Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹೌಸ್ ಆಫ್ ಕಾಮನ್ಸ್‌ನಿಂದ ಹೈದ್ರಾಬಾದ್ ತನಕ ಹಕ್ಕುಚ್ಯುತಿ ಹೋರಾಟ
    ಅಂಕಣ ಬರಹ

    ಹೌಸ್ ಆಫ್ ಕಾಮನ್ಸ್‌ನಿಂದ ಹೈದ್ರಾಬಾದ್ ತನಕ ಹಕ್ಕುಚ್ಯುತಿ ಹೋರಾಟ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಎ.ಎಸ್.ಎನ್ ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ
    ಭಾರತದ ಸದನಗಳು ಹಕ್ಕುಬಾಧ್ಯತೆ ಎಂತ ಪ್ರತಿಪಾದಿಸುತ್ತಿರುವುದರ ಮೂಲ ಇಂಗ್ಲಂಡಿನ ಹೌಸ್ ಆಫ್ ಕಾಮನ್ಸ್‌ನ ಸದಸ್ಯರ ಹಕ್ಕುಗಳನ್ನು ಕಂಡು. ಇಂಗ್ಲಂಡಿನ ಸದಸ್ಯರಿಗೆ ಇಷ್ಟೆಲ್ಲ ಹಕ್ಕುಬಾಧ್ಯತೆಗಳಿರುವಾಗ ನಮಗೇಕಿರಬಾರದು ಎನ್ನುವುದು ಒಂದು ವಾದ. ಈ ಹಕ್ಕುಬಾಧ್ಯತೆ ಎಷ್ಟು ಸೂಕ್ಷ್ಮ ಸಂಗತಿ ಎಂದರೆ ಕೆಲವೊಮ್ಮೆ ಅದರ ಶಕ್ತಿ ಭಸ್ಮಾಸುರನಂತೆಯೂ ಇರಬಲ್ಲುದು.

    Click Here

    Call us

    Click Here

    ಜೈಲಿನಲ್ಲಿ ಅಶ್ಲೀಲ ಸಾಹಿತ್ಯ
    1839ರಲ್ಲಿ ಹನ್ಸಾರ್ಡ್ ಎಂಬಾತ ಇಂಗ್ಲಂಡಿನ ಹೌಸ್ ಆಫ್ ಕಾಮನ್ಸ್‌ನ ಆದೇಶದಂತೆ ಜೈಲುಗಳ ಪರಿವೀಕ್ಷಣೆ (ಇನ್ಸ್‌ಪೆಕ್ಷನ್) ಮಾಡಿ ತನ್ನ ವರದಿ ಸಲ್ಲಿಸಿದ. ಇಲ್ಲಿಗೆ ನಿಂತಿದ್ದರೆ ಏನೂ ಆಗುತ್ತಿರಲಿಲ್ಲ. ಆತ ಅದನ್ನು ಸಾರ್ವಜನಿಕವಾಗಿ ಮುದ್ರಿಸಿ, ಮಾರಿದ. ಈ ವರದಿಯಲ್ಲಿ ಆತ ಬರೆದಿದ್ದ ಒಂದು ಸಂಗತಿ ಸ್ಟಾಕ್ ಡೇಲ್ ಎಂಬ ಪ್ರಕಾಶಕರ ಕೆಂಗಣ್ಣಿಗೆ ಗುರಿಯಾಯಿತು. ವರದಿಯಲ್ಲಿ ಹನ್ಸಾರ್ಡ್, ನ್ಯೂಗೇಟ್ ಎಂಬ ಜೈಲಿನಲ್ಲಿ ಈ ಸ್ಟಾಕ್ ಡೇಲ್ ಪ್ರಕಟಿಸಿದ ಒಂದು ಅಶ್ಲೀಲ ಪುಸ್ತಕ ಸ್ವಚ್ಛಂದವಾಗಿ ಸುತ್ತಾಡುತ್ತಿತ್ತು ಎಂದು ಬರೆದಿದ್ದ. ಸ್ಟಾಕ್ ಡೇಲ್‌ಗೆ ಇದು ಮಾನಹಾನಿಕರ ಎನ್ನಿಸಿತು. ಅವರು ಈ ಹನ್ಸಾರ್ಡ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿಬಿಟ್ಟರು. ಇಲ್ಲಿಂದ ಶುರುವಾಯಿತು ಕಾನೂನಿನ ಕಾದಾಟ.

