ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಡಚಾದ್ರಿ ಬೆಟ್ಟಕ್ಕೆ ಚಾರಣಕ್ಕಾಗಿ ವಾಹನದಲ್ಲಿ ತೆರಳಿದ್ದ ದಂಪತಿಗಳು ಪ್ರಯಾಣಿಸುತ್ತಿದ್ದ ಜೀಪ್ ಕೊಡಚಾದ್ರಿಯಿಂದ ಹಿಂತಿರುಗುತ್ತಿದ್ದಾಗ ಆಕಸ್ಮಿಕವಾಗಿ ಸಂಭವಿಸಿದ ಅಪಘಾತದಲ್ಲಿ ಪತ್ನಿ ಮೃತಪಟ್ಟು ಪತಿ ಗಾಯಗೊಂಡ ದಾರುಣ ಘಟನೆ ಸೋಮವಾರ ನಡೆದಿದೆ.
ಕೇರಳ ರಾಜ್ಯದ ತ್ರಿಶೂರ್ ಮೂಲದ ದಂಪತಿಗಳು ಕೊಲ್ಲೂರು ದೇವರ ದರ್ಶನಕ್ಕೆ ಬಂದಿದ್ದು, ಸೋಮವಾರ ಬೆಳಿಗ್ಗೆ ೭ರ ಸುಮಾರಿಗೆ ಜೀಪಿನಲ್ಲಿ ಕೊಲ್ಲೂರಿನಿಂದ ಕೊಡಚಾದ್ರಿಗೆ ಹೊರಟಿದ್ದರು. ಕೊಡಚಾದ್ರಿಯಲ್ಲಿ ಕೆಲಕಾಲ ತಿರುಗಾಡಿದ ದಂಪತಿಗಳು ಅದೇ ಜೀಪಿನಲ್ಲಿ ಹಿಂತುರುಗುತ್ತಿದ್ದ ವೇಳೆ ಅಕಸ್ಮಿಕವಾಗಿ ಜೀಪಿನ ಮೈನ್ ಆಕ್ಸಿಲ್ ತುಂಡಾಗಿದ್ದು, ಇದರಿಂದ ಹೆದರಿದ ಸವಿತಾ(32) ಕೆಳಕ್ಕೆ ಜಿಗಿದಿದ್ದಾರೆ. ಜಿಗಿಯುವ ರಭಸಕ್ಕೆ ಜೀಪಿನ ಹಿಂಬಾಗ ತಲೆಗೆ ಬಡಿದು ತೀವೃತರಹದ ಗಾಯಗಳಾಗಿದೆ. ತಕ್ಷಣ ಅಲ್ಲಿಂದ ಕುಂದಾಪುರ ಆಸ್ಪತ್ರೆಗೆ ಸಾಗಿಸುವಾಗ ವಂಡ್ಸೆಯ ಬಳಿ ಅಸುನೀಗಿದ್ದಾರೆ. ಪತಿ ಬಿಜುಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದ್ದಾರೆ. ಈ ದಂಪತಿಗಳು ಕಾಸರಗೋಡಿನಲ್ಲಿ ಸರ್ಕಾರಿ ಉದ್ಯೋಗಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ಜೀಪಿನಲ್ಲಿದ್ದ ಸಹ ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯವಾಗಲಿಲ್ಲ. ಹೆಚ್ಚಿನ ವಿವರ ಲಭ್ಯವಿಲ್ಲ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.