ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಕ್ಷಿಣದ ಸುವರ್ಣ ನದಿಯಿಂದ ಉತ್ತರದ ಶಿರಾಲಿ ತನಕ, ಕರಾವಳಿಯಿಂದ ಮಲೆನಾಡಿನ ಮಾಸ್ತಿಕಟ್ಟೆಯ ತನಕ ವ್ಯಾಪಿಸಿಕೊಂಡಿರುವ ಸುಮಾರು ಹದಿನೈದು ಲಕ್ಷಕ್ಕೂ ಹೆಚ್ಚು ಜನರು ಮಾತನಾಡುವ ಕುಂದಾಪ್ರ ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ದೊರಕದಿರುವುದು ಬೇಸರದ ಸಂಗತಿ. ಅಪಾರ ಶಬ್ದ ಭಂಡಾರ ಹಾಗೂ ಸಾಹಿತ್ಯ ಶ್ರೀಮಂತಿಕೆಯನ್ನು ಹೊಂದಿರುವ ಕುಂದಗನ್ನಡಕ್ಕೆ ಅಕಾಡೆಮಿ, ಕುಂದಾಪುರ ಕೇಂದ್ರಿತವಾದ ಅಧ್ಯಯನ ಪೀಠದ ಅಗತ್ಯವಿದೆ ಎಂದು ೧೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಆಶ್ರಯದಲ್ಲಿ ಹಕ್ಲಾಡಿ ಎಸ್‌ಎಸ್ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆ ಬಾಳೆಮನೆ ಭಾಸ್ಕರ ಶೆಟ್ಟಿ ವೇದಿಕೆಯಲ್ಲಿ ಶನಿವಾರ ೧೬ನೇ ತಾಲೂಕು ಸಾಹಿತ್ಯ ಸಮ್ಮೇಳನ ಭೂಮಿಗೀತ ೨೦೧೭ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ತಾಲೂಕಿನ ಮೇಲೆ ತುಳುವಿನ ಪ್ರಭಾವ ಅಷ್ಟಾಗಿ ಇಲ್ಲದಿದ್ದರೂ, ಸಂಶೋಧಕರು ಆತುರದ ನಿರ್ಧಾರದಿಂದ ತುಳುನಾಡಿನ ಸಂಸ್ಕೃತಿಯೇ ಕುಂದಾನಾಡಿನ ಸಂಸ್ಕೃತಿಯೊಂದಿಗೆ ತಳಕು ಹಾಕಿದ್ದಾರೆ. ಆದರೆ ಕುಂದಾಪುರದ ಪ್ರತಿಯೊಂದು ಆಚರಣೆ ಹಾಗೂ ಸಂಪ್ರದಾಯಗಳು ತುಳುವರಿಗಿಂತ ಭಿನ್ನವಾಗಿದೆ. ಕುಂದನಾಡಿಗೆ ತನ್ನದೇ ಆದ ಅಸ್ತಿತ್ವವಿದೆ ಎಂಬುದನ್ನು ಅವರು ಪ್ರತಿಪಾದಿಸಿದ ಅವರು ಕುಂದನಾಡಿನ ಜನರು ಸಾಹಿತ್ಯ, ಶಿಕ್ಷಣ, ಆರೋಗ್ಯ ಹಾಗೂ ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದೆಂಬದನ್ನು ಸ್ಮರಿಸಿದರು.
ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಬೇಕಾದ ಅನಿವಾರ್ಯತೆ ಇದೆ. ನಮಗೆ ದೊರೆಯುವ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವಿಯತೆ ಮಾಯವಾಗಿದೆ. ಶಿಕ್ಷಣ ಮಕ್ಕಳನ್ನು ಅಂಕಗಳಿಕೆಯ ಯಂತ್ರಗನ್ನಾಗಿಸದೇ ಮೌಲ್ಯ ವೃದ್ಧಿಗೆ ಒತ್ತು ಕೊಡಬೇಕು. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತಂದಾಗಲೇ ಬಲಿಷ್ಠ ಭಾರತದ ಕನಸು ನನಸಾಗಲು ಸಾಧ್ಯ ಎಂದರು.
ಕೃಷಿ ಕೂಲಿಯಾಳುಗಳ ಮೇಲೆ ಅವಲಂಬಿತರಾಗದೇ ಯಂತ್ರೋಪಕರಣಗಳನ್ನು ಬಳಸಿ ಸುಲಭದಲ್ಲಿ ಕೃಷಿ ಮಾಡಬಹುದಾಗಿದ್ದರೂ, ಸರಕಾರದ ಹಲವು ಸೌಲಭ್ಯ, ಸಹಕಾರ, ಮಾರ್ಗದರ್ಶನ ಯಥೆಚ್ಚವಾಗಿ ಲಭ್ಯವಿದ್ದರೂ ಕೃಷಿಯ ಮೇಲಿನ ನಿರಾಸಕ್ತಿ ಹೆಚ್ಚಿದೆ. ರೈತರು ಲಾಭನಷ್ಟದ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಇದು ಕೃಷಿಯ ಹಿನ್ನೆಡೆಗೆ ಕಾರಣವಾಗುತ್ತಿದೆ ಎಂದರು.