    ಕಾಮನ್ಸ್ ಕೈ ಹಿಡಿದ ಬ್ರಹ್ಮಕಪಾಲ
    ಹನ್ಸಾರ್ಡ್ ಹೌಸ್ ಆಫ್ ಕಾಮನ್ಸಿನ ಮೊರೆ ಹೊಕ್ಕ. ಅವರು, ಇದು ಸದನದ ಆದೇಶದಂತೆ ನೀನು ಮಾಡಿದ್ದು ಎನ್ನು, ಸದನದ ಆಶ್ರಯದಲ್ಲಿ ನಡೆದ ಕಾರ್ಯವಾದ ಕಾರಣ ನಿನಗೆ ಹಕ್ಕುಬಾಧ್ಯತೆಯ ರಕ್ಷಣೆ ಇದೆ ಎಂದರು. ಇದನ್ನು ನಂಬಿದ ಹನ್ಸಾರ್ಡ್ ಹಾಗೇ ವಾದಿಸಿದ. ಆದರೆ ನ್ಯಾಯಾಲಯ ಆತನ ಸಾಧನೆಯನ್ನು ತಿರಸ್ಕರಿಸಿತು. ಸದನದ ನಿರ್ಣಯವು ಯಾರನ್ನೂ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ ಎಂದಿತು. ಮಾತ್ರವಲ್ಲ ಸದನದ ಹೊರಗಿನ ವ್ಯಕ್ತಿಗಳಿಗೆ ಸಂಬಂಧಿಸಿದ ಸಂಗತಿಗಳಲ್ಲಿ ನ್ಯಾಯಾಲಯವೇ ಹೌಸ್ ಆಫ್ ಕಾಮನ್ಸಿನ ಹಕ್ಕುಬಾಧ್ಯತೆಯ ಅಸ್ತಿತ್ವ, ಪ್ರಮಾಣಗಳನ್ನು ನಿರ್ಧರಿಸುತ್ತದೆ ಎಂದಿತು. ನಿಮ್ಮ ಸದನದೊಳಗೆ ಮಾತ್ರ ನಿಮಗೆ ಹಕ್ಕುಬಾಧ್ಯತೆ ಹೊರತು ಹೊರಗೆ ಅಲ್ಲ ಎಂದು ಹೇಳಿತು. ಹನ್ಸಾರ್ಡ್‌ಗೆ 600 ಪೌಂಡು ದಂಡ ವಿಧಿಸಿತು. ಕದನ ಇಲ್ಲಿಗೆ ಮುಗಿಯಲಿಲ್ಲ.

    ಥಂಡಾ ಆದ ನ್ಯಾಯಾಲಯ
    ನ್ಯಾಯಾಲಯದ ಆದೇಶವನ್ನು ಜ್ಯಾರಿ ಮಾಡಲು ಹೊರಟು ಹನ್ಸಾರ್ಡ್‌ನಿಂದ 600 ಪೌಂಡ್ ದಂಡ ವಸೂಲಿಗೆ ಬಂದು ನಿಂತ ಶೆರೀಫ್. ಆತನ ಕೈಗೆ ದಂಡ ನೀಡಲೇ ಬೇಕಾಯಿತು ಹನ್ಸಾರ್ಡ್‌ಗೆ. ಇದರಿಂದ ಕುಪಿತಗೊಂಡ ಹೌಸ್ ಆಫ್ ಕಾಮನ್ಸ್ ಇವರಿಬ್ಬರೂ ಸದನದ ಹಕ್ಕುಬಾಧ್ಯತೆ ಉಲ್ಲಂಘಿಸಿದ್ದಾರೆಂದು ತೀರ್ಮಾನಿಸಿ ಶೆರೀಫ್‌ನನ್ನೂ, ಹನ್ಸಾರ್ಡ್‌ನನ್ನೂ ಬಂಧಿಯಾಗಿಸಿತು. ಇದನ್ನು ಮುಂದರಿಸಿದರೆ ಸಂಘರ್ಷ ಖಚಿತ ಎಂದು ಅರಿತ ಅಲ್ಲಿಯ ನ್ಯಾಯಾಲಯ ತಣ್ಣಗಾಯಿತು. ಸದನದ ಬಂಧನದಿಂದ ಶೆರೀಫ್‌ನನ್ನು ಬಿಡಿಸಲು ಹಬಿಯಾಸ್ ಕಾರ್ಪಸ್ ರಿಟ್ ಅರ್ಜಿ ಅಂಗೀಕರಿಸಲು ಸಹ ನ್ಯಾಯಾಲಯ ನಿರಾಕರಿಸಿಬಿಟ್ಟಿತು. 1840ರಲ್ಲಿ ಪಾರ್ಲಿಮೆಂಟರಿ ಪೇಪರ‍್ಸ್ ಕಾಯ್ದೆ ತಂದರು. ನ್ಯಾಯಾಲಯದ ತೀರ್ಪನ್ನು ರದ್ದು ಮಾಡಿದ ಈ ಕಾಯ್ದೆ, ಸದನದ ಆದೇಶದ ಪ್ರಕಾರ ಪ್ರಕಟಣೆಗೈದ ಸದಸ್ಯರಲ್ಲದ ಹೊರಗಿನವರಿಗೂ ಹಕ್ಕು ಬಾಧ್ಯತೆಗಳಿದ್ದು, ಮಾನನಷ್ಟ ಮೊಕದ್ದಮೆಯಿಂದ ವಿನಾಯಿತಿ ಇದೆ ಎಂದಿತು.

    ಮಾನವ ಹಕ್ಕುಗಳ ಉಲ್ಲಂಘನೆ
    ನಂತರದ ವರ್ಷಗಳಲ್ಲಿ ಈ ಕಾಯ್ದೆಯ ಪುನರಾವಲೋಕನ ನಡೆಸಿದ ಸಮಿತಿ ಹಕ್ಕುಬಾಧ್ಯತೆ ಉಲ್ಲಂಘಿಸಿದ, ಸದಸ್ಯರಲ್ಲದವರನ್ನು ಶಿಕ್ಷಿಸುವ ಅಧಿಕಾರ ನ್ಯಾಯಾಲಯಕ್ಕೇ ಇರಬೇಕು ವಿನಹ ಸದಸ್ಯರಿಗಿರಬಾರದು ಎಂದಿತು. 1998ರಲ್ಲಿ ಅಂಗೀಕರಿಸಲ್ಪಟ್ಟ ಮಾನವ ಹಕ್ಕು ಕಾಯ್ದೆಯ ಪ್ರಕಾರ ಮತ್ತು ಯೂರೋಪಿಯನ್ ಕನ್ವೆನ್ಷನ್ ಆನ್ ಹ್ಯೂಮನ್ ರೈಟ್ಸ್‌ನ 6 ಮತ್ತು 12ನೇ ಪರಿಚ್ಛೇದಗಳ ಪ್ರಕಾರ ಸದನದ ಹಕ್ಕುಬಾಧ್ಯತೆಗಳು ಒಬ್ಬ ವ್ಯಕ್ತಿಯ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯಯುತ ತನಿಖೆಯ ಹಕ್ಕುಗಳಿಗೆ ಒಳಪಟ್ಟಿರುತ್ತದೆ ಎಂದಿತು. ಹಾಗಾಗಿ ಇದಕ್ಕಾಗಿ ಪ್ರತ್ಯೇಕ ನ್ಯಾಯಮಂಡಳಿ ಇರುವುದು ಉತ್ತಮ ಎಂದ ಅದು ಕ್ರಮ ಕೈಗೊಳ್ಳುವ ಮುನ್ನ ವ್ಯಕ್ತಿಗೆ ನೋಟೀಸು ನೀಡಿ ಆತನ ವಾದ ಕೇಳುವ ಅವಕಾಶ ಇರಬೇಕು ಎಂದಿತು.

    Click here

    Click here

    Click here

    Call us

    Call us

    ಈ ಹಿನ್ನೆಲೆಯಲ್ಲಿ ಭಾರತದ ಸದನಗಳು ಮತ್ತೆ ಮತ್ತೆ ಹಕ್ಕುಬಾಧ್ಯತೆ ಪ್ರಶ್ನೆ ಎತ್ತಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದನ್ನು ಮಾಧ್ಯಮಗಳು ಖಂಡಿಸುತ್ತಲೇ ಬಂದಿವೆ. ಆಂಧ್ರಪ್ರದೇಶದ ಸದನಕ್ಕೂ, ’ಈ ನಾಡು’ ಪತ್ರಿಕೆಗೂ ಉಂಟಾದ ತಿಕ್ಕಾಟ ಈಗ ಇತಿಹಾಸವಾಗಿದೆ.

    ರಾಮೋಜಿ ರಾವ್ ಕಥೆ
    1983 ಮಾರ್ಚ್ 10ರಂದು ‘ಈ ನಾಡು’ ತೆಲುಗು ಪತ್ರಿಕೆ ಆ ಹಿಂದಿನ ದಿನ ಆಂಧ್ರಪ್ರದೇಶದ ವಿಧಾನಪರಿಷತ್ತಿನಲ್ಲಿ ಬಜೆಟ್ ಮಂಡನೆ ವೇಳೆ ನಡೆದ ಗೊಂದಲದ ಬಗ್ಗೆ ವರದಿ ಮಾಡಿತು. ಈ ವರದಿಯ ಶೀರ್ಷಿಕೆಗೆ ಸದನ ಸದಸ್ಯರ ಆಕ್ಷೇಪ. ’ಪೆದ್ದಲ ಗಲಭ’ ಅಂದರೆ ’ದೊಡ್ಡವರ ಗಲಾಟೆ’ ಎಂದು ಬರೆದ ಈ ಶೀರ್ಷಿಕೆಯಲ್ಲಿರುವ ಪದಗಳು ಸದನಕ್ಕೆ ಅವಹೇಳನಕಾರಿ ಎಂದರು ಸದಸ್ಯರುಗಳು. ವಿಷಯ ಸಣ್ಣದಾದರೂ ಸದಸ್ಯರು ಪಟ್ಟು ಸಡಲಿಸಲಿಲ್ಲ. ಹಕ್ಕುಚ್ಯುತಿ ಎಂದು ಬೊಬ್ಬಿಟ್ಟರು. ಹಾಗಾಗಿ ಪ್ರಶ್ನೆ ಹಕ್ಕುಬಾಧ್ಯತಾ ಸಮಿತಿಗೆ ಹೋಯಿತು. ಒಂದು ವರ್ಷದ ಬಳಿಕ ಹಕ್ಕುಬಾಧ್ಯತಾ ಸಮಿತಿ ತನ್ನ ವರದಿ ನೀಡಿ ’ಈ ನಾಡು’ ಪತ್ರಿಕೆ ತಪ್ಪೆಸಗಿದೆ ಎಂದಿತು. ಆ ಶೀರ್ಷಿಕೆಯಿಂದ ಸದನದ ಹಕ್ಕುಚ್ಯುತಿಯಾಗಿದೆ ಎಂದು ಹೇಳಿತು.

    ಅಂತಿಂಥವನಲ್ಲ ಈ ರಾಮೋಜಿ
    ಪತ್ರಿಕೆಯ ಸಂಪಾದಕ ರಾಮೋಜಿರಾವ್ ಭಾರೀ ಕುಳ. ಬರೇ ಪತ್ರಿಕಾ ಸಂಪಾದಕ ಮಾತ್ರವಲ್ಲ, ಈ ರಾಮೋಜಿ ರಾವ್ ಬಹುದೊಡ್ಡ ಉದ್ಯಮಿ – ಬಲು ಪ್ರಭಾವಿ. ಹೈದರಾಬಾದ್‌ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಈತನ ಕಲ್ಪನೆಯ ಕೂಸು. ಈಗ ಜನಪ್ರಿಯವಾಗಿರುವ ’ಈ ಟಿವಿ’ ಕೂಡ ಈತನದ್ದೇ. ಬೇಕಾದಷ್ಟು ಇತರ ಉದ್ಯಮಗಳನ್ನೂ ಹೊಂದಿರುವ ಈತ ಒಂದು ಪಕ್ಷಕ್ಕೆ ಹತ್ತಿರವಾದರೆ ಇನ್ನೊಂದು ಪಕ್ಷಕ್ಕೆ ಸಿಟ್ಟು. ಆಂಧ್ರದ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಕಾಲದಲ್ಲಿ ರಾಮೋಜಿರಾವ್ ಉದ್ಯಮದ ಮೇಲೆ ದಾಳಿಗಳು ಆಗಿದ್ದವು. ಬಹಳಷ್ಟು ಹೊಡೆತ ಬಿದ್ದಿತ್ತು. ಅಂತಹ ಅಸಾಮಾನ್ಯ ಮನುಷ್ಯ ಈ ರಾಮೋಜಿರಾವ್, ಸದನದ ಸಮಿತಿಯ ಮುಂದೆ ಹಾಜರಾಗಲೂ ಇಲ್ಲ, ತನ್ನ ಪತ್ರಿಕೆಯ ಶೀರ್ಷಿಕೆಯನ್ನು ಸಮರ್ಥಿಸಿಕೊಳ್ಳಲೂ ಇಲ್ಲ. ಸಮಿತಿಗೂ ಇದರಿಂದಾಗಿ ಸಿಟ್ಟಾಗಿರಬೇಕು, ಬಿಡಿ. ಹಾಗಾಗಿ ೧೯೮೪ ಮಾರ್ಚ್ ೨೮ರಂದು ರಾಮೋಜಿರಾವ್‌ನನ್ನು ಸದನಕ್ಕೆ ಕರೆಸಿ ’ಛೀಮಾರಿ’ ಹಾಕಲು ಸದನ ನಿರ್ಣಯಿಸಿತು. ಹೈದರಾಬಾದಿನ ಪೋಲೀಸ್ ಕಮಿಷನರಿಗೆ ಸದನದ ಸ್ಪೀಕರ್ ವಾರಂಟು ಕಳುಹಿಸಿದರು. ರಾಮೋಜಿರಾವ್ ಎಲ್ಲಿದ್ದರೂ ಹಿಡಿದು ತಂದು ಅಂದು ಹಾಜರುಪಡಿಸಿ ಎಂದಿತು ಸದನ.

    ಸುಪ್ರೀಂಕೋರ್ಟ್ ತಡೆಯಾಜ್ಞೆ
    ರಾಮೋಜಿರಾವ್ ಸುಮ್ಮನೆ ಕೂಡ್ರುವ ಆಸಾಮಿಯೇ? ಈ ನಿರ್ಣಯ, ವಾರಂಟು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ. ಅಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ಪೀಕರ್ ಆದೇಶಕ್ಕೆ ತಡೆಯಾಜ್ಞೆ ನೀಡಿತು. ’ಈಗ ನಾನು ಏನು ಮಾಡಲಿ?’ ಎಂದು ಪೋಲೀಸ್ ಕಮಿಷನರರು ಸ್ಪೀಕರರನ್ನು ಕೇಳಿದರು. ಮಾರ್ಚ್ 27ರಂದು ಈ ವಿಷಯವನ್ನು ಚರ್ಚಿಸಿದ ಸದನ, ತಮ್ಮ ಸಾರ್ವಭೌಮತೆಯನ್ನು ಸಾರಲು ಮತ್ತೆ ಪೋಲೀಸ್ ಕಮಿಷನರರಿಗೆ ಹೊಸ ಆದೇಶ ನೀಡಿ ರಾಮೋಜಿರಾವ್‌ರನ್ನು ಬಂಧಿಸಿ ತರಲು ಹೇಳಿತು.

