ವಿದ್ಯುತ್ ಸಮಸ್ಯೆ ಹಾಗೂ ಅಜೆಂಡಾದ ಮೇಲೆ ಸಭೆಯಲ್ಲಿ ಚರ್ಚೆ ನಡೆಯಿತು. ಪುರಸಭೆ ಆಡಳಿತ ಪಕ್ಷದ ಸದಸ್ಯರಾದ ಮೋಹನದಾಸ್ ಶೆಣೈ, ಸತೀಶ್ ಶೆಟ್ಟಿ, ರವಿರಾಜ್ ಖಾರ್ವಿ, ಪುಪ್ಪಾ ಶೇಟ್, ವಿರೋಧ ಪಕ್ಷದ ಸದಸ್ಯರಾದ ಕಲಾವತಿ, ಪ್ರಭಾಕರ ಕೋಡಿ, ಶ್ರೀಧರ ಶೇರುಗಾರ್, ಚಂದ್ರಶೇಖರ ಖಾರ್ವಿ, ಸಂದೀಪ್ ಪೂಜಾರಿ ಮೊದಲಾದವರು ಮಾತನಾಡಿದರು. ವಸಂತಿ ಮೋಹನ್‌ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಸಿಲಿ ಕೋಟ್ಯಾನ್, ಮುಖ್ಯಾಧಿಕಾರಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.