ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಚಲಿಸುವ ಬಸ್‌ನಲ್ಲಿಯೇ ವಿಷ ಕುಡಿದು ಗಂಭೀರ ಸ್ಥಿತಿಯಲ್ಲಿ ಇದ್ದ ದಂಪತಿ ಪ್ರಾಣ ಉಳಿಸುವ ಯತ್ನ ನಡೆಸಿದ ಬಸ್‌ನ ಚಾಲಕ ಹಾಗೂ ನಿರ್ವಾಹಕ ಇಬ್ಬರು ಸರ್ಕಾರಿ ಆಸ್ಪತ್ರೆಗೆ ಬಸ್ ತಂದಿರುವ ಘಟನೆ ಗುರುವಾರ ನಡೆಯಿತು.
ಘಟನೆ ವಿವರ : ಕೊಲ್ಲೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ತಮಿಳುನಾಡು ಮೂಲದ ರಾಜ್‌ಕುಮಾರ್ ಹಾಗೂ ಸಂಗೀತಾ ದಂಪತಿ ತಮ್ಮ ಒಂದೂವರೆ ವರ್ಷದ ಗಂಡು ಮಗುವಿನ ಜತೆಗೆ ಪ್ರಯಾಣ ಮಾಡುತ್ತಿದ್ದರು. ಬಸ್ ಹೆಮ್ಮಾಡಿ ಸಮೀಪದ ಕಟ್‌ಬೇಲ್ತೂರು ಬಳಿ ಬರುತ್ತಿದ್ದಂತೆ ದಂಪತಿ ಬಸ್‌ನಲ್ಲಿ ಬಿದ್ದು ನರಳುತ್ತಿದ್ದರು.
ದಂಪತಿ ಸ್ಥಿತಿ ಕಂಡ ಸಹ ಪ್ರಯಾಣಿಕರು ಬಸ್‌ನ ನಿರ್ವಾಹಕ ಸತೀಶ್ ಅವರ ಗಮನಕ್ಕೆ ತಂದು, ಅವರು ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ಅವಲೋಕಿಸಿದ ನಿರ್ವಾಹಕ ಹಾಗೂ ಚಾಲಕ ಇಕ್ಬಾಲ್ ಬಸ್‌ನ್ನು ನೇರವಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ತಂದು ನಿಲ್ಲಿಸಿದರು.
ಕಟ್‌ಬೇಲ್ತೂರಿನಿಂದ ಕುಂದಾಪುರದವರೆಗೆ ಎಲ್ಲಿಯೂ ನಿಲುಗಡೆ ಮಾಡದೇ ಪ್ರಯಾಣಿಕರನ್ನು ಬಸ್‌ನಲ್ಲಿ ಆಸ್ಪತ್ರೆಗೆ ತರಲಾಗಿತ್ತು. ಕುಂದಾಪುರದ ಆಸ್ಪತ್ರೆಯಲ್ಲಿ ದಂಪತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಪುಟ್ಟ ಮಗು ಅಳುತ್ತಿರುವುದು ಎಲ್ಲರಲ್ಲಿ ದುಃಖ ಮಡುಗಟ್ಟಿವಂತೆ ಮಾಡಿದೆ.
ಬಸ್ ಚಾಲಕ ಹಾಗೂ ನಿರ್ವಾಹಕರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವಿಷ ಸೇವನೆ ಮಾಡಿದ ದಂಪತಿ ತಮಿಳುನಾಡಿನ ಚಿನೈ ಮೂಲದವರಾಗಿದ್ದು, ಕೂಲಿ ಕೆಲಸ ಮಾಡುವವರು. ಉಡುಪಿ ಅಂಬಲಪಾಡಿ ನಿವಾಸಿಗಳು ಎಂದು ಮೂಲ ತಿಳಿಸಿವೆ. ಪೊಲೀಸರ ತನಿಖೆಯಿಂದ ಘಟನೆ ವಿವರಗಳು ತಿಳಿದು ಬರಬೇಕಾಗಿದೆ.