ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಾಳಾವರ ಗ್ರಾಮದಲ್ಲಿ ಹುಟ್ಟಿ ಬೆಳೆದು ಕೋಟೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು ನಂತರ ಬೆಂಗಳೂರಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ನೇತ್ರ ತಜ್ಞರಾಗಿ ಹಲವು ಅಂತಾರಾಷ್ಟ್ರೀಯ ಮಟ್ಟದ ಸಾಧನೆಗೈದ ಆದಿ ಚುಂಚನಗಿರಿ ವಿವಿಯ ವೈಸ್ ಚಾನ್ಸಲರ್, ಡಾ. ಎಸ್. ಚಂದ್ರಶೇಖರ ಶೆಟ್ಟಿ ಅವರಿಗೆ ಆಲ್‌ಇಂಡಿಯಾ ಒಪ್ತಲ್ಮೊಲಾಜಿಕಲ್ ಸೊಸೈಟಿ ‘ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್’ ಪ್ರದಾನ ಮಾಡಿ ಗೌರವಿಸಿದೆ.
ನೇತ್ರ ವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ರಾಜ್ಯ ಘಟಕಗಳ ಶಿಫಾರಸುಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತಿದೆ. ಡಾ. ಎಸ್. ಚಂದ್ರಶೇಖರ ಶೆಟ್ಟಿ ಅವರು ಹಲವು ದಶಕಗಳ ಜೀವನದಲ್ಲಿ ವೈದ್ಯಕೀಯ ತಜ್ಞರಾಗಿ, ಸ್ವಯಂ ಸೇವಕರಾಗಿ , ಶಿಕ್ಷಕರಾಗಿ, ಆಡಳಿತಾಧಿಕಾರಿಯಾಗಿ, ಅಂತರಾಷ್ಟ್ರೀಯ ಸಂಘಟನೆಗಳ ಸದಸ್ಯರಾಗಿ, ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಾಗಿ ಅಪಾರ ಸಾಧನೆ ಮಾಡಿದವರು. ಕರ್ನಾಟಕ ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು, ಬೆಂಗಳೂರು ಮೆಡಿಕಲ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ರಾಜೀವ್ ಗಾಂಧಿ ಆರೋಗ್ಯ ವಿವಿಯ ಉಪಕುಲಪತಿ, ದೇವರಾಜ್ ಅರಸ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಉಪಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಆದಿ ಚುಂಚನಗಿರಿ ವಿಶ್ವ ವಿದ್ಯಾಲಯದ ವೈಸ್ ಚಾನ್ಸಲರ್ ಆಗಿದ್ದಾರೆ.
ರೆಡ್‌ಕ್ರಾಸ್, ಲಯನ್ಸ್ ಫೌಂಡೇಶನ್ ಮೂಲಕ ದೇಶ ವಿದೇಶಗಳಲ್ಲೂ ಸೇವೆ ಸಲ್ಲಿಸಿದ್ದ ಅವರು ಡಬ್ಲ್ಯೂಎಚ್‌ಓ, ಕಾಮನ್‌ವೆಲ್ತ್ ಫೌಂಡೇಶನ್ ಮುಂತಾದ ಅಂತಾರಾಷ್ಟ್ರೀಯ ಒಕ್ಕೂಟಗಳ ಸಲಹೆಗಾರರಾಗಿದ್ದಾರೆ. ಮಾಜಿ ಸಚಿವ ಕಾಪು ಸಂಜೀವ ಶೆಟ್ಟಿ ಅವರ ಪುತ್ರ ಹಾಗು ಕುಂದಾಪುರದ ಡಾ. ವೈ. ಸೀತಾರಾಮ್ ಶೆಟ್ಟಿ ಅಳಿಯನಾಗಿರುವ ಇವರು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶೆಟ್ಲ್, ಲಾನ್‌ಟೆನಿಸ್ ಆಟಗಾರರಾಗಿ ಖ್ಯಾತರಾಗಿದ್ದರು.