ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಪುರಸಭೆಯಲ್ಲಿ ೨೩ ವಾರ್ಡುಗಳ ಪೈಕಿ ೧೪ ವಾರ್ಡುಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಬೀಗಿದ್ದ ಬಿಜೆಪಿ ಪಕ್ಷಕ್ಕೆ ಬಹುಮತ ಬಂದಿದ್ದರೂ ಪುರಸಭೆಯ ಅಧಿಕಾರ ಹಿಡಿಯಲು ವಿಫಲವಾಗಿದೆ. ಬದಲಾದ ಮೀಸಲಾತಿಯಿಂದಾಗಿ ೮ ವಾರ್ಡುಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷಕ್ಕೆ ನಿರಾಯಸವಾಗಿ ಅಧ್ಯಕ್ಷ ಸ್ಥಾನ ದೊರೆಯಲಿದೆ.
ಚುನಾವಣೆ ಫಲಿತಾಂಶ ಪ್ರಕಟವಾದ ದಿನವೇ ಪ್ರಕಟಗೊಂಡಿದ್ದ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿದ್ದರಿಂದಾಗಿ ಸಹಜವಾಗಿ ಬಹುಮತ ಪಡೆದಿದ್ದ ಬಿಜೆಪಿ ಪಾಳಯದಲ್ಲಿ ಅಧ್ಯಕ್ಷಗಾದಿ ಯಾರು ಏರಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಆರು ಮಂದಿ ಅರ್ಹರಿದ್ದರಿಂದ ಯಾರಿಗೆ ಪಟ್ಟ ಒಲಿಯಲಿದೆ ಎಂಬ ಚರ್ಚೆ ಜೋರಾಗಿಯೇ ನಡೆದಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮೀಸಲಾತಿ ಬಂದಿದ್ದರಿಂದಾಗಿ ಯಾವುದೇ ಅವಿರೋಧವಾಗಿ ಇದ್ದ ಒಬ್ಬರೇ ಸದಸ್ಯರು ಆಯ್ಕೆಯಾಗುತ್ತಿದ್ದರು.
ಆದರೆ ಬದಲಾದ ಮೀಸಲಾತಿಯಲ್ಲಿ ಹಿಂದೂಳಿದ ವರ್ಗ ಬಿ ಮಹಿಳೆಗೆ ಅಧ್ಯಕ್ಷ ಸ್ಥಾನ ದೊರೆತಿರುವುದರಿಂದ ಬಿಜೆಪಿ ಪಕ್ಷಕ್ಕೆ ಬಹುಮತವಿದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್‌ನಲ್ಲಿ ಓರ್ವ ಮಹಿಳೆ ಮಾತ್ರ ಈ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಬದಲಾವಣೆಗಳಾಗಿಲ್ಲ.
ಹೊಸ ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರಭಾವತಿ ಜೆ. ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶ್ರೀಕಾಂತ್ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.