    ಮತ್ತೆ ಬಂಧನ ಯತ್ನ
    ಈ ಮಧ್ಯೆ ಪ್ರಕರಣ ವಿಕೋಪಕ್ಕೆ ಹೋಗುವುದು ಎಂದರಿತ ಆಗಿನ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ರಾಷ್ಟ್ರಪತಿಗೆ ಪತ್ರ ಬರೆದು ವಿಷಯವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಸ್ತಾಪಿಸಿ ಎಂದು ಕೋರಿದರು. ತಾನು ಹಾಗೆ ಬರೆದಿರುವುದಾಗಿ ಸದನಕ್ಕೆ ತಿಳಿಸಿಯೂ ಬಿಟ್ಟರು. ಆದರೂ ಮಾರ್ಚ್ 28 ರಂದು ಹೈದರಾಬಾದ್ ಪೋಲೀಸ್ ಕಮಿಷನರರು ಹೊಸ ವಾರಂಟು ಹಿಡಿದುಕೊಂಡು ರಾಮೋಜಿರಾವ್ ಕಛೇರಿಗೆ ಬಂದೇ ಬಿಟ್ಟರು. ಸ್ಪೀಕರರ ಆದೇಶ ತೋರಿಸಿದರು. ’ಬಾ ನನ್ನ ಜತೆ ಸದನಕ್ಕೆ’ ಎಂದರು. ರಾಮೋಜಿರಾವ್ ಹೆದರಲಿಲ್ಲ. ಪೋಲೀಸರ ಜೊತೆ ಹೋಗಲೂ ಇಲ್ಲ. ಸ್ಪೀಕರರ ಆದೇಶಕ್ಕೆ ಮನ್ನಣೆಯನ್ನೇ ನೀಡಲಿಲ್ಲ. ಬದಲು ನಾನು ಬರುವುದಿಲ್ಲ ಎಂದು ಕಮಿಷನರರ ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟರು. ’ಸರ್ವೋಚ್ಚ ನ್ಯಾಯಾಲಯದ ತಡೆಯಾಜ್ಞೆ ಇದೆ’ ಎಂದರು. ಪೋಲೀಸ್ ಕಮಿಷನರ್ ಬೆವರಿ ಬಿಟ್ಟ. ಅತ್ತ ದರಿ, ಇತ್ತ ಪುಲಿ ಎಂಬಂತೆ ಸಂದಿಗ್ಧ ಸ್ಥಿತಿಯಲ್ಲಿದ್ದ ಈ ಪೋಲಿಸ್ ಕಮಿಷನರ್ ಹೇಗೆ ವರ್ತಿಸಿದರೂ ತಾನು ತೊಂದರೆಗೆ ಸಿಕ್ಕಿಹಾಕಿಕೊಳ್ಳುವುದು ಖಂಡಿತ ಎಂದು ಆತನಿಗೆ ಅರಿವಾಯಿತು. ಬುದ್ಧಿವಂತಿಕೆಯಿಂದ ವರ್ತಿಸಿದ. ’ನೀವು ಹೇಳುವುದನ್ನು ಹಾಗೇ ಬರೆದುಕೊಡಿ’ ಎಂದು ರಾಮೋಜಿರಾವ್ ಹತ್ತಿರ ಕೇಳಿದ. ರಾಮೋಜಿರಾವ್‌ಗೆ ಆತನ ಪರಿಸ್ಥಿತಿ ಅರ್ಥವಾಗಿ ಒಂದು ಪತ್ರ ಬರೆದು ಕೊಟ್ಟರು. ’ಸವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನನ್ನನ್ನು ಬಂಧಿಸಬೇಕಾದರೆ ಆ ನ್ಯಾಯಾಲಯದ ತಡೆಯಾಜ್ಞೆಯನ್ನು ರದ್ದುಮಾಡಿಕೊಂಡು ಬನ್ನಿ ಅಥವಾ ಮಾರ್ಪಾಟು ಮಾಡಿಕೊಂಡು ಬನ್ನಿ’ ಎಂದು ಬರೆದರು. ’ಅಯ್ಯಬ್ಬ’ ಎಂದುಕೊಂಡ ಪೋಲೀಸ್ ಕಮಿಷನರ್ ರಾಮೋಜಿರಾವ್ ಬದಲಿಗೆ ಅವರ ಪತ್ರವನ್ನು ತಂದು ಸ್ಪೀಕರರಿಗೆ ಒಪ್ಪಿಸಿದರು !