ಇಂದಿನ ರಾಜಕೀಯ ವ್ಯವಸ್ಥೆ ಕೂಡ ಹಿಂದಿನಂತಿಲ್ಲ. ಹಿಂದಿನ ರಾಜಕಾರಣಿಗಳು ರಾಷ್ಟ್ರಾಭಿವೃದ್ಧಿಗಾಗಿ ದುಡಿದರೆ ಇಂದಿನ ರಾಜಕಾರಣಿಗಳು ದೇಶದ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ. ಗ್ರಾಪಂ ನಿಂದ ಹಿಡಿದು ಸಂಸತ್‌ವರೆಗಿನ ಜನಪ್ರತಿನಿಧಿಗಳಲ್ಲಿ ಕಾಳಜಿ ಇಲ್ಲದಿರುವುದು ವಿಷಾದನೀಯ. ನೌಕರರರಲ್ಲಿಯೂ ಸತ್ಯ ನ್ಯಾಯ ಪ್ರಾಮಾಣಿಕತೆ ಕಳೆದುಹೊಗಿದೆ ಎಂದೆನಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಬರವಣಿಗೆ ಸಾಹಿತ್ಯದ ತಾಯಿ ಬೇರು: ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ನಿವೃತ್ತ ಶಿಕ್ಷಕ ರಾಜೀವ ಶೆಟ್ಟಿ
ಬರವಣಿಗೆ ಸಾಹಿತ್ಯದ ತಾಯಿಬೇರು, ಜಾನಪದ ಬರವಣಿಗೆ ರಹಿತ ಸಾಹಿತ್ಯ. ಭೂಮಿಗೀತ ಸಾಹಿತ್ಯ ಸಮ್ಮೇಳನ ರೈತರ ಬದುಕಿಗೆ ಒತ್ತುಕೊಡಬೇಕು. ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಭಾಗದಲ್ಲಿ ನಡೆಸುವ ಮೂಲಕ ಇಲ್ಲಿಯೂ ಸಾಹಿತ್ಯಾಸಕ್ತಿ ಹೆಚ್ಚಿಸಬೇಕು. ಹೀಗೆ ವಿಶ್ಲೇಷಿಸಿದವರು ಶ್ರೇಣಿ ನಿವೃತ್ತ ಮುಖ್ಯ ಶಿಕ್ಷಕ ರಾಜೀವ ಶೆಟ್ಟಿ.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಭೂಮಿಗೀತ ಹೆಸರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ದುಡಿಯುವ ಮಕ್ಕಳ ಹೋರಾಟದ ಧ್ವನಿಯಾಗಬೇಕು. ಜನಸಾಮಾನ್ಯರೂ ಸಹಿತ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವ ಅವಕಾಶ ನೀಡುವ ಮೂಲಕ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸಿದ ಹೆಗ್ಗಳಿಗೆ ಈ ಸಮ್ಮೇಳನದ್ದಾಗಿದೆ.
ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ, ನಿಟಪೂರ್ವ ಸಮ್ಮೇಳನಾಧ್ಯಕ್ಷ ಸತೀಶ್ ಚಪ್ಪರಿಕೆ, ಪ್ರಧಾನ ಸಂಚಾಲಕ ಸಂತೋಷಕುಮಾರ್ ಶೆಟ್ಟಿ, ತಾ.ಪಂ ಸದಸ್ಯೆ ಇಂದಿರಾ ಶೆಟ್ಟಿ, ಸಮುದಾಯ ಕುಂದಾಪುರ ಅಧ್ಯಕ್ಷ ಉದಯ ಗಾಂವ್ಕರ್, ಧ.ಗ್ರಾ.ಯೋ ಯೋಜನಾಧಿಕಾರಿ ಶಶಿರೇಖಾ, ಧರ್ಮಗುರು ಇಬ್ರಾಹಿಂ ಸಅಡಿ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೂರಾಲು ನಾರಾಯಣ ಮಡಿ ಇದ್ದರು.
ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ಹಕ್ಲಾಡಿ ಎಸ್‌ಎಸ್ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಡಾ. ಕಿಶೋರ್‌ಕುಮಾರ್ ನಿರೂಪಿಸಿದರು. ತಾಲೂಕು ಕೋಶಾಧಿಕಾರಿ ರವೀಂದ್ರ ಎಚ್ ವಂದಿಸಿದರು. ನಾರಾಯಣ ಐತಾಳ್ ನಿರ್ವಹಿಸಿದರು.
ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಸಾಹಿತ್ಯಾಸಕ್ತಿ ಹೆಚ್ಚಿಸಿ ಕನ್ನಡ ನಾಡು ನುಡಿ ಬೆಳೆಸಿ ಪ್ರೋತ್ಸಾಹಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಇದರೊಂದಿಗೆ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಸಾಹಿತ್ಯ ಪರಿಷತ್ ಹೊಸ ಚಿಂತನೆಯನ್ನು ನಡೆಸಬೇಕಿದೆ. ಕನ್ನಡ ಆಸಕ್ತಿ ಹೆಚ್ಚಿಸುವ ಮೂಲಕ ಕನ್ನಡ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನವಾಗಬೇಕು. ಸರಕಾರ ಕೂಡ ಕನ್ನಡ ಭಾಷೆ ಹಾಗೂ ಕನ್ನಡ ಶಾಲೆಯ ಉಳಿವಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. – ಕೆ. ಗೋಪಾಲ ಪೂಜಾರಿ, ಶಾಸಕರು ಬೈಂದೂರು ಕ್ಷೇತ್ರ