    ಮುಂದೂಡಿಕೆ ತಂತ್ರ
    ಈ ಸಂಘರ್ಷ, ತಿಕ್ಕಾಟ ಇನ್ನಷ್ಟು ಮುಂದುವರಿಯುತ್ತಲೇ ಇರುತ್ತಿತ್ತೇನೋ. ಇದನ್ನು ಕೊನೆಗಾಣಿಸಿದ್ದು ಆ ರಾಜ್ಯದ ರಾಜ್ಯಪಾಲರು. ಅತ್ಯಂತ ಬುದ್ಧಿವಂತಿಕೆಯಿಂದ, ಎರಡು ದಿನಗಳ ನಂತರ, ರಾಜ್ಯಪಾಲರು ಆ ಸದನದ ಅಧಿವೇಶನವನ್ನೇ ಅನಿರ್ದಿಷ್ಟ ಕಾಲದ ವರೆಗೆ ಮುಂದೂಡಿಬಿಟ್ಟರು. ಒಮ್ಮೆ ಹಾಗೆ ಸದನದ ಅಧಿವೇಶನ ಮುಂದೆ ಹೋಯಿತೆಂದರೆ ಹಕ್ಕುಚ್ಯುತಿ ಪ್ರಸಂಗ ಅಲ್ಲಿಗೆ ಬಿದ್ದುಹೋದಂತೆ. ಹಾಗಾಗಿ ಒಂದು ಅನಾರೋಗ್ಯಕರ ಬೆಳವಣಿಗೆ ಈ ಮುಂದೂಡಿಕೆ ತಂತ್ರದಿಂದ ತಪ್ಪಿಹೋಯಿತು.

    ಅಂತೂ ಈ ಒಂದು ಪ್ರಕರಣದಿಂದಾಗಿ ಸದನಗಳಿಗೆ ಟೀಕೆ ಸಹಿಸಲಾರದ ಅಸಹನೆ, ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಆತುರ, ಉತ್ಸಾಹ ಇದೆ ಎಂಬ ಟೀಕೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಬಂದಿತು. ನಂತರದ ದಿನಗಳಲ್ಲಿ ಬರೇ ಕ್ಷಮಾಪಣೆ ಪಡೆದು ಹಕ್ಕುಚ್ಯುತಿ ಕ್ರಮ ಕೈಬಿಡುವ ರಾಜೀ ಮನೋಭಾವ ಸ್ವಾಗತಾರ್ಹವಾಗಿ ಶುರುವಾಯಿತು.

     

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೋಟ: ಕೆ. ವಾಸುದೇವ ನಾಯಕ್ ಸ್ಮರಣಾರ್ಥ ತಂಗುದಾಣ ಲೋಕಾರ್ಪಣೆ

    27/02/2025

    ಗಂಗೊಳ್ಳಿ: ಮಕ್ಕಳ ಹಬ್ಬ, ಪ್ರತಿಭಾ ಪುರಸ್ಕಾರ

    20/02/2019

    ಜೋಕು ಮಾಡಿದರೆ ಜೋಕೆ !

    18/02/2018

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್‌ಗೆ ಚಿನ್ನದ ಪದಕ